ADVERTISEMENT

ಕಾಂಗ್ರೆಸ್‌ ಮತದಾರರ ಸಮಾವೇಶದಲ್ಲಿ ಅರ್ಧಕ್ಕೆ ಖಾಲಿಯಾದ ಕುರ್ಚಿಗಳು

‘ಜಾತಿ ರಕ್ಷಣೆಗೆ ಶ್ರೀರಾಮುಲು ಯತ್ನ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2018, 16:21 IST
Last Updated 23 ಅಕ್ಟೋಬರ್ 2018, 16:21 IST
ಸಿದ್ದರಾಮಯ್ಯನವರು ಭಾಷಣ ಮಾಡುತ್ತಿದ್ದಾಗ ಡಿ.ಕೆ. ಶಿವಕುಮಾರ ಅವರು ಅವರತ್ತ ನೋಡದೆ ಜನರ ಕಡೆಗೆ ಕೈಮುಗಿದು ಮುಂದಕ್ಕೆ ಹೆಜ್ಜೆ ಹಾಕಿದರು
ಸಿದ್ದರಾಮಯ್ಯನವರು ಭಾಷಣ ಮಾಡುತ್ತಿದ್ದಾಗ ಡಿ.ಕೆ. ಶಿವಕುಮಾರ ಅವರು ಅವರತ್ತ ನೋಡದೆ ಜನರ ಕಡೆಗೆ ಕೈಮುಗಿದು ಮುಂದಕ್ಕೆ ಹೆಜ್ಜೆ ಹಾಕಿದರು   

ಹೊಸಪೇಟೆ: ಲೋಕಸಭೆ ಉಪಚುನಾವಣೆ ನಿಮಿತ್ತ ಕಾಂಗ್ರೆಸ್‌ ಪಕ್ಷದಿಂದ ಮಂಗಳವಾರ ಸಂಜೆ ಇಲ್ಲಿನ ಮುನ್ಸಿಪಲ್‌ ಮೈದಾನದಲ್ಲಿ ಹಮ್ಮಿಕೊಂಡಿದ್ದ ಮತದಾರರ ಸಮಾವೇಶ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಆದರೆ, ಭಾರಿ ಸಂಖ್ಯೆಯಲ್ಲಿ ಬಂದಿದ್ದ ಜನ ಕಾರ್ಯಕ್ರಮದ ಮಧ್ಯದಲ್ಲೇ ತೆರಳಿದ್ದರಿಂದ ಬಹುತೇಕ ಆಸನಗಳು ಖಾಲಿಯಾಗಿದ್ದವು.

ಒಬ್ಬೊಬ್ಬರಾಗಿಯೇ ಜನ ಹೋಗುತ್ತಿರುವುದನ್ನು ಗಮನಿಸಿದ, ಕಾರ್ಯಕ್ರಮದ ಸಂಘಟಕ ಶಾಸಕ ಆನಂದ್‌ ಸಿಂಗ್‌, ‘ದಯವಿಟ್ಟು ಯಾರೂ ಹೋಗಬೇಡಿ. ತಂಗಿ ಕುಳಿತುಕೊಳ್ಳಿ. ಈಗಷ್ಟೇ ಕಾರ್ಯಕ್ರಮ ಆರಂಭವಾಗಿದೆ’ ಎಂದು ಮನವಿ ಮಾಡಿದರು. ಆದರೆ, ಜನ ಅದನ್ನು ಲೆಕ್ಕಿಸದೆ ಅಲ್ಲಿಂದ ನಿರ್ಗಮಿಸಿದರು. ಈ ವೇಳೆ ಆನಂದ್‌ ಸಿಂಗ್‌ ವೇದಿಕೆಯಿಂದ ಕೆಳಗಿಳಿದು, ಜನರ ಬಳಿ ಹೋಗಿ, ‘ಶೀಘ್ರದಲ್ಲೇ ಕಾರ್ಯಕ್ರಮ ಮುಗಿಯುತ್ತದೆ. ಅಲ್ಲಿಯವರೆಗೆ ಸಹಕಾರ ನೀಡಬೇಕು’ ಎಂದು ಕೋರಿದರು.

ಶಾಸಕ ಸತೀಶ ಜಾರಕಿಹೊಳಿ, ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪ, ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಮುಖಂಡ ಎಚ್‌. ಆಂಜನೇಯ ಮಾತನಾಡುವಾಗ ಜನ ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡುತ್ತಿದ್ದರು. ಸಿದ್ದರಾಮಯ್ಯನವರು ಮಾತನಾಡುವ ಸರದಿ ಬಂದಾಗ ಬಹುತೇಕ ಆಸನಗಳು ಖಾಲಿಯಾಗಿದ್ದವು. ಆದರೆ, ಸಿದ್ದರಾಮಯ್ಯನವರು ವ್ಯಂಗ್ಯ ಮಿಶ್ರಿತವಾಗಿ ಬಿಜೆಪಿ ಮುಖಂಡರನ್ನು ಕುಟುಕಿದ ರೀತಿ ಅಲ್ಲಿದ್ದವರು ಹುಮ್ಮಸ್ಸಿನಿಂದ ಕಿರುಚುವಂತೆ ಮಾಡಿತು. ಮೈದಾನದ ಹೊರಗಡೆ ಅಲ್ಲಲ್ಲಿ ನಿಂತುಕೊಂಡಿದ್ದ ಜನ ಮತ್ತೆ ಒಳಗೆ ಬಂದು ಅವರು ಮಾತು ಆಲಿಸಿದರು.

ADVERTISEMENT

‘ಬಿ. ಶ್ರೀರಾಮುಲು ಅವರಿಗೆ 371 (ಜೆ) ಬಗ್ಗೆ ಗೊತ್ತಿಲ್ಲ. ಆದರೆ, 420, 302 ಬಗ್ಗೆ ಗೊತ್ತಿದೆ ಎಂದು ನಾನು ಹೇಳಿದ್ದೆ. ಅದಕ್ಕೆ ಅವರು ವಾಲ್ಮೀಕಿ ಸಮುದಾಯದ ಅವಹೇಳನ ಮಾಡಿದ್ದಾರೆ ಎಂದು ಹೇಳಿ ಜಾತಿಯ ರಕ್ಷಣೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ವಿಧಾನಸೌಧದ ಎದುರು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಪ್ರತಿಷ್ಠಾಪನೆ ಆಗಿದ್ದು ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಎಂಬುದನ್ನು ಅವರು ಮರೆಯಬಾರದು’ ಎಂದರು.

‘ಅಟಲ್‌ ಬಿಹಾರಿ ವಾಜಪೇಯಿ ಹಾಗೂ ನರೇಂದ್ರ ಮೋದಿಯವರ ಅವಧಿಯಲ್ಲಿ ಎಸ್ಸಿ/ಎಸ್ಟಿ ಸಮುದಾಯದ ಏಳಿಗೆಗೆ ₨54 ಸಾವಿರ ಕೋಟಿ ವೆಚ್ಚ ಮಾಡಲಾಗಿದೆ. ಆದರೆ, ನಮ್ಮ ಸರ್ಕಾರ ರಾಜ್ಯದಲ್ಲಿ ಪ್ರತಿ ವರ್ಷ ₨29 ಸಾವಿರ ಕೋಟಿ ಖರ್ಚು ಮಾಡಿತು. ಅಷ್ಟೇ ಅಲ್ಲ, ಎಸ್ಸಿ/ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕೆಂಬ ಕಾಯ್ದೆ ಕೂಡ ತಂದಿದ್ದೇವೆ. ಶ್ರೀರಾಮುಲು ಅವರೇ ನೀವು ಎಸ್ಟಿ ಸಮುದಾಯಕ್ಕೆ ಸೇರಿದವರಾಗಿದ್ದರೂ ಆ ವರ್ಗದವರಿಗಾಗಿ ಏನೂ ಮಾಡಲಿಲ್ಲ’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.