
ತೆಕ್ಕಲಕೋಟೆ (ಬಳ್ಳಾರಿ ಜಿಲ್ಲೆ): ಆಂಧ್ರಪ್ರದೇಶದ ಬೊಮ್ಮನ ಹಾಳ್ ಠಾಣಾ ವ್ಯಾಪ್ತಿಯಲ್ಲಿ ಕಾಣೆಯಾಗಿದ್ದ ಇಬ್ಬರು ಬಾಲಕಿಯರಲ್ಲಿ ಒಬ್ಬಳ ಶವ ಜಿಲ್ಲೆಯ ಸಿರಿಗೇರಿ ಬಳಿ ತುಂಗಭದ್ರಾ ಕಾಲುವೆಯಲ್ಲಿ ಪತ್ತೆಯಾಗಿದೆ.
ಅನಸೂಯ (12) ಮೃತ ಬಾಲಕಿ. ಸಿಂಧು (12) ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.
ಬೊಮ್ಮನ ಹಾಳ್ ಬಳಿಯ ನೇಮಕಲ್ ಗ್ರಾಮದ ನಿವಾಸಿ ಕಲ್ಲಪ್ಪ ಎಂಬುವವರು 5 ಮತ್ತು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ಭಾನುವಾರ ಬಳ್ಳಾರಿ ಜಿಲ್ಲೆಯ ಸಿರಿಗೇರಿ ಬಳಿಗೆ ಕರೆತಂದಿದ್ದ ಎನ್ನಲಾಗಿದೆ. ಕಲ್ಲಪ್ಪ ಒಬ್ಬನೇ ಮರಳಿದ್ದನ್ನು ಕಂಡು ಮನೆಯವರು ಅಲ್ಲಿನ ಠಾಣೆಗೆ ದೂರು ನೀಡಿದ್ದರು.
ಆತನನ್ನು ಕರೆತಂದು ಸಿರಿಗೇರಿ ಕ್ರಾಸ್ ಬಳಿಯ ತುಂಗಭದ್ರಾ ಬಲದಂಡೆ ಕಾಲುವೆ (ಎಲ್ ಎಲ್ ಸಿ) ಯ ಬಳಿ ಮಂಗಳವಾರ ಶೋಧ ನಡೆಸಲಾಗಿತ್ತು. ಈ ವೇಳೆ, ಅನಸೂಯ ಶವ ಪತ್ತೆಯಾಗಿದೆ. ಮತ್ತೊಬ್ಬ ಬಾಲಕಿಯ ಪತ್ತೆಗಾಗಿ ಕರ್ನಾಟಕ ಮತ್ತು ಆಂಧ್ರ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.