ADVERTISEMENT

ಹೊಸಪೇಟೆ: ₹60ರ ಗಡಿ ದಾಟಿದ ಟೊಮೆಟೊ!

ಸತತವಾಗಿ ಏರುತ್ತಿದೆ ಎಲ್ಲ ತರಕಾರಿ ಬೆಲೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 14:06 IST
Last Updated 6 ಜೂನ್ 2019, 14:06 IST
ಹೊಸಪೇಟೆಯ ಸೋಗಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಮಹಿಳೆ
ಹೊಸಪೇಟೆಯ ಸೋಗಿ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸುತ್ತಿರುವ ಮಹಿಳೆ   

ಹೊಸಪೇಟೆ: ಸತತ ಮೂರು ವಾರಗಳಿಂದ ಮಾರುಕಟ್ಟೆಯಲ್ಲಿ ತರಕಾರಿ ದರ ಗಗನಕ್ಕೆ ಏರುತ್ತಿದೆ.

ಸ್ಥಳೀಯ ಹಾಗೂ ಬೇರೆ ಊರುಗಳಿಂದ ತರಕಾರಿ ನಗರದ ಮಾರುಕಟ್ಟೆಗೆ ಬರುವುದು ಕಡಿಮೆಯಾಗಿದೆ. ಇದರಿಂದ ಸಹಜವಾಗಿಯೇ ಎಲ್ಲ ತರಕಾರಿ ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ತಿಂಗಳ ಹಿಂದೆ ₹15ರಿಂದ ₹20ರ ಮಧ್ಯೆ ಮಾರಾಟವಾಗುತ್ತಿದ್ದ ಟೊಮೆಟೊ ದರ ಈಗ ಪ್ರತಿ ಕೆ.ಜಿ.ಗೆ ₹60 ಇದೆ. ಮಧ್ಯಮ ಗಾತ್ರದ ಗುಣಮಟ್ಟದ ಟೊಮೆಟೊ ಸಂತೆಗಳಲ್ಲಿ ₹55ರಿಂದ ₹60ಕ್ಕೆ ಮಾರಾಟವಾಗುತ್ತಿದ್ದರೆ, ಸೂಪರ್‌ ಮಾರುಕಟ್ಟೆಯಲ್ಲಿ ₹60ರಿಂದ ₹65ಕ್ಕೆ ಮಾರಾಟ ಮಾಡಲಾಗುತ್ತಿದೆ. ಬೆಲೆ ಹೆಚ್ಚಾಗಿರುವುದರಿಂದ ಟೊಮೆಟೊ ಖರೀದಿಸಲು ಗ್ರಾಹಕರು ಹಿಂದೇಟು ಹಾಕುತ್ತಿದ್ದಾರೆ. ಇದೊಂದೆ ಅಲ್ಲ, ಇತರೆ ತರಕಾರಿಗಳ ಬೆಲೆಯೂ ಹೆಚ್ಚಳವಾಗಿರುವುದರಿಂದ ಜನ ಯೋಚನೆ ಮಾಡಿ ಖರೀದಿಸುವಂತಾಗಿದೆ.

ADVERTISEMENT

ಅದೇ ರೀತಿ ಹೀರೇಕಾಯಿ, ಸೌತೆಕಾಯಿ, ಸೊಪ್ಪಿನ ದರ ಕೂಡ ಏಕಾಏಕಿ ಹೆಚ್ಚಳವಾಗಿದೆ. ಹೋದ ವಾರ ಪ್ರತಿ ಕೆ.ಜಿ. ಹೀರೇಕಾಯಿ ₹40ರಿಂದ ₹50ರ ಮಧ್ಯೆ ಮಾರಾಟವಾಗುತ್ತಿತ್ತು. ಈಗ ₹70ರಿಂದ ₹80, ಸೌತೆಕಾಯಿ ₹50ರಿಂದ ₹60, ಹಾಗಲಕಾಯಿ ₹60ರಿಂದ 70,ಬೀನ್ಸ್‌ ₹60ರಿಂದ ₹70, ಬೆಂಡೆಕಾಯಿ ₹40ರಿಂದ ₹50, ಚೌಳಿಕಾಯಿ ₹50ರಿಂದ ₹60, ಕ್ಯಾರೆಟ್‌ ₹50ರಿಂದ ₹60ಕ್ಕೆ ಮಾರಾಟ ಮಾಡಲಾಗುತ್ತಿದೆ.

ಕೊತ್ತಂಬರಿ ಸೊಪ್ಪಿನ ಬೆಲೆ ಏಕಾಏಕಿ ಜಿಗಿದಿದೆ. ಮಧ್ಯಮ ಕಟ್ಟಿನ ಕೊತ್ತಂಬರಿ ಸೊಪ್ಪಿನ ಬೆಲೆ ವಾರದ ಹಿಂದೆ ₹5ರಿಂದ ₹6 ಇತ್ತು. ಈ ವಾರ ಅದು ₹8ರಿಂದ ₹10ಕ್ಕೆ ಏರಿಕೆಯಾಗಿದೆ. ಸಣ್ಣ ಎರಡು ಮೆಂತೆ ಕಟ್ಟಿಗೆ ₹10 ಇದೆ. ಹೋದ ವಾರ ಮೂರು ಕಟ್ಟಿಗೆ ₹10 ಬೆಲೆ ಇತ್ತು. ಅದೇ ರೀತಿ ಹಸಿ ಮೆಣಸಿನಕಾಯಿ ದರವೂ ಹೆಚ್ಚಳವಾಗಿದೆ. ಹಿಂದಿನ ವಾರ ಪ್ರತಿ ಕೆ.ಜಿ. ಮೆಣಸಿನಕಾಯಿ ₹50ರಿಂದ ₹60 ಇತ್ತು. ಈಗ ಅದು ₹70ರಿಂದ ₹80ಕ್ಕೆ ಹೋಗಿ ತಲುಪಿದೆ.

ಇದೇ ವೇಳೆ ಮಾವಿನ ಹಣ್ಣಿನ ದರದಲ್ಲಿ ಸ್ವಲ್ಪ ಕುಸಿತ ಕಂಡಿದೆ. ವಿವಿಧ ಭಾಗಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಗರಕ್ಕೆ ಮಾವು ಬರುತ್ತಿದೆ. ಇದು ಬೆಲೆ ಕುಸಿಯಲು ಕಾರಣವಾಗಿದೆ. ಪ್ರತಿ ಕೆ.ಜಿ. ಬೆನ್ನೀಸಾ ₹40ರಿಂದ ₹50, ರಸಪೂರಿ ₹50ರಿಂದ ₹60, ತೋತಾಪುರಿ ₹50ರಿಂದ ₹60, ಸಿಂಧೂರಾ ₹60ರಿಂದ ₹70, ಅಲ್ಫಾನ್ಸೊ ₹150ರಿಂದ ₹160ಕ್ಕೆ ಮಾರಾಟ ಮಾಡಲಾಗುತ್ತಿದೆ.

ಅಂಜೂರ ಆವಕ ಕೂಡ ಹೆಚ್ಚಾಗಿದೆ. ಪ್ರತಿ ಕೆ.ಜಿ. ಅಂಜೂರ ₹50ರಿಂದ ₹60 ಬೆಲೆ ಇತ್ತು. ಅದೀಗ ₹30ರಿಂದ ₹40ಕ್ಕೆ ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.