ADVERTISEMENT

ಎಂಜಿನಿಯರಿಂಗ್‌ಗೆ ಟಾಟಾ, ಸ್ವ ಉದ್ಯೋಗಕ್ಕೆ ಸೈ

ನವೋದ್ಯಮಿ

ಸಿ.ಶಿವಾನಂದ
Published 22 ಆಗಸ್ಟ್ 2018, 10:35 IST
Last Updated 22 ಆಗಸ್ಟ್ 2018, 10:35 IST
ಹಗರಿಬೊಮ್ಮನಹಳ್ಳಿಯಲ್ಲಿ ಪೇಪರ್‌ ಪ್ಲೇಟ್‌ ತಯಾರಿಕೆ ಘಟಕದ ಯಂತ್ರದ ಮುಂದೆ ಬಾಗಲಕೋಟೆ ಶಿವಾನಂದ ಮತ್ತು ಸುರೇಖಾ ದಂಪತಿ
ಹಗರಿಬೊಮ್ಮನಹಳ್ಳಿಯಲ್ಲಿ ಪೇಪರ್‌ ಪ್ಲೇಟ್‌ ತಯಾರಿಕೆ ಘಟಕದ ಯಂತ್ರದ ಮುಂದೆ ಬಾಗಲಕೋಟೆ ಶಿವಾನಂದ ಮತ್ತು ಸುರೇಖಾ ದಂಪತಿ   

ಹಗರಿಬೊಮ್ಮನಹಳ್ಳಿ: ಡಿಪ್ಲೋಮಾ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವೀಧರರಾಗಿದ್ದರೂ ಕೆಲಸಕ್ಕೆ ಅರಸಿಕೊಂಡು ಬೇರೆಡೆ ಹೋಗದೆ ಸ್ವಯಂ ಉದ್ಯೋಗದಿಂದ ಆರ್ಥಿಕ ಸ್ವಾವಲಂಬನೆ ಸಾಧಿಸಿದವರು ಪಟ್ಟಣದ ಬಾಗಲಕೋಟೆ ಶಿವಾನಂದ.

ಶಿವಾನಂದ ಅವರು ಅತ್ಯುತ್ತಮ ಗುಣಮಟ್ಟದ ಕಾಗದದ ಪ್ಲೇಟ್‌ಗಳನ್ನು ಸ್ವತಃ ಅವರೇ ತಯಾರಿಸಿ, ಅದಕ್ಕೆ ಮಾರುಕಟ್ಟೆ ಕೂಡ ಸೃಷ್ಟಿಸಿಕೊಂಡಿದ್ದಾರೆ. ಹುಟ್ಟುಹಬ್ಬ, ಸೀಮಂತ, ಮದುವೆ ಸೇರಿದಂತೆ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ಪ್ಲೇಟ್‌ಗಳನ್ನು ಪೂರೈಸುತ್ತಾರೆ. ಜತೆಗೆ ಮಳಿಗೆಗಳಿಗೂ ಮಾರಾಟ ಮಾಡುತ್ತಾರೆ. ಉತ್ತಮ ರೀತಿಯ ಪ್ಲೇಟ್‌ಗಳನ್ನು ತಯಾರಿಸುವುದರಿಂದ ವ್ಯಾಪಾರಿಗಳು ಖುದ್ದು ಅವರಲ್ಲಿಗೆ ಬಂದು ಕೊಂಡೊಯ್ಯುತ್ತಾರೆ. ಹೀಗಾಗಿ ಮಾರುಕಟ್ಟೆ ಚಿಂತೆ ಇಲ್ಲ. ಕಳೆದ ಎರಡು ವರ್ಷಗಳ ಹಿಂದೆ ಆರಂಭಿಸಿದ ಅವರ ಸ್ವ ಉದ್ಯೋಗ ಅವರನ್ನು ಆರ್ಥಿಕವಾಗಿ ಬಲಗೊಳಿಸಿದೆ. ಜತೆಗೆ ಮಾರುಕಟ್ಟೆ ಕೂಡ ವಿಸ್ತರಿಸಿದೆ.

ತಾಲ್ಲೂಕಿನ ಬನ್ನಿಗೋಳದಲ್ಲಿ ಕೆಲಕಾಲ ಕೃಷಿ ಮಾಡಿಕೊಂಡಿದ್ದರು. ಅಂತರ್ಜಲ ಕುಸಿದ ಕಾರಣಕ್ಕೆ ಕೃಷಿಯಿಂದ ದೂರವಾಗಿ ಸ್ವಂತ ಉದ್ದಿಮೆ ಆರಂಭಿಸಲು ನಿರ್ಧರಿಸಿದರು. ಅದಕ್ಕೆ ಅವರ ಪತ್ನಿ ಸುರೇಖಾ ಕೂಡ ಸಾಥ್‌ ನೀಡಿದರು. ಈಗ ಇಬ್ಬರೂ ಸೇರಿಕೊಂಡೆ ಕೆಲಸ ಮಾಡುತ್ತಾರೆ.

ADVERTISEMENT

ಉದ್ದಿಮೆ ಆರಂಭಿಸುವಾಗ ಶಿವಾನಂದ ಅವರ ಬಳಿ ಹೆಚ್ಚಿನ ಹಣ ಇರಲಿಲ್ಲ. ಹೀಗಾಗಿ ಅವರು ₨2.5 ಲಕ್ಷಕ್ಕೆ ಹಳೆಯ ಯಂತ್ರವನ್ನು ಖರೀದಿಸಿ, ಕಾರ್‌ ಶೆಡ್‌ನಲ್ಲಿಯೇ ಘಟಕ ಆರಂಭಿಸಿದರು. ಅವರ ಕೆಲಸಕ್ಕೆ ಪತ್ನಿ ಹಾಗೂ ಕುಟುಂಬದ ಇತರೆ ಸದಸ್ಯರು ಕೈಜೋಡಿಸಿದರು.

ಪರಿಸರಸ್ನೇಹಿ ಹಾಗೂ ರಾಸಾಯನಿಕ ರಹಿತವಾದ ಪ್ಲೇಟ್‌ಗಳನ್ನು ತಯಾರಿಸಿದ್ದರಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಬಂತು. ಉಪಾಹಾರ, ಬಫೆ, ಗೋಬಿ ಮಂಚೂರಿ, ನೂಡಲ್ಸ್‌ ಸೇರಿದಂತೆ ವಿವಿಧ ತಿನಿಸುಗಳಿಗೆ ಒಂದೊಂದು ತರಹದ ಪ್ಲೇಟ್‌ಗಳನ್ನು ತಯಾರಿಸುತ್ತಿದ್ದಾರೆ. ಹಂತ ಹಂತವಾಗಿ ಮಾರುಕಟ್ಟೆ ವಿಸ್ತರಣೆಗೊಂಡು ಮಾದರಿ ಉದ್ಯಮಿಯಾಗಿ ಬದಲಾಗಿದ್ದಾರೆ.

‘ಮದುವೆ ಸೇರಿದಂತೆ ಎಲ್ಲ ರೀತಿಯ ಕಾರ್ಯಕ್ರಮಗಳಿಗೆ ಪ್ಲೇಟ್‌ಗಳನ್ನು ಪೂರೈಸುತ್ತೇವೆ. ಹೂವಿನಹಡಗಲಿ, ಹರಪನಹಳ್ಳಿ ಸೇರಿದಂತೆ ಅನೇಕ ಕಡೆಗಳಿಂದ ಬೇಡಿಕೆ ಸೃಷ್ಟಿಯಾಗಿದೆ. ಬೆಲೆಗಿಂತ ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ಅದಕ್ಕಾಗಿ ಜನ ನಮ್ಮ ಬಳಿ ಬರುತ್ತಾರೆ’ ಎಂದು ಶಿವಾನಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.