ADVERTISEMENT

ಜಿಲ್ಲಾ ಕೇಂದ್ರವಾದರೂ ವಿಜಯನಗರಕ್ಕೆ ತಪ್ಪದ ಶುದ್ಧ ನೀರಿನ ಗೋಳಾಟ

ನೀರಿನ ಘಟಕ ಮೇಲ್ದರ್ಜೆಗೇರಿದರೂ ಅಶುದ್ಧ ನೀರು ಪೂರೈಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 27 ಆಗಸ್ಟ್ 2021, 19:30 IST
Last Updated 27 ಆಗಸ್ಟ್ 2021, 19:30 IST
ಹೊಸಪೇಟೆಯ ಪಿಂಜಾರ ಓಣಿಯ ಮನೆಯೊಂದರಲ್ಲಿ ಸಂಗ್ರಹಿಸಿರುವ ಅಶುದ್ಧ ನಲ್ಲಿ ನೀರು
ಹೊಸಪೇಟೆಯ ಪಿಂಜಾರ ಓಣಿಯ ಮನೆಯೊಂದರಲ್ಲಿ ಸಂಗ್ರಹಿಸಿರುವ ಅಶುದ್ಧ ನಲ್ಲಿ ನೀರು   

ಹೊಸಪೇಟೆ (ವಿಜಯನಗರ): ತಾಲ್ಲೂಕಿನಿಂದ ಜಿಲ್ಲಾ ಕೇಂದ್ರವಾಗಿ ಬಡ್ತಿ ಪಡೆದಿದ್ದರೂ ನಗರದಲ್ಲಿ ಶುದ್ಧ ಕುಡಿಯುವ ನೀರಿನ ಗೋಳಾಟ ಮುಗಿದಿಲ್ಲ.

ನಗರದ ಎಲ್ಲ ವಾರ್ಡುಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಎರಡು ವರ್ಷಗಳ ಹಿಂದೆ ಅಮರಾವತಿಯಲ್ಲಿನ ಘಟಕವನ್ನು ಮೇಲ್ದರ್ಜೆಗೇರಿಸಲಾಗಿತ್ತು. ಜರ್ಮನ್‌ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿತ್ತು. ಆರಂಭದ ಕೆಲವು ತಿಂಗಳು ಎಲ್ಲ ವಾರ್ಡುಗಳಿಗೆ ಶುದ್ಧ ನೀರನ್ನೇ ಪೂರೈಸಲಾಗಿತ್ತು. ಇನ್ನೇನು ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕು ಬಿಟ್ಟಿತು ಎಂದು ಜನ ಅಂದುಕೊಳ್ಳುತ್ತಿರುವಾಗಲೇ ಮತ್ತೆ ಅಶುದ್ಧ ನೀರು ಪೂರೈಕೆಯಾಗುತ್ತಿದೆ.

ನೀರಿನ ಘಟಕದಿಂದ ಬಹಳ ಸನಿಹದಲ್ಲಿರುವ ಚಿತ್ತವಾಡ್ಗಿ, ಪಿಂಜಾರ ಓಣಿ, ಪಟೇಲ್‌ ನಗರದ ಹೆಚ್ಚಿನ ಮನೆಗಳ ನಲ್ಲಿಗಳಿಗೆ ದುರ್ಗಂಧದಿಂದ ಕೂಡಿರುವ ಮಣ್ಣು ಸೇರಿಕೊಂಡಿರುವ ನೀರು ಪೂರೈಕೆಯಾಗುತ್ತಿದೆ. ಈ ನೀರು ಕುಡಿಯುವುದು ದೂರದ ವಿಚಾರ. ದೈನಂದಿನ ಕೆಲಸಗಳಿಗೆ ಉಪಯೋಗಿಸಲು ಆಗುವುದಿಲ್ಲ. ಈ ಕಾರಣಕ್ಕಾಗಿಯೇ ಜನ ಖಾಸಗಿ ಘಟಕಗಳಿಗೆ ಹೋಗಿ ಹಣ ಕೊಟ್ಟು ಕುಡಿಯಲು ನೀರು ಕೊಂಡೊಯ್ಯುತ್ತಿದ್ದಾರೆ.

ADVERTISEMENT

ರಾಜ್ಯದಲ್ಲಿ ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಶಿವಾನಂದ ಪಾಟೀಲ ಅವರು ಅಮರಾವತಿ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದಾಗ ಅಶುದ್ಧ ನೀರು ಪೂರೈಕೆ ವಿಚಾರ ಸ್ವತಃ ಅವರ ಅನುಭವಕ್ಕೆ ಗಮನಕ್ಕೆ ತಂದಿತ್ತು. ನಗರಸಭೆಯ ಅಂದಿನ ಪೌರಾಯುಕ್ತರನ್ನು ಕರೆದು ತರಾಟೆಗೆ ತೆಗೆದುಕೊಂಡಿದ್ದರು. ಹೀಗಿದ್ದರೂ ಪರಿಸ್ಥಿತಿ ಸರಿ ಹೋಗಿಲ್ಲ. ನೀರಿನ ವಿಷಯವನ್ನು ಸ್ಥಳೀಯರು ನಗರಸಭೆಯವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

‘ಹಲವು ದಿನಗಳಿಂದ ಮಣ್ಣು ಮಿಶ್ರಿತ ನೀರು ಬರುತ್ತಿದೆ ಎಂದು ನಗರಸಭೆಯವರ ಗಮನಕ್ಕೆ ತರಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ. ಕೆಳಹಂತದ ಸಿಬ್ಬಂದಿಯೊಬ್ಬರು ಬಂದು ನೋಡಿಕೊಂಡು ಹೋಗಿದ್ದಾರೆ. ಅಶುದ್ಧ ನೀರು ತೋರಿಸಿದರೆ, ‘ಮಳೆಗಾಲ ಇರುವುದರಿಂದ ಸ್ವಲ್ಪ ಮಣ್ಣು ಬರುತ್ತದೆ. ನೀರು ಸಂಗ್ರಹಿಸಿದ ನಂತರ ಮಣ್ಣು ಕೆಳಭಾಗಕ್ಕೆ ಹೋಗಿ ಸೇರುತ್ತದೆ. ನೀರು ಕುಡಿದರೆ ಯಾವುದೇ ಸಮಸ್ಯೆ ಆಗುವುದಿಲ್ಲ’ ಎಂದು ಬೇಜವಾಬ್ದಾರಿಯಿಂದ ಹೇಳಿ ಹೋಗಿದ್ದಾರೆ’ ಎಂದು ಪಿಂಜಾರ ಓಣಿ ನಿವಾಸಿ ಡಿ.ಎಂ. ರಫೀಕ್‌ ತಿಳಿಸಿದರು.

‘ಕೊರೊನಾ ಸಾಂಕ್ರಾಮಿಕ ಇರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಸ್ವಚ್ಛತೆ, ಶುದ್ಧ ಕುಡಿಯುವ ನೀರು ಬಳಸಬೇಕೆಂದು ಸರ್ಕಾರವೇ ಹೇಳುತ್ತಿದೆ. ಹೀಗಿದ್ದರೂ ಕುಡಿಯಲು ಯೋಗ್ಯವಾದ ನೀರು ಪೂರೈಕೆಯಾಗುತ್ತಿಲ್ಲ. ಹಣವಂತರು ಖಾಸಗಿಯವರ ಬಳಿ ಹಣ ಕೊಟ್ಟು ನೀರು ತರಿಸಿಕೊಳ್ಳುತ್ತಾರೆ. ಬಡವರು, ಕೂಲಿ ಕಾರ್ಮಿಕರು ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

ಈ ಸಂಬಂಧ ನಗರಸಭೆ ಪೌರಾಯುಕ್ತ ಮನ್ಸೂರ್‌ ಅಲಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.