ADVERTISEMENT

ಚೆಲುವೆಲ್ಲ ನಂದೆ, ನನ್ನ ವಯ್ಯಾರಕ್ಕಿಲ್ಲ ಸಾಟಿಯೆಂದು ಬೀಗುತ್ತಿರುವ ತುಂಗಭದ್ರ

ಮೈದುಂಬಿಕೊಂಡು ಹರಿಯುತ್ತ ದೃಶ್ಯಕಾವ್ಯ ಕಟ್ಟಿದ ತುಂಗಭದ್ರೆ; ಭೂರಮೆಗೆ ಜೀವಕಳೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ಜುಲೈ 2022, 5:29 IST
Last Updated 14 ಜುಲೈ 2022, 5:29 IST
ಮೈದುಂಬಿಕೊಂಡು ಹರಿಯುತ್ತಿರುವ ತುಂಗಭದ್ರೆ
ಮೈದುಂಬಿಕೊಂಡು ಹರಿಯುತ್ತಿರುವ ತುಂಗಭದ್ರೆ   

ಹೊಸಪೇಟೆ (ವಿಜಯನಗರ): ‘ನಾನೀಗ ಮತ್ತೆ ಮೈದುಂಬಿಕೊಂಡಿರುವೆ. ನನ್ನ ಮನಸೋಇಚ್ಛೆ ಎಲ್ಲೆಡೆ ಹರಿಯುತ್ತಿರುವೆ. ನನ್ನ ನೋಡಲು ಬರುತ್ತಿರುವವರನ್ನು ನೋಡಿದರೆ ಈ ಚೆಲುವೆಲ್ಲ ನ‌ನ್ನದೇ ಎಂಬ ಅನುಮಾನ ಕಾಡುತ್ತಿದೆ. ಹಾಗಿದ್ದರೆ ನನ್ನ ವಯ್ಯಾರಕ್ಕೆ ಬೇರೆ ಯಾರೂ ಸರಿಸಾಟಿಯೇ ಇಲ್ಲವೇನೂ?’

ಹಂಪಿ ತಳವಾರಘಟ್ಟದ ಮಂಟಪದ ಮೇಲೆ ಬುಧವಾರ
ಕಂಡ ನವಿಲು ಚಿತ್ರ: ರಾಚಯ್ಯ ಎಸ್‌. ಸ್ಥಾವರಿಮಠ

ಹೀಗೆಂದು ‘ತುಂಗಭದ್ರೆ’ ತನ್ನನ್ನೇಕೇ ಪ್ರಶ್ನಿಸಿಕೊಳ್ಳತ್ತಿರಬಹುದು. ಸತತ ಐದನೇ ವರ್ಷವೂ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಮೈಚಾಚಿಕೊಂಡು ತುಂಗಭದ್ರೆ ಹರಿಯುವುದರ ಮೂಲಕ ದೃಶ್ಯಕಾವ್ಯ ಕಟ್ಟಿದ್ದಾಳೆ. ಭೂರಮೆಯ ಚೆಲುವು ಹೆಚ್ಚಿಸಿದ್ದಾಳೆ. ಒಂದೆಡೆ ತುಂತುರು ಮಳೆ, ಇನ್ನೊಂದೆಡೆ ಭದ್ರೆಯ ಜುಳು, ಜುಳು ನಿನಾದ ಜೀವ ಸಂಕುಲಕ್ಕೆ ಹೊಸ ಚೈತನ್ಯ ತಂದುಕೊಟ್ಟಿದೆ. ಹಂಪೆಯ ಬಯಲಲ್ಲಿ ಗರಿ ಬಿಚ್ಚಿ ಕುಣಿಯುತ್ತಿರುವ ನವಿಲುಗಳು, ಉತ್ಸಾಹದಿಂದ ಜಿಗಿದಾಡುತ್ತಿರುವ ನೀರುನಾಯಿಗಳೇ ಸಾಕ್ಷಿ.

ಇನ್ನು, ಈಕೆಯ ಸೌಂದರ್ಯ ಕಣ್ತುಂಬಿಕೊಳ್ಳುವವರಲ್ಲಿ ಇಂತಹವರೇ ಅಂತೇನಿಲ್ಲ. ಬಾಲಕನಿಂದ ಹಿರಿಯ ವಯಸ್ಸಿನವರೆಗೆ ಎಲ್ಲರೂ ಈಕೆಯ ಚೆಲುವಿಗೆ ಮನಸೋಲುತ್ತಿದ್ದಾರೆ. ಅದಕ್ಕೆ ಮತ್ತೊಂದು ಸಾಕ್ಷಿ. ಅಣೆಕಟ್ಟೆಯ ಪರಿಸರ. ತುಂಗೆಯ ಒಡಲು ತುಂಬಿರುವ ವಿಷಯ ತಿಳಿದು, ಈಗ ಎಲ್ಲೆಡೆಯಿಂದ ಜನ ಬರುತ್ತಿದ್ದಾರೆ. ದಿನವಿಡೀ ಜನಜಾತ್ರೆ. ಹಬ್ಬದ ಸಂಭ್ರಮ. ಇಲ್ಲಿ ಜಾತಿ, ಮತ, ಪಂಥದ ಭೇದವಿಲ್ಲ. ಎಲ್ಲರಿಗೂ ಆಕೆಯ ನೋಡುವಾಸೆ.

ADVERTISEMENT

ಜಲಾಶಯದ ಕ್ರಸ್ಟ್‌ಗೇಟ್‌ಗಳಿಂದ ಹಾಲ್ನೊರೆಯಂತೆ ದುಮ್ಮಿಕ್ಕಿ ಹರಿಯುತ್ತಿರುವ ನಯನ ಮನೋಹರ ದೃಶ್ಯಕ್ಕೆ ಪ್ರತಿಯೊಬ್ಬರೂ ಸಾಕ್ಷಿಯಾಗಬೇಕೆಂಬ ಹಂಬಲ. ಇಷ್ಟೇ ಅಲ್ಲ, ಮೊಬೈಲ್‌ಗಳಲ್ಲಿ ಸೆಲ್ಫಿ ಸೆರೆ ಹಿಡಿದು, ನೆನಪಿನ ಬುತ್ತಿಗೆ ಸೇರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿ, ಅದರಿಂದ ಸಿಗುವ ಲೈಕ್‌ಗಳನ್ನು ನೋಡಿ ಸಂಭ್ರಮಿಸುತ್ತಿದ್ದಾರೆ. ಈ ಮೂಲಕ ಹೊರಜಗತ್ತಿಗೂ ತುಂಗಭದ್ರೆಯ ಚೆಲುವಿನ ಕಂಪು ಹರಡಿದ್ದಾರೆ.

ಬೆಟ್ಟ, ಗುಡ್ಡ, ಬಂಡೆಗಲ್ಲುಗಳ ನಡುವೆ ತನ್ನದೇ ದಾರಿ ಕಂಡುಕೊಂಡು ಮುನ್ನಡೆಯುವುದರ ಮೂಲಕ ರೈತ ಕುಲದಲ್ಲೂ ಸಂಭ್ರಮ ಮೂಡಿಸಿದ್ದಾಳೆ. ನದಿ ತೀರದ ಗ್ರಾಮಸ್ಥರು ಪೂಜೆ ಸಲ್ಲಿಸಿ, ಕೃತಜ್ಞತೆ ತೋರುತ್ತಿದ್ದಾರೆ. ತುಂಗಭದ್ರೆ ಮೈದುಂಬಿಕೊಂಡಿರುವುದರಿಂದ ಇಡೀ ಹಂಪಿ ಪರಿಸರಕ್ಕೆ ಹೊಸ ಮೆರುಗು ಬಂದಿದೆ. ಇನ್ನೊಂದೆಡೆ, ಪುರಂದರದಾಸರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ, ಸ್ನಾನಘಟ್ಟ, ಚಕ್ರತೀರ್ಥ ಮುಳುಗಡೆಯಾಗಿವೆ. ಆದರೆ, ಯಾರಿಗೂ ಬೇಜಾರಿಲ್ಲ. ಅವಳು ಹರಿದು ಹೋಗುತ್ತಿರುವುದು ನೋಡಬೇಕೆಂಬ ಆಸೆಯೊಂದೆ.

ಭತ್ತದ ಸಸಿ ನಾಟಿ ಮಾಡುತ್ತಿರುವ ಮಹಿಳೆಯರು

31 ಕ್ರಸ್ಟ್‌ಗೇಟ್‌ಗಳಿಂದ ನದಿಗೆ ನೀರು

ತುಂಗಭದ್ರಾ ಜಲಾಶಯದ ಒಟ್ಟು 33 ಕ್ರಸ್ಟ್ ಗೇಟ್ ಗಳ ಪೈಕಿ 31 ಗೇಟ್ ಗಳಿಂದ ಬುಧವಾರ 1,15,391 ಕ್ಯುಸೆಕ್ ನೀರು ನದಿಗೆ ಹರಿಸಲಾಯಿತು. 1,04,969 ಕ್ಯುಸೆಕ್‌ ಒಳಹರಿವು ಇದ್ದು, 105.788 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ದ ಜಲಾಶಯದಲ್ಲಿ 99.898 ಟಿಎಂಸಿ ಅಡಿ ನೀರಿನ ಸಂಗ್ರಹವಿದ್ದು, ಹೆಚ್ಚುವರಿ ನೀರು ನದಿಗೆ ಬಿಡಲಾಗುತ್ತಿದೆ. ಒಂದೂವರೆ ಲಕ್ಷ ಕ್ಯುಸೆಕ್ ನೀರು ಯಾವುದೇ ಕ್ಷಣದಲ್ಲೂ ನದಿಗೆ ಹರಿಸಲಾಗುವುದು. ಜನ ಮುನ್ನೆಚ್ಚರಿಕೆ ವಹಿಸಬೇಕೆಂದು ಜಲಾಶಯ ಆಡಳಿತ ಮಂಡಳಿ ತಿಳಿಸಿದೆ. ಜಿಲ್ಲೆಯಲ್ಲಿ ತುಂತುರು ಮಳೆ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಂಗಳವಾರ 97.906 ಟಿಎಂಸಿ ಅಡಿ ನೀರು, ಸೋಮವಾರ 91.014 ಟಿಎಂಸಿ ಅಡಿ, ಭಾನುವಾರ 83.917 ಟಿಎಂಸಿ ಅಡಿ, ಶನಿವಾರ 72.951 ಟಿಎಂಸಿ ಅಡಿ, ಶುಕ್ರವಾರ 64.728 ಟಿಎಂಸಿ ಅಡಿ, ಗುರುವಾರ 58.212 ಟಿಎಂಸಿ ಅಡಿ ನೀರಿನ ಸಂಗ್ರಹವಿತ್ತು.

ಅಪಾಯ ಲೆಕ್ಕಿಸದೇ ನದಿಯಲ್ಲಿ ಮೀನು ಹಿಡಿಯುತ್ತಿರುವ ಯುವಕ

ಅಪಾಯ ಲೆಕ್ಕಿಸದವರಿಗೆ ತಡೆ

ಅಪಾಯ ಲೆಕ್ಕಿಸದೇ ತುಂಗಭದ್ರಾ ಜಲಾಶಯ ಎದುರಿನ ಹಳೆಯ ಸೇತುವೆ ಮೇಲೆ ನಿಂತು ಸೆಲ್ಫಿ, ಛಾಯಾಚಿತ್ರ ತೆಗೆಸಿಕೊಳ್ಳಲು ಹಿಂಡು ಹಿಂಡಾಗಿ ತೆರಳುತ್ತಿದ್ದವರಿಗೆ ಪೊಲೀಸರು ಬುಧವಾರ ಸಂಜೆ ತಡೆಯೊಡ್ಡಿದ್ದಾರೆ.

ಸೇತುವೆಯ ಎರಡೂ ಕಡೆ ಪೊಲೀಸರು ಮುಳ್ಳಿನ ಜಾಲಿ ಹಾಕಿ ವಾಹನ ಸಂಚಾರ ತಡೆದಿದ್ದಾರೆ. ಕಾಲ್ನಡಿಗೆಯಲ್ಲೂ ಹೋಗಲು ಅವಕಾಶ ಕಲ್ಪಿಸುತ್ತಿಲ್ಲ.

ತುಂಗಭದ್ರಾ ಜಲಾಶಯ ಎದುರಿನ ಹಳೆಯ ಸೇತುವೆ ಮೇಲೆ ಜನರ ಓಡಾಟ ತಡೆಯಲು ಟಿ.ಬಿ. ಡ್ಯಾಂ ಸಿಬ್ಬಂದಿ ಹಾಗೂ ಪೊಲೀಸರು ಬುಧವಾರ ಸಂಜೆ ಕಚ್ಚಾರಸ್ತೆಯ ಮೇಲೆ ಮುಳ್ಳಿನ ಬೇಲಿ ಹಾಕಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.