ADVERTISEMENT

ಎಲ್ಲೆಡೆ ಬಸ್ ಬಿಡಿ, ಕೋವಿಡ್‌ ಪರೀಕ್ಷೆ ಮಾಡಿ

ಹೊಸಪೇಟೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 7 ಜನವರಿ 2021, 13:52 IST
Last Updated 7 ಜನವರಿ 2021, 13:52 IST
ಹೊಸಪೇಟೆಯಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ನಾಗವೇಣಿ ಬಸವರಾಜ ಮಾತನಾಡಿದರು
ಹೊಸಪೇಟೆಯಲ್ಲಿ ಗುರುವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ನಾಗವೇಣಿ ಬಸವರಾಜ ಮಾತನಾಡಿದರು   

ಹೊಸಪೇಟೆ: ಶಾಲಾ, ಕಾಲೇಜುಗಳು ಆರಂಭಗೊಂಡಿರುವುದರಿಂದ ಎಲ್ಲ ಗ್ರಾಮಗಳಿಗೆ ಬಸ್‌ ಬಿಡಬೇಕು. ಶಿಕ್ಷಕರ ಜತೆಗೆ ಎಲ್ಲ ವಿದ್ಯಾರ್ಥಿಗಳಿಗೂ ಕೋವಿಡ್‌ ಪರೀಕ್ಷೆ ಮಾಡಿಸಬೇಕು ಎಂದು ಗುರುವಾರ ನಗರದಲ್ಲಿ ನಡೆದ ತಾಲ್ಲೂಕು ಪಂಚಾಯಿತಿಯ 21ನೇ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಭೇದ ಮರೆತು ಆಗ್ರಹಿಸಿದರು.

ಪಂಚಾಯಿತಿ ಅಧ್ಯಕ್ಷೆ ನಾಗವೇಣಿ ಬಸವರಾಜ‌ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರಾದ ರಾಜಪ್ಪ, ಪಾಲಯ್ಯ, ನೀಲಮ್ಮ ಪಂಚಪ್ಪ, ಶಾರದಮ್ಮ, ಲಚ್ಚಿಬಾಯಿ, ಮಲ್ಲೆ ಹನುಮಕ್ಕ ಮಾತನಾಡಿ, ‘ಜನವರಿ ಒಂದರಿಂದಲೇ ಶಾಲಾ, ಕಾಲೇಜುಗಳು ಆರಂಭವಾಗಿವೆ. ಆದರೆ, ತಾಲ್ಲೂಕಿನ ಹಲವು ಗ್ರಾಮಗಳಿಗೆ ಬಸ್‌ ಸಂಚಾರ ಆರಂಭಗೊಂಡಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆ ಎದುರಾಗುತ್ತಿದೆ’ ಎಂದರು.
‘ಅನೇಕ ವಿದ್ಯಾರ್ಥಿಗಳು ಖಾಸಗಿ ವಾಹನಗಳಲ್ಲಿ ಬಂದು ಹೋಗುತ್ತಿದ್ದಾರೆ. ಕೆಲವೆಡೆ ಆ ಸೌಕರ್ಯವೂ ಇಲ್ಲದ್ದರಿಂದ ಶಾಲಾ, ಕಾಲೇಜಿನಿಂದ ವಂಚಿತರಾಗುತ್ತಿದ್ದಾರೆ. ಬಸ್‌ ಆರಂಭಿಸಿದರೆ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ’ ಎಂದು ಗಮನ ಸೆಳೆದರು.

ಅದಕ್ಕೆ ಪ್ರತಿಕ್ರಿಯಿಸಿದ ಹೊಸಪೇಟೆ ಉಪವಿಭಾಗದ ಸಾರಿಗೆ ಇಲಾಖೆಯ ಅಧಿಕಾರಿ ಸತ್ಯನಾರಾಯಣ, ‘ಕೋವಿಡ್‌ ಕಾರಣದಿಂದ ಈ ಹಿಂದಿನ ಬಸ್‌ಗಳ ಸಂಚಾರದ ವೇಳಾಪಟ್ಟಿ ಬದಲಿಸಲಾಗಿದೆ. ಎಲ್ಲೆಲ್ಲಿ ಬಸ್‌ಗಳ ಅಗತ್ಯವಿದೆ ಎಂದು ಮಾಹಿತಿ ಒದಗಿಸಿದರೆ ಅಲ್ಲೆಲ್ಲ ಬಸ್‌ ಬಿಡಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಸುನಂದಾ ಮಾತನಾಡಿ, ’ಸರ್ಕಾರದ ನಿರ್ದೇಶನದ ಪ್ರಕಾರ ಸದ್ಯ ಶಿಕ್ಷಕರಿಗಷ್ಟೇ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿದೆ. ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಶಾಲೆ, ಕಾಲೇಜು ತೆರೆಯಲಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷೆ ನಾಗವೇಣಿ ಬಸವರಾಜ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಯಿಂದ ಕಸ ವಿಲೇವಾರಿ ಘಟಕ, ಶಾಲಾ, ಕಾಲೇಜುಗಳ ಆವರಣ ಸೇರಿ ಇತರೆ ಖಾಲಿ ಇರುವ ಪ್ರದೇಶಗಳಲ್ಲಿ ಹಣ್ಣಿನ ಸಸಿ ನೆಡಬೇಕು. ಇದರಿಂದ ಪರಿಸರ ಹಸಿರಾಗುತ್ತದೆ’ ಎಂದು ಅರಣ್ಯ ಅಧಿಕಾರಿ ರಾಘವೇಂದ್ರ ಅವರಿಗೆ ಸೂಚಿಸಿದರು.

ಉಪಾಧ್ಯಕ್ಷ ಶಿವಪ್ಪ ಮಜ್ಜಿಗೆ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುಬ್ಬಮ್ಮ ನಾಯಕರ್, ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.