ADVERTISEMENT

ಕಣ್ಮನ ಸೆಳೆದ ತುಂಗಾ ಆರತಿ

ಪ್ರತಿ ಹುಣ್ಣಿಮೆಯಂದು ಆರತಿ ಮಹೋತ್ಸವ; ಸಚಿವ ಆನಂದ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 3:44 IST
Last Updated 14 ನವೆಂಬರ್ 2020, 3:44 IST
‘ಹಂಪಿ ಉತ್ಸವ’ದ ಪ್ರಯುಕ್ತ ಶುಕ್ರವಾರ ಸಂಜೆ ತುಂಗಾಭದ್ರಾ ನದಿ ದಂಡೆಯಲ್ಲಿ ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ತುಂಗೆಗೆ ಆರತಿ ಬೆಳಗಿದರುಪ್ರಜಾವಾಣಿ ಚಿತ್ರ: ಕೆ.ಎಂ. ಕೊಟ್ರೇಶ್‌
‘ಹಂಪಿ ಉತ್ಸವ’ದ ಪ್ರಯುಕ್ತ ಶುಕ್ರವಾರ ಸಂಜೆ ತುಂಗಾಭದ್ರಾ ನದಿ ದಂಡೆಯಲ್ಲಿ ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌, ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರು ತುಂಗೆಗೆ ಆರತಿ ಬೆಳಗಿದರುಪ್ರಜಾವಾಣಿ ಚಿತ್ರ: ಕೆ.ಎಂ. ಕೊಟ್ರೇಶ್‌   

ಹಂಪಿ (ಹೊಸಪೇಟೆ ತಾಲ್ಲೂಕು): ಇಲ್ಲಿನ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಹರಿಯುವ ತುಂಗಭದ್ರಾ ನದಿ ದಂಡೆಯಲ್ಲಿ ಶುಕ್ರವಾರ ಸಂಜೆ ನಡೆದ ತುಂಗಾ ಆರತಿ ಮಹೋತ್ಸವ ನೆರೆದಿದ್ದವರ ಕಣ್ಮನ ಸೆಳೆಯಿತು.

ಇಡೀ ನದಿ ದಂಡೆಗೆ ವಿಶೇಷ ರೀತಿಯಲ್ಲಿ ಅಲಂಕರಿಸಿದ್ದರು. ನದಿ ಮಧ್ಯ ಇರುವ ಬಂಡೆಗಲ್ಲುಗಳಿಗೆ ವಿಭೂತಿ ಬಳಿದಿದ್ದರು. ಅಲ್ಲಿರುವ ನಂದಿ ವಿಗ್ರಹಗಳಿಗೆ ಹೂವಿನಿಂದ ಸಿಂಗರಿಸಿದ್ದರು. ಕಲ್ಲುಗಳ ಮೇಲೆ ತುಂಗಭದ್ರಾ ಆರತಿ ಬರಹ, ವರಹ, ನಂದಿ ಚಿತ್ರ ಕಂಗೊಳಿಸಿತು. ದೀಪಗಳಿಂದ ಇಡೀ ನದಿಗೆ ಅಲಂಕರಿಸಿದ್ದರಿಂದ ಇಡೀ ಪರಿಸರಕ್ಕೆ ವಿಶೇಷ ಕಳೆ ಬಂದಿತ್ತು. ತುಂಗಾ ಆರತಿಗೆ ಸಾಕ್ಷಿಯಾಗಲು ನದಿ ತಟದಲ್ಲಿ ಕಿಕ್ಕಿರಿದು ಜನ ಸೇರಿದ್ದರು. ತಾಯಿ ಭುವನೇಶ್ವರಿ, ವಿರೂಪಾಕ್ಷೇಶ್ವರನ ಜಯಘೋಷದ ನಡುವೆ ಸಚಿವ ಆನಂದ್ ಸಿಂಗ್ ಅವರು ನದಿಗೆ ಬಾಗಿನ ಸಮರ್ಪಿಸಿ, ತುಂಗೆಗೆ ಆರತಿ ಬೆಳಗಿದರು. ಪಟಾಕಿ ಸುಡುವುದು ನಿಷೇಧಿಸಿದ್ದರಿಂದ ಈ ಸಲ ಆಕಾಶದಲ್ಲಿ ಚಿತ್ತಾರ ಕಾಣಲಿಲ್ಲ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್‌ ಸಿಂಗ್‌, ‘ಇನ್ನೂ ಮುಂದೆ ಪ್ರತಿ ಹುಣ್ಣಿಮೆಯಂದು ತುಂಗಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅರ್ಧ ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಹುಣ್ಣಿಮೆ ದಿನ ತುಂಗಾಭದ್ರಾ ಆರತಿಗೆ‌ ಆಗಮಿಸುವ ಜನರಿಗಾಗಿ ಬೆಳಕಿನ ವ್ಯವಸ್ಥೆ, ಕುಳಿತುಕೊಳ್ಳುವುದಕ್ಕೆ ಆಸನ ಸೇರಿದಂತೆ ಇತರೆ ಸೌಕರ್ಯ ಕಲ್ಪಿಸಲಾಗುವುದು. ಎಲ್ಲಿಯವರೆಗೆ ಸೂರ್ಯಚಂದ್ರರು ಇರುತ್ತಾರೋ ಅಲ್ಲಿಯವರೆಗೆ ಹಂಪಿ ಉತ್ಸವ ನಡೆಯುತ್ತದೆ. ತುಂಗಾಭದ್ರಾ ಆರತಿಯೂ ನಡೆಯುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.