ಬಳ್ಳಾರಿ: ಜಿಲ್ಲೆಯಲ್ಲಿ ಈ ಬಾರಿಯ ಬಿತ್ತನೆ ಗುರಿ 1,63,754 ಹೆಕ್ಟೇರ್. ಆದರೆ, 1,70,460 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ (ಶೇ 104.10 ರಷ್ಟು). ಇದರೊಂದಿಗೆ ಈ ಬಾರಿ ನಿರೀಕ್ಷೆ ಮೀರಿದ ಕೃಷಿ ಚಟುವಟಿಕೆ ಜಿಲ್ಲೆಯಲ್ಲಿ ನಡೆಯುತ್ತಿದೆ.
ಪೂರ್ವ ಮುಂಗಾರಿನ ಅಬ್ಬರ, ತುಂಗಭದ್ರಾ ಜಲಾಶಯ ಒಂದೇ ಬೆಳೆಗೆ ಮಾತ್ರ ನೀರು ಒದಗಿಸುವ ಅನಿವಾರ್ಯತೆ, ಜುಲೈ ಬಳಿಕ ಮುಂಗಾರು ಮತ್ತಷ್ಟು ಚುರುಕು ಪಡೆದಿದ್ದು, ಈ ಎಲ್ಲ ಕಾರಣಗಳಿಂದ ಈ ಬಾರಿ ಜಿಲ್ಲೆಯಲ್ಲಿ ಗುರಿ ಮೀರಿದ ಬಿತ್ತನೆ ಸಾಧನೆಯಾಗಿದೆ.
2025ರ ಮುಂಗಾರು ಅವಧಿಯಲ್ಲಿ ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾದ ಹಾನಿ ಹಾಗೂ ತೆಗೆದುಕೊಂಡ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು. ಬಳ್ಳಾರಿ ಜಿಲ್ಲಾಧಿಕಾರಿಯೂ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೂ ಈ ಸಭೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು. ಈ ಸಭೆಗೆ ಸಲ್ಲಿಸಲಾದ ಬಳ್ಳಾರಿ ಜಿಲ್ಲೆಯ ವಿವರಗಳಲ್ಲಿ ಈ ಮಾಹಿತಿ ಇದೆ.
ಜಿಲ್ಲೆಯಲ್ಲಿ ಈಗಲೂ 6,884.3 ಮೆಟ್ರಿಕ್ ಟನ್‌ನಷ್ಟು ಯೂರಿಯಾ ಸೇರಿದಂತೆ 44,094.3 ಮೆಟ್ರಿಕ್ ಟನ್‌ನಷ್ಟು ವಿವಿಧ ರಸಗೊಬ್ಬರ ದಾಸ್ತಾನು ಇರುವುದಾಗಿಯೂ ಮುಖ್ಯಮಂತ್ರಿ ಸಭೆಗೆ ಜಿಲ್ಲಾಡಳಿತ ತಿಳಿಸಿದೆ.
ರಿಯಾಯಿತಿ ದರದಲ್ಲಿ ಜಿಲ್ಲೆಯಲ್ಲಿ 3,837 ಕ್ವಿಂಟಾಲ್‌ನಷ್ಟು ವಿವಿಧ ಬೆಳೆಗಳ ಬಿತ್ತನೆ ಬೀಜ ವಿತರಣೆ ಮಾಡಿರುವುದಾಗಿಯೂ ಮಾಹಿತಿ ನೀಡಲಾಗಿದೆ.
ಜಿಲ್ಲೆಯಲ್ಲಿಲ್ಲ ಮಳೆ ಹಾನಿ
ಬಳ್ಳಾರಿ ಜಿಲ್ಲೆಯಲ್ಲಿ ಮಳೆಯೂ ಹದವಾಗಿ ಆಗಿದೆ. ಜಿಲ್ಲೆಯಲ್ಲಿ ಈವರೆಗೆ 25.10 ಸೆಂ.ಮೀ ಮಳೆಯಾಗಬೇಕಿತ್ತು. ಬದಲಾಗಿ 22.70 ಸೆಂ.ಮೀ ಮಳೆ ಸುರಿದಿದೆ. ನಿರೀಕ್ಷಿಸಿದಷ್ಟು ಮಳೆಯಾಗದಿದ್ದರೂ ಗಂಭೀರ ಕೊರತೆಯೇನೂ ಉಂಟಾಗಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಅತೀವೃಷ್ಟಿ ಸಮಸ್ಯೆ ತಲೆದೋರಿಲ್ಲ. ಆದರೂ ಸಂಡೂರು ತಾಲ್ಲೂಕಿನ ನಾರಿಹಳ್ಳ ಜಲಾಶಯದಿಂದ ಹೆಚ್ಚುವರಿ ನೀರು ಹರಿಸಿದಾಗ ಕುರೇಕುಪ್ಪ ಗ್ರಾಮದ ಐವರು ರೈತರ ತೋಟಗಾರಿಕೆ ಬೆಳೆಗಳಾದ ಟೊಮೆಟೊ ಹೀರೇಕಾಯಿ ಹೂಕೋಸು ಬೆಳೆಗಳು ಹಾನಿಯಾಗಿವೆ. ಈ ಸಂಬಂಧ ಸೆ.3ರಂದು ಆಕ್ಷೇಪಣೆ ಕರೆಯಲಾಗಿದ್ದು ಅದಕ್ಕೆ ಶೀಘ್ರದಲ್ಲೇ ಪರಿಹಾರ ಒದಗಿಸುವುದಾಗಿ ಜಿಲ್ಲಾಡಳಿತ ಮುಖ್ಯಮಂತ್ರಿಗೆ ತಿಳಿಸಿದೆ. ಇನ್ನು ಮುಂಗಾರು ಮಳೆಗೆ ಜಿಲ್ಲೆಯಲ್ಲಿ 47 ಮನೆಗಳಿಗೆ (ಮಧ್ಯಮ ಸಣ್ಣ ಪ್ರಮಾಣದ) ಹಾನಿಯಾಗಿದ್ದು ಒಟ್ಟು 14.72 ಲಕ್ಷದಷ್ಟು ಪರಿಹಾರ ವಿತರಿಸಲಾಗಿದೆ. ಎರಡು ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ಮಾನವರ ಜೀವ ಹಾನಿ ಆಗಿಲ್ಲ. ಆದರೆ ಪೂರ್ವ ಮುಂಗಾರು ಅವಧಿಯಲ್ಲಿ ನಾಲ್ವರು ಸಿಡಿಲಿಗೆ ಬಲಿಯಾಗಿದ್ದರು. ಅವರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.