ADVERTISEMENT

ಬಳ್ಳಾರಿ | ಪಕ್ಷೇತರ ಅಭ್ಯರ್ಥಿಗೆ DC ಬೆದರಿಕೆ ಆರೋಪ: ಚುನಾವಣಾ.ಆಯೋಗಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 9:21 IST
Last Updated 23 ಏಪ್ರಿಲ್ 2024, 9:21 IST
ಅರುಣ್‌ ಕುಮಾರ್ ಹಿರೇಹಾಳ್‌, ಪಕ್ಷೇತರ ಅಭ್ಯರ್ಥಿ 
ಅರುಣ್‌ ಕುಮಾರ್ ಹಿರೇಹಾಳ್‌, ಪಕ್ಷೇತರ ಅಭ್ಯರ್ಥಿ    

ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಅರುಣ್‌ ಹಿರೇಹಾಳ್‌ ಎಂಬುವರಿಗೆ ಕ್ಷೇತ್ರದ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರು ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.

ಈ ಸಂಬಂಧ ಅಭ್ಯರ್ಥಿ ಅರುಣ್‌ ಅವರು ಚುನಾವಣಾಧಿಕಾರಿ ಮಿಶ್ರಾ ಅವರ ವಿರುದ್ಧ ಚುನಾವಣಾ ಆಯೋಗ, ಹೈಕೋರ್ಟ್‌ ರಿಜಿಸ್ಟ್ರಾರ್‌, ಸರ್ಕಾರದ ಮುಖ್ಯಕಾರ್ಯದರ್ಶಿಗೆ ಇ–ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ.    

ಆರುಣ್‌ ಆರೋಪವನ್ನು ಚುನಾವಣಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಮತ್ತು ಸ್ಥಳದಲ್ಲೇ ಇದ್ದರು ಎನ್ನಲಾದ ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್‌ ಝುಬೇರ ನಿರಾಕರಿಸಿದ್ದಾರೆ. 

ADVERTISEMENT

ಅಭ್ಯರ್ಥಿಗಳ ನಾಮಪತ್ರ ಪರಿಶೀಲನೆ ಕಳೆದ ಶನಿವಾರ ನಡೆದಿತ್ತು. ಈ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ನಾಮಪತ್ರದಲ್ಲಿನ ನ್ಯೂನತೆಯನ್ನು ಬಿಜೆಪಿ ಅಭ್ಯರ್ಥಿಯ ವಕೀಲರು ಚುನಾವಣಾಧಿಕಾರಿ ಗಮನಕ್ಕೆ ತಂದಿದ್ದರು. ಅವರ ದೂರನ್ನು ಪರಿಶೀಲಿಸಿದ್ದ ಚುನಾವಣಾಧಿಕಾರಿ ನಾಮಪತ್ರ ಕ್ರಮಬದ್ಧವಾಗಿದೆ ಎಂದು ಅದೇ ದಿನ ಘೋಷಿಸಿದ್ದರು. ಈ ಘೋಷಣೆಗೆ ಸಂಬಂಧಿಸಿದ ಆದೇಶ ಪತ್ರ ಮತ್ತು ಯಾವ ನೆಲೆಗಟ್ಟಿನಲ್ಲಿ ನಾಮಪತ್ರವನ್ನು ಕ್ರಮ ಬದ್ಧ ಎಂದು ಘೋಷಿಸಲಾಗಿದೆ ಎಂದು ತಿಳಿಸುವಂತೆ ಹಿರೇಹಾಳ್‌ ಚುನಾವಣಾಧಿಕಾರಿಗೆ ಮನವಿ ಮಾಡಿದ್ದರೂ, ಮಾಹಿತಿ ನೀಡಲು ನಿರಾಕರಿಸಲಾಗಿತ್ತು ಎಂದು ಹೇಳಲಾಗಿದೆ. ಈ ಸಂಬಂಧ ಅರುಣ್‌ ಈಗಾಗಲೇ ಆಯೋಗಕ್ಕೆ, ಹೈಕೋರ್ಟ್‌ಗೆ ದೂರು ನೀಡಿದ್ದಾರೆ.   

ಈ ಮಧ್ಯೆ, ಸೋಮವಾರ ಚುನಾವಣಾ ಚಿಹ್ನೆ ಹಂಚಿಕೆ ಕಾರ್ಯ ನಡೆಯಿತು. 

‘ಚಿಹ್ನೆ ಹಂಚಿಕೆ ಪೂರ್ಣಗೊಂಡ ಬಳಿಕ ನನ್ನನ್ನು ಮಾತ್ರ ಕಚೇರಿಯಲ್ಲೇ ಉಳಿಸಿಕೊಳ್ಳಲಾಯಿತು. ವಿಡಿಯೊ ಚಿತ್ರೀಕರಣ ನಿಲ್ಲಿಸಿ, ನಾನು ದೂರು ನೀಡಿದ್ದ ವಿಷಯ ಪ್ರಸ್ತಾಪಿಸಿದ ಚುನಾವಣಾಧಿಕಾರಿ ಮತ್ತು ಅಧಿಕಾರಿಗಳು ‘ನೀನು ಅದ್ಹೇಗೆ ಸ್ಪರ್ಧೆ ಮಾಡುವೆ, ಹೇಗೆ ಪ್ರಚಾರ ನಡೆಸುವೆ ನಾವೂ ನೋಡುತ್ತೇನೆ’ ಎಂದು ಧಮಕಿ ಹಾಕಿದರು’ ಎಂದು ಅರುಣ್‌ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.  

‘ಚುನಾವಣಾಧಿಕಾರಿ ಮತ್ತು ಅವರ ಸಿಬ್ಬಂದಿಯಿಂದ ನನಗೆ ಜೀವ ಬೆದರಿಕೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಸ್ಪರ್ಧಿಸುವುದು ಕಷ್ಟ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ಇಂಥ ಬೆದರಿಕೆಯೊಂದಿಗೆ ನಾನು ಚುನಾವಣೆಯಲ್ಲಿ ಸ್ಪರ್ಧಿಸಲಾರೆ. ನನಗೆ ಪೊಲೀಸ್ ರಕ್ಷಣೆ ಬೇಕು‘ ಎಂದು ಅವರು ತಮ್ಮ ದೂರಿನಲ್ಲಿ ಕೋರಿದ್ದಾರೆ. 

ಯಾವುದೇ ರೀತಿಯ ಚುನಾವಣಾ ಅಕ್ರಮ ತಡೆಯುವುದು ಚುನಾವಣಾ ಅಧಿಕಾರಿಯ ಕರ್ತವ್ಯ. ಹೀಗೆ ಬೆದರಿಕೆ ಹಾಕುವುದೂ ಅಕ್ರಮವೇ.  
–ಅರುಣ್‌ ಹಿರೇಹಾಳ್‌ ಪಕ್ಷೇತರ ಅಭ್ಯರ್ಥಿ
ಪ್ರಶಾಂತ್‌ ಕುಮಾರ್‌ ಮಿಶ್ರಾ ಚುನಾವಣಾಧಿಕಾರಿ ಬಳ್ಳಾರಿ 
ಯಾವ ಬೆದರಿಕೆಯನ್ನೂ ನಾನು ಹಾಕಿಲ್ಲ. ಅವರಿಗೆ ಉತ್ತರ ಕೊಟ್ಟಿದ್ದೇನೆ ಅಷ್ಟೇ. 
– ಪ್ರಶಾಂತ್‌ ಕುಮಾರ್‌ ಮಿಶ್ರಾ ಕ್ಷೇತ್ರ ಚುನಾವಣಾಧಿಕಾರಿ
ಮೊಹಮದ್‌ ಝುಬೇರ ಹೆಚ್ಚುವರಿ ಜಿಲ್ಲಾಧಿಕಾರಿ 
ಚುನಾವಣಾ ಪ್ರಕ್ರಿಯೆಯನ್ನು ನಾವು ಕಾನೂನಾತ್ಮಕವಾಗಿ ನಿರ್ವಹಿಸುತ್ತಿದ್ಧೇವೆ. ಅವರು ಹೇಳುವುದು ಎಲ್ಲವನ್ನೂ ನಂಬಲು ಸಾಧ್ಯವೇ? ಅವರ ಆರೋಪಕ್ಕೆ ಸಾಕ್ಷಿ ಏನಿದೆ? ನಾವು ಬೆದರಿಕೆ ಹಾಕಿಲ್ಲ. 
– ಮೊಹಮದ್‌ ಝುಬೇರ ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.