ADVERTISEMENT

ಹಗರಿಬೊಮ್ಮನಹಳ್ಳಿ: 15 ಹಾಸ್ಟೆಲ್‍ಗಳಿಗೆ ಮೂವರು ವಾರ್ಡನ್‌

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಕೊರತೆ

ಸಿ.ಶಿವಾನಂದ
Published 11 ಜನವರಿ 2022, 9:04 IST
Last Updated 11 ಜನವರಿ 2022, 9:04 IST
ಹಗರಿಬೊಮ್ಮನಹಳ್ಳಿಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ
ಹಗರಿಬೊಮ್ಮನಹಳ್ಳಿಯಲ್ಲಿ ಬಾಡಿಗೆ ಕಟ್ಟಡದಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 15 ಹಾಸ್ಟೆಲ್‍ಗಳನ್ನು ಮೂವರು ವಾರ್ಡನ್‌ಗಳು ನೋಡಿಕೊಳ್ಳುತ್ತಿದ್ದಾರೆ!

ಹೆಚ್ಚಿನ ಕಾರ್ಯಭಾರದಿಂದ ಹಾಸ್ಟೆಲ್‍ಗಳಲ್ಲಿ ಸರಿಯಾದ ಮೇಲುಸ್ತುವಾರಿ ಇಲ್ಲದೆ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ತಾಲ್ಲೂಕಿನಲ್ಲಿ 11 ಮೆಟ್ರಿಕ್ ಪೂರ್ವ, 4 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿವೆ. ಮೆಟ್ರಿಕ್ ಪೂರ್ವ ಬಾಲಕರ 7, ಬಾಲಕಿಯರ 4, ಮೆಟ್ರಿಕ್ ನಂತರದ ಬಾಲಕಿಯರ 3, ಬಾಲಕರ 1 ಹಾಸ್ಟೆಲ್‌ ಇದೆ.

ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಲ್ಲಿ ಒಟ್ಟು 566 ವಿದ್ಯಾರ್ಥಿಗಳಿದ್ದಾರೆ. ನಾಲ್ಕು ಬಾಲಕಿಯರ ವಿದ್ಯಾರ್ಥಿ ಹಾಸ್ಟೆಲ್‌ಗಳನ್ನು ಒಬ್ಬ ಮಹಿಳಾ ವಾರ್ಡನ್ ನಿಭಾಯಿಸುತ್ತಿದ್ದಾರೆ. ಮೆಟ್ರಿಕ್ ಪೂರ್ವ 11 ಬಾಲಕರ ವಿದ್ಯಾರ್ಥಿ ನಿಲಯಗಳಿಗೆ ಇಬ್ಬರು ವಾರ್ಡನ್‍ಗಳಿದ್ದಾರೆ. ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಇರುವ ಹಾಸ್ಟೆಲ್‌ಗಳನ್ನು ಇಬ್ಬರೇ ನೋಡಿಕೊಳ್ಳಬೇಕಿರುವುದರಿಂದ ಹಾಸ್ಟೆಲ್‍ಗಳಲ್ಲಿ ಸಕಾಲಕ್ಕೆ ಸೂಕ್ತ ಸೌಕರ್ಯ ಕಲ್ಪಿಸಲು ಆಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ADVERTISEMENT

ತಾಲ್ಲೂಕಿನಲ್ಲಿ ಹಾಸ್ಟೆಲ್ ಸಿಬ್ಬಂದಿ ಕೊರತೆ ಇದ್ದರೂ ಮೆಟ್ರಿಕ್ ಪೂರ್ವ ಹಾಸ್ಟೆಲ್‍ನ ಮಹಿಳಾ ವಾರ್ಡನ್ ಒಬ್ಬರನ್ನು ಕೂಡ್ಲಿಗಿ ತಾಲ್ಲೂಕಿಗೆ ನಿಯೋಜನೆ ಮಾಡಲಾಗಿದೆ. ಕಾಲೇಜು ಹಾಸ್ಟೆಲ್‍ನ ಮಹಿಳಾ ವಾರ್ಡನ್ ಹೆರಿಗೆ ರಜೆಯಲ್ಲಿದ್ದಾರೆ. ವಿದ್ಯಾರ್ಥಿಗಳ ಗೋಳು ಕೇಳುವವರು ಇಲ್ಲದಂತಾಗಿದೆ.

ಪಟ್ಟಣದ ನಾಲ್ಕು ಹಾಸ್ಟೆಲ್‍ಗಳಿಗೆ ಸ್ವಂತ ಕಟ್ಟಡ ಇಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಚೇರಿ ಕೂಡ ಬಾಡಿಗೆ ಕಟ್ಟಡದಲ್ಲಿದೆ. ಇಲಾಖೆಗೆ ಸೇರಿದ ಮೂರು ನಿವೇಶನಗಳಿದ್ದರೂ ಅಲ್ಲಿ ಯಾವುದೇ ಕಟ್ಟಡ ತಲೆ ಎತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.