ಕೂಡ್ಲಿಗಿ: ಪಡಿತರ ಕಾರ್ಡ್ ಅಮಾನತು ಆದ ಹಿನ್ನೆಲೆಯಲ್ಲಿ ನೂರಾರು ಪಡಿತರ ಫಲಾನುಭವಿಗಳು ಸೋಮವಾರ ತಾಲ್ಲೂಕು ಕಚೇರಿ ಎದುರು ಆಹಾರ ಸರಬರಾಜು ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಕಾರಣಗಳಿಂದಾಗಿ ತಾಲ್ಲೂಕಿನಲ್ಲಿ 1519 ಕಾರ್ಡುಗಳನ್ನು ಅಮಾನತು ಮಾಡಲಾಗಿದೆ. ಪಡಿತರ ಪಡೆಯಲು ಹೋದಾಗ ಕಾರ್ಡ್ ಈ ಮಾಹಿತಿ ದೊರೆತಿದೆ. ಯಾಕೆ ಹೀಗೆ ಮಾಡಲಾಗಿದೆ ಎಂಬ ಮಾಹಿತಿ ನೀಡಿ ಎಂದು ನೂರಾರು ಜನರು ಅಧಿಕಾರಿಗಳನ್ನು ಆಗ್ರಹಿಸಿದರು.
‘ಸರ್ಕಾರ ಗ್ಯಾರಂಟಿ ಯೋಜನೆಗಳಿಂದ ನಮ್ಮನ್ನು ಹೊರಗಿಡಲು ಈ ರೀತಿ ಮಾಡಿದೆ. ನನಗೆ ಯಾವುದೇ ಹೊಲ ಇಲ್ಲ. ಆದರೂ ಕಾರ್ಡ್ ರದ್ದಾಗಿದೆ. ಬಡವರಾದ ನಾವು ಹೇಗೆ ಬದುಕು ನಡೆಸಬೇಕು. ಕೂಡಲೇ ನಮಗೆ ಪಡಿತರ ಚೀಟಿ ನೀಡಬೇಕು’ ಎಂದು ಫಲಾನುಭವಿಯೊಬ್ಬರು ಆಗ್ರಹಿಸಿದರು.
ಅಹವಾಲು ಸ್ವೀಕರಿಸಿ ಮಾತನಾಡಿದ ಗ್ರೇಡ್-2 ತಹಶೀಲ್ದಾರ್ ನೇತ್ರಾವತಿ, ‘ತಾಲ್ಲೂಕಿನಲ್ಲಿ ಯಾವ ಪಡಿತರ ಚೀಟಿಯನ್ನೂ ರದ್ದು ಮಾಡಿಲ್ಲ. ಆದರೆ ಅಮಾನತು ಮಾಡಲಾಗಿದೆ. ಅಮಾನತಾದ ಕಾರ್ಡುಗಳನ್ನು ಪುನರ್ ಪರಿಶೀಲಿಸಿ, ಅರ್ಹ ಫಲಾನುಭವಿಗಳ ಕಾರ್ಡುಗಳನ್ನು ಚಾಲನೆ ಮಾಡಲು ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆಯ ಉಪ ನಿರ್ದೇಶಕರು ಸೂಚನೆ ನೀಡಿದ್ದಾರೆ. ಆದರೆ ತಕ್ಷಣಕ್ಕೆ ಅಕ್ಕಿ ನೀಡುವಂತಹ ನಿಮ್ಮ ಬೇಡಿಕೆ ಬಗ್ಗೆ ಜಿಲ್ಲಾಧಿಕಾರಿ ಹಾಗೂ ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.
ಆಹಾರ ಸರಬರಾಜು ಇಲಾಖೆಯ ಶಿರೆಸ್ತೇದಾರ್ ಅಜಿತ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.