ADVERTISEMENT

ಮುನ್ನೆಲೆಗೆ ಬಂತು ಕೆರೆ ಭರ್ತಿ ಭರವಸೆ!

ತುಂಗಭದ್ರಾ ನದಿಯ ನೀರನ್ನು ತಾಲ್ಲೂಕಿನ ಕೆರೆಗೆ ಹರಿಸುವ ವಿಷಯ

ವಿ.ಎಂ.ನಾಗಭೂಷಣ
Published 17 ಏಪ್ರಿಲ್ 2019, 20:15 IST
Last Updated 17 ಏಪ್ರಿಲ್ 2019, 20:15 IST
ಸಂಡೂರು ತಾಲ್ಲೂಕಿನ ವಿಠಲಾಪುರ- ಹಾವಿನಮಡಗು ಕೆರೆ ನೀರಿಲ್ಲದೆ ಭಣಗುಡುತ್ತಿದೆ.
ಸಂಡೂರು ತಾಲ್ಲೂಕಿನ ವಿಠಲಾಪುರ- ಹಾವಿನಮಡಗು ಕೆರೆ ನೀರಿಲ್ಲದೆ ಭಣಗುಡುತ್ತಿದೆ.   

ಸಂಡೂರು: ತುಂಗಭದ್ರಾ ನದಿ ನೀರಿನಿಂದ ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ವಿಷಯ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ.

ತಾಲ್ಲೂಕಿನಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿದ್ದ ಮೈತ್ರಿ ಪಕ್ಷಗಳ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಹಾಗೂ ಬಿಜೆಪಿ ಅಭ್ಯರ್ಥಿ ವೈ. ದೇವೇಂದ್ರಪ್ಪ, ತಮ್ಮನ್ನು ಗೆಲ್ಲಿಸಿದಲ್ಲಿ, ‘ಇಲ್ಲಿನ ಕೆರೆಗಳಿಗೆ ತುಂಗಭದ್ರಾ ನದಿ ನೀರು ತಂದು ತುಂಬಿಸಲಾಗುವುದು’ ಎಂಬ ಭರವಸೆಗಳನ್ನು ನೀಡುತ್ತಿದ್ದಾರೆ.

ಬಿಜೆಪಿ ಮುಖಂಡ ಕಾರ್ತಿಕೇಯ ಘೋರ್ಪಡೆ, ‘ಗಣಿ ಕಂಪನಿಗಳಿಂದ ಗಣಿ ಪ್ರದೇಶದ ಅಭಿವೃದ್ಧಿಗಾಗಿ ಸಂಗ್ರಹಿಸಿರುವ ಹಣದಿಂದಲೇ ತುಂಗಭದ್ರಾ ನದಿ ನೀರನ್ನು ಇಲ್ಲಿನ ಕರೆಗಳಿಗೆ ತಂದು ತುಂಬಿಸಬಹುದು’ ಎಂದಿದ್ದಾರೆ.

ADVERTISEMENT

ಕೆಲ ವರ್ಷಗಳಿಂದ ತಾಲ್ಲೂಕಿನಲ್ಲಿ ಸಮರ್ಪಕ ಮಳೆಯಾಗದೆ ಬಹುತೇಕ ಕೆರೆಗಳು ಖಾಲಿಯಾಗಿವೆ. ಇದು ಅಂತರ್ಜಲದ ಮಟ್ಟ ಕಡಿಮೆಯಾಗಲು ಮತ್ತು ಆ ಮೂಲಕ ಕೃಷಿ ಚಟುವಟಿಕೆ ಕುಂಟಿತವಾಗಲು ಕಾರಣವಾಗಿದೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ತಾಲ್ಲೂಕಿನ ವಿಠಲಾಪುರದ ರೈತ ಮುಖಂಡ ಸದಾಶಿವ, ‘ಕೆರೆಗಳಲ್ಲಿ ನೀರಿಲ್ಲ. 300–400 ಅಡಿ ಆಳಕ್ಕೆ ಕೊರೆಸಿದರೂ ಕೊಳವೆಬಾವಿಯಲ್ಲಿ ನೀರು ಸಿಗುತ್ತಿಲ್ಲ. ಹೀಗಾಗಿ ತುಂಗಭದ್ರಾ ನದಿ ನೀರನ್ನು ಕೆರೆಗಳಿಗೆ ತುಂಬಿಸುವಂತೆ ಅಧಿಕಾರಿಗಳಿಗೂ ಹಾಗೂ ಜನಪ್ರತಿನಿಧಿಗಳಿಗೂ ಪತ್ರ ಬರೆದು ಒತ್ತಾಯಿಸಿದ್ದೇವೆ’ ಎಂದರು.

ರೈತ ಸಂಘದ ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ ಮಾತನಾಡಿ, ‘ರಾಜಕಾರಣಿಗಳು ನಮಗೆ ಏನನ್ನೂ ಕೊಡುವುದು ಬೇಡ. ಮಳೆಗಾಲದಲ್ಲಿ ತುಂಗಭದ್ರಾ ಆಣೆಕಟ್ಟಿನಿಂದ ಹೆಚ್ಚಾದ ನೀರು ಆಂಧ್ರದ ಮೂಲಕ ಸಮುದ್ರ ಸೇರುತ್ತದೆ. ಆಣೆಕಟ್ಟಿನ ನೀರಿನಲ್ಲಿ 2 ಟಿ.ಎಂ.ಸಿ ಅಡಿ ನೀರನ್ನು ತಾಲ್ಲೂಕಿಗೆ ಹರಿಸಿ ಇಲ್ಲಿನ ಕೆರೆಗಳನ್ನು ತುಂಬಿಸಿದರೆ ಸಾಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.