ADVERTISEMENT

ಹೊಸಪೇಟೆ | ‘ಮತ್ತೆ ಬರೊಲ್ಲ, ನಮ್ಮೂರಲ್ಲೇ ಕೆಲಸ ಮಾಡುವೆ’

ಭಾರವಾದ ಹೆಜ್ಜೆಯೊಂದಿಗೆ ಊರುಗಳತ್ತ ಕಾರ್ಮಿಕರ ಪಯಣ; ಜಿಲ್ಲಾಡಳಿತಕ್ಕೆ ಭೇಷ್‌

ಶಶಿಕಾಂತ್ ಎಸ್. ಶೆಂಬೆಳ್ಳಿ
Published 17 ಮೇ 2020, 20:00 IST
Last Updated 17 ಮೇ 2020, 20:00 IST
‘ಶ್ರಮಿಕ್‌’ ರೈಲಿನಲ್ಲಿ ಭಾನುವಾರ ಹೊಸಪೇಟೆ ರೈಲು ನಿಲ್ದಾಣದಿಂದ ಪಯಣ ಬೆಳೆಸಿದ ಉತ್ತರ ಪ್ರದೇಶದ ಕಾರ್ಮಿಕರು ಜಿಲ್ಲಾಡಳಿತದ ಸಿಬ್ಬಂದಿ ಕಡೆಗೆ ಕೈಬೀಸಿ ಕೃತಜ್ಞತೆ ವ್ಯಕ್ತಪಡಿಸಿದರು
‘ಶ್ರಮಿಕ್‌’ ರೈಲಿನಲ್ಲಿ ಭಾನುವಾರ ಹೊಸಪೇಟೆ ರೈಲು ನಿಲ್ದಾಣದಿಂದ ಪಯಣ ಬೆಳೆಸಿದ ಉತ್ತರ ಪ್ರದೇಶದ ಕಾರ್ಮಿಕರು ಜಿಲ್ಲಾಡಳಿತದ ಸಿಬ್ಬಂದಿ ಕಡೆಗೆ ಕೈಬೀಸಿ ಕೃತಜ್ಞತೆ ವ್ಯಕ್ತಪಡಿಸಿದರು   

ಹೊಸಪೇಟೆ: ‘ಮತ್ತೆ ಹಿಂತಿರುಗಿ ಬರೊಲ್ಲ. ನಮ್ಮೂರಲ್ಲೇ ಏನಾದರೂ ಕೆಲಸ ಮಾಡುವೆ’ ಇದು ಉತ್ತರ ಪ್ರದೇಶದ ಹರ್ದೊಯಿ ಪಟ್ಟಣದ ರಾಮದುಲಾರೆ ಅವರ ಮಾತುಗಳು.

ನಗರ ರೈಲು ನಿಲ್ದಾಣದಿಂದ ಭಾನುವಾರ ತನ್ನೂರಿಗೆ ಹಿಂತಿರುಗುವ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಭಾವುಕರಾಗಿ ಮಾತನಾಡಿದರು. ಒಂದೆಡೆ ದುಗುಡ, ಇನ್ನೊಂದೆಡೆ ಕುಟುಂಬದವರನ್ನು ಸೇರುವ ಖುಷಿ ಅವರ ಕಂಗಳಲ್ಲಿ ಇಣುಕುತ್ತಿತ್ತು.

ಐದು ವರ್ಷಗಳಿಂದ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಕುಲ್ಫಿ, ಐಸ್‌ಕ್ರೀಂ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಪತ್ನಿ, ಒಂದೂವರೆ ವರ್ಷದ ಮಗು ಹಾಗೂ ಅವರ ರಕ್ತ ಸಂಬಂಧಿಗಳು ಸೇರಿದಂತೆ ಒಟ್ಟು ಎಂಟು ಜನರೊಂದಿಗೆ ಅವರು ತವರೂರಿಗೆ ವಾಪಸಾದರು.

ADVERTISEMENT

ಏಕಾಏಕಿ ಲಾಕ್‌ಡೌನ್‌ ಘೋಷಿಸಿದ್ದರಿಂದ ಅವರ ಕುಟುಂಬ ತೀವ್ರ ಸಂಕಷ್ಟಗಳನ್ನು ಎದುರಿಸಿತ್ತು. ಅದನ್ನು ನೆನಸಿಕೊಂಡು ಅವರು ಮುಖ ಸಣ್ಣಗೆ ಮಾಡಿದರು. ‘ಕೊರೊನಾದಿಂದ ಏಕಾಏಕಿ ಸರ್ಕಾರ ಲಾಕ್‌ಡೌನ್‌ ಘೋಷಿಸಿತು. ಮನೆಯಲ್ಲಿ ರೇಷನ್‌, ಹಣ ಇರುವವರೆಗೆ ಯಾವುದೇ ತೊಂದರೆ ಆಗಲಿಲ್ಲ. ಆದರೆ, ಎರಡೂ ಖಾಲಿಯಾದ ನಂತರ ಬಹಳ ಸಮಸ್ಯೆಯಾಯಿತು. ಕೆಲವರು ರೇಷನ್‌ ಕೊಟ್ಟರಾದರೂ ಅದು ಬಹಳ ದಿನ ನಡೆಯಲಿಲ್ಲ. ಕೆಲವೊಂದು ದಿನ ಒಂದೊತ್ತು ಊಟ ಮಾಡಿ ದಿನಗಳನ್ನು ದೂಡಿದ್ದೆವು’ ಎಂದು ಹೇಳುತ್ತ ಕಣ್ಣೀರಾದರು.

‘ಈಗ ನಮ್ಮ ಬಳಿ ಖರ್ಚಿಗೂ ಹಣವಿಲ್ಲ. ಇರುವ ಸಾಮಾನುಗಳನ್ನು ಮಾರಾಟ ಮಾಡಿ ರೈಲು ಟಿಕೆಟ್ಟಿನ ಹಣ ಹೊಂದಿಸಿಕೊಂಡಿದ್ದೇವೆ. ಇಂತಹ ಸ್ಥಿತಿ ಮತ್ತೊಮ್ಮೆ ಬರಬಾರದು. ಈಗ ಪುನಃ ಇಲ್ಲಿಗೆ ಬರುವುದಿಲ್ಲ. ನಮ್ಮೂರಲ್ಲೇ ಏನಾದರೂ ಕೆಲಸ ಮಾಡಿಕೊಂಡು ಅಲ್ಲೇ ಇರುತ್ತೇವೆ’ ಎಂದರು.

ರೈಲಿನಲ್ಲಿದ್ದ ಬಹುತೇಕ ಕಾರ್ಮಿಕರು, ‘ಸದ್ಯ ಊರು ಸೇರಿಕೊಂಡರಾಯ್ತು. ಎಲ್ಲವೂ ಸಹಜ ಸ್ಥಿತಿಗೆ ಬಂದ ನಂತರ ವಾಪಸ್‌ ಬರಬೇಕೋ ಅಥವಾ ಬಿಡಬೇಕೋ ಎನ್ನುವ ಬಗ್ಗೆ ತೀರ್ಮಾನಕ್ಕೆ ಬಂದರಾಯ್ತು’ ಎಂಬ ಮಾತುಗಳೊಂದಿಗೆ ರೈಲಿನಲ್ಲಿ ಹೊರಡಲು ಸಿದ್ಧರಾಗಿದ್ದರು.

ಬಾಂಬೆ ಮಿಠಾಯಿ ಮಾರಾಟ ಮಾಡಿ ಜೀವನ ಕಟ್ಟಿಕೊಂಡಿದ್ದ ಮಥುರಾ ನಿವಾಸಿ ಪ್ರಮೋದ ಕುಮಾರ್‌, ‘ಕೆಲಸ ಸಂಪೂರ್ಣ ನಿಂತು ಹೋಗಿದೆ. ನನ್ನ ಹೆಂಡತಿ ಈಗ ಐದು ತಿಂಗಳ ಗರ್ಭೀಣಿ. ಆಕೆ ಸ್ವಲ್ಪ ಆತಂಕಕ್ಕೆ ಒಳಗಾಗಿದ್ದಾಳೆ. ಕೈಯಲ್ಲಿ ಖರ್ಚಿಗೆ ಹಣವೂ ಇಲ್ಲ. ಹೀಗಾಗಿ ಊರು ಸೇರಲು ನಿಶ್ಚಯಿಸಿ ಹೊರಟಿದ್ದೇವೆ’ ಎಂದು ಹೇಳಿದರು.

‘ಎರಡ್ಮೂರು ವರ್ಷಗಳಿಂದ ಹೊಸಪೇಟೆಯಲ್ಲಿರುವೆ. ಇದಕ್ಕೂ ಮೊದಲು ಬೆಂಗಳೂರಿನಲ್ಲಿದ್ದೆ. ಈಗ ಊರು ಸೇರುವುದು ಬಿಟ್ಟರೆ ಮತ್ತೇನೂ ತಲೆಯಲ್ಲಿ ಇಲ್ಲ. ಮುಂದೇನು ಮಾಡಬೇಕು ಎನ್ನುವುದು ಅಲ್ಲಿಗೆ ಹೋದ ನಂತರ ತೀರ್ಮಾನಿಸುವೆ’ ಎಂದರು.

‘ಹತ್ತು ವರ್ಷಗಳಿಂದ ಹೊಸಪೇಟೆಯಲ್ಲಿ ಸ್ಟೀಲ್‌ ನೇಮ್‌ ಪ್ಲೇಟ್‌ ಬರೆದು ಜೀವನ ನಡೆಸುತ್ತಿದ್ದೇವೆ. ಈ ರೀತಿ ಎಂದೂ ನಮಗೆ ತೊಂದರೆ ಆಗಿರಲಿಲ್ಲ. ಈಗ ಸ್ಟೀಲ್‌ ಸಪ್ಲೈ ಇಲ್ಲ. ಕೆಲಸ ನಿಂತು ಹೋಗಿದೆ. ಇಲ್ಲಿದ್ದು ಏನು ಮಾಡೋದು ಎಂದು ತಿಳಿದು ಊರಿಗೆ ಹೊರಟಿದ್ದೇವೆ’ ಎಂದು ಉತ್ತರ ಪ್ರದೇಶ ಬಿಜನೋರ ಪಟ್ಟಣದ ನಿವಾಸಿ ಧರ್ಮೇಂದ್ರ ಸಿಂಗ್‌ ಹೇಳಿದರು.

‘ಲಾಕ್‌ಡೌನ್‌ನಲ್ಲಿ ಹೆಚ್ಚಿನ ತೊಂದರೆ ಆಗಲಿಲ್ಲ. ಆದರೆ, ಕೆಲಸ ನಡೀಲಿಲ್ಲ. ಸಂಕಷ್ಟದ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ಬಹಳ ಕಾಳಜಿ ವಹಿಸಿ ಊರಿಗೆ ಕಳುಹಿಸಿಕೊಡುತ್ತಿದ್ದಾರೆ. ಅವರ ಈ ಋಣ ಎಂದೂ ಮರೆಯುವುದಿಲ್ಲ’ ಎಂದು ಕೃತಜ್ಞತೆಯ ಭಾವದಿಂದ ನುಡಿದರು.

‘ಮೃತ ತಂದೆಯ ಮುಖ ನೋಡಲಿಲ್ಲ’
ಹೊಸಪೇಟೆ:‘ಮಾರ್ಚ್‌ 28ರಂದು ನನ್ನ ತಂದೆ ಅನಾರೋಗ್ಯದಿಂದ ನಿಧನ ಹೊಂದಿದರು. ಎಷ್ಟೇ ಪ್ರಯತ್ನಪಟ್ಟರೂ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಗಲಿಲ್ಲ. ನಂತರ ಅವರ ಕ್ರಿಯೆಯಲ್ಲಾದರೂ ಪಾಲ್ಗೊಂಡರಾಯಿತು ಅಂದುಕೊಂಡಿದ್ದೆ. ಆದರೆ, ಹಿರಿಯ ಮಗನಾಗಿ ಅವರ ಕ್ರಿಯೆ ಕೂಡ ನಡೆಸಿಕೊಡಲು ನನ್ನಿಂದ ಆಗಲಿಲ್ಲ. ಕೊನೆಯ ಬಾರಿ ತಂದೆಯ ಮುಖ ಕೂಡ ನೋಡಲಿಲ್ಲ ಎಂಬ ಕೊರಗಿದೆ’ ಎಂದು ಉತ್ತರ ಪ್ರದೇಶ ಪ್ರಯಾಗರಾಜ್‌ ಪಟ್ಟಣದ ಮದನ್‌ ಮೋಹನ್‌ ಪಾಂಡೆ ಒದ್ದೆ ಕಣ್ಣುಗಳನ್ನು ಒರೆಸಿಕೊಂಡು ಹೇಳಿದರು.

ಪಾಂಡೆ ಅವರು ತಾಲ್ಲೂಕಿನ ಕಡ್ಡಿರಾಂಪುರದ ಹನುಮಾನ ಮಂದಿರದಲ್ಲಿ ಪೂಜಾರಿ ಕೆಲಸ ಮಾಡಿಕೊಂಡಿದ್ದರು. ಭಾನುವಾರ ಹೊಸಪೇಟೆ ರೈಲು ನಿಲ್ದಾಣದಿಂದ ಕೊರಗಿನಲ್ಲಿಯೇ ಅವರು ಪಯಣಕ್ಕೆ ಅಣಿಯಾಗಿದ್ದರು.

‘ದುಡಿಯಲು ಊರು ಬಿಟ್ಟ ಜನಕ್ಕೆ ಅವರೂರಿಗೆ ಕಳುಹಿಸಿದ ಬಳಿಕ ಲಾಕ್‌ಡೌನ್‌ ಘೋಷಿಸಬೇಕಿತ್ತು. ಆದರೆ, ಏಕಾಏಕಿ ಘೋಷಿಸಿದ್ದರಿಂದ ಬಹಳ ಜನರಿಗೆ ತೊಂದರೆಯಾಗಿದೆ. ನಾನು ಎಷ್ಟೇ ಪ್ರಯತ್ನಪಟ್ಟರೂ ಅಪ್ಪನ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಗಲಿಲ್ಲ. ಇಂತಹ ಕಠಿಣ ಸಂದರ್ಭ ಯಾರಿಗೂ ಬರಬಾರದು. ಅನೇಕ ವರ್ಷಗಳ ಹಿಂದೆಯೇ ನನ್ನ ತಾಯಿ ತೀರಿ ಹೋಗಿದ್ದಾಳೆ. ಈಗ ತಂದೆಯಿಲ್ಲದ ಕೊರಗು. ಪುನಃ ವಾಪಸ್‌ ಬರುವುದಿಲ್ಲ. ಅಲ್ಲಿಯೇ ಕುಟುಂಬದವರೊಂದಿಗೆ ಇದ್ದು ಏನಾದರೂ ಕೆಲಸ ಮಾಡುವೆ’ ಎಂದು ಹೇಳಿದರು.

**
ಪರ ಊರಿನ ಜನರನ್ನು ಅವರ ಊರಿಗೆ ಕಳುಹಿಸಿದ ಬಳಿಕ ಲಾಕ್‌ಡೌನ್‌ ಘೋಷಿಸಿದ್ದರೆ ನಮ್ಮಂತಹ ಕಾರ್ಮಿಕರಿಗೆ ತೊಂದರೆ ಆಗುತ್ತಿರಲಿಲ್ಲ.
–ರಾಮದುಲಾರೆ, ಹರ್ದೊಯಿ, ಉತ್ತರ ಪ್ರದೇಶ

**
ಎರಡು ತಿಂಗಳಿಂದ ಕೆಲಸವಿಲ್ಲದೆ ಸುಮ್ಮನೆ ಕೂತಿದ್ದೇವೆ. ಎಲ್ಲವೂ ಮೊದಲಿನಂತೆ ಸಹಜ ಸ್ಥಿತಿಗೆ ಬಂದ ನಂತರ ವಾಪಸ್‌ ಬರುತ್ತೇವೆ.
–ಧರ್ಮೇಂದ್ರ ಸಿಂಗ್‌, ಬಿಜನೋರ್‌, ಉತ್ತರ ಪ್ರದೇಶ

**
ನಮ್ಮಂತಹ ದುಡಿದು ತಿನ್ನುವ ಜನರನ್ನು ಸರ್ಕಾರ ಉಚಿತವಾಗಿ ರೈಲಿನಲ್ಲಿ ಕಳುಹಿಸಿಕೊಡಬೇಕಿತ್ತು. ಇಂತಹ ವೇಳೆಯಲ್ಲೂ ಟಿಕೆಟ್‌ಗೆ ಹಣ ಪಡೆದಿದ್ದು ಸರಿಯಲ್ಲ.
–ಮದನ್‌ ಮೋಹನ್‌ ಪಾಂಡೆ, ಪ್ರಯಾಗರಾಜ್‌, ಉತ್ತರ ಪ್ರದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.