ADVERTISEMENT

ಗಣಿ ನಗರಿ ಸಂಪೂರ್ಣ ಸ್ತಬ್ಧ: ರಸ್ತೆಗಿಳಿದವರಿಗೆ ಪೊಲೀಸರಿಂದ ಲಾಠಿ ಏಟು

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 8:05 IST
Last Updated 12 ಜುಲೈ 2020, 8:05 IST
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತ ನಿರ್ಜನವಾಗಿರುವುದು
ಹೊಸಪೇಟೆಯ ಮಹಾತ್ಮ ಗಾಂಧಿ ವೃತ್ತ ನಿರ್ಜನವಾಗಿರುವುದು   

ಹೊಸಪೇಟೆ: ಭಾನುವಾರದ ಕೊರೊನಾ ಲಾಕ್‌ಡೌನ್‌ಗೆ ಗಣಿ ನಗರಿ ಸಂಪೂರ್ಣ ಸ್ತಬ್ಧಗೊಂಡಿದೆ.

ಶನಿವಾರ ರಾತ್ರಿ ಎಂಟು ಗಂಟೆಗೆ ಬಾಗಿಲು ಮುಚ್ಚಿದ್ದ ಮಳಿಗೆಗಳು ಭಾನುವಾರ ಬೆಳಿಗ್ಗೆ ಬಾಗಿಲು ತೆರೆಯಲಿಲ್ಲ. ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳು, ಮ್ಯಾಕ್ಸಿಕ್ಯಾಬ್‌, ಕ್ರೂಸರ್‌, ಆಟೊ ರಿಕ್ಷಾಗಳು ರಸ್ತೆಗೆ ಇಳಿಯಲಿಲ್ಲ. ಜನರ ಓಡಾಟ ಕಂಡು ಬರಲಿಲ್ಲ. ಪ್ರಮುಖ ಹಾಗೂ ಬಡಾವಣೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ನಿರ್ಜನವಾಗಿದ್ದವು.

ಬೆಳಿಗ್ಗೆ ದಿನಪತ್ರಿಕೆ, ಹಾಲು ಎಂದಿನಂತೆ ಪೂರೈಕೆಯಾಯಿತು. ಮಾಂಸದಂಗಡಿಗಳು ಮಧ್ಯಾಹ್ನ 12ರ ವರೆಗೆ ವಹಿವಾಟು ನಡೆಸಿ ಬಾಗಿಲು ಮುಚ್ಚಿದವು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಔಷಧ ಮಳಿಗೆಗಳು, ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ಕೆಲಸ ನಿರ್ವಹಿಸಿದವು.

ADVERTISEMENT

ನಗರದ ಪ್ರಮುಖ ವೃತ್ತಗಳಲ್ಲಿ ಪೊಲೀಸರು ಬೀಡು ಬಿಟ್ಟಿದ್ದರು. ಹೊರಗೆ ಓಡಾಡುತ್ತಿದ್ದವರನ್ನು ವಿಚಾರಿಸಿ ಕಳುಹಿಸುತ್ತಿದ್ದರು. ತುರ್ತು ಸೇವೆ ಹೊರತುಪಡಿಸಿ ಅನಗತ್ಯವಾಗಿ ಹೊರಗೆ ತಿರುಗುತ್ತಿದ್ದವರಿಗೆ ಲಾಠಿ ಏಟು ಕೊಟ್ಟು ಎಚ್ಚರಿಸಿ ಕಳುಹಿಸಿಕೊಡುತ್ತಿದ್ದರು. ರಾಮ ಟಾಕೀಸ್‌, ಬಸ್‌ ನಿಲ್ದಾಣದ ಬಳಿ ಪೊಲೀಸರಿಗೆ ವಾಗ್ವಾದಕ್ಕಿಳಿದಿದ್ದ ಕೆಲವರನ್ನು ವಶಕ್ಕೆ ಪಡೆದರು.

ದ್ವಿಚಕ್ರ ವಾಹನ ಹಾಗೂ ಜೀಪುಗಳಲ್ಲಿ ಗಸ್ತು ತಿರುಗಿದ ಪೊಲೀಸರು, ‘ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬರಬಾರದು’ ಎಂದು ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡುತ್ತಿದ್ದರು. ಸ್ವಯಂಪ್ರೇರಣೆಯಿಂದ ಬಹುತೇಕ ಜನ ಮನೆಯಲ್ಲೇ ಉಳಿದಿರುವ ಕಾರಣ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.