ADVERTISEMENT

ಹೂವಿನಹಡಗಲಿ: ಬಹುತೇಕ ಕೆರೆಗೆ ನೀರುಣಿಸದ ಯೋಜನೆ

ದಶಕದ ಹಿಂದೆ ಜಾರಿಯಾದ ತುಂಗಭದ್ರಾ ನದಿಯಿಂದ ಕೆರೆ ತುಂಬಿಸುವ ಪ್ರಕ್ರಿಯೆಗೆ ಹಲವು ತೊಂದರೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 2:12 IST
Last Updated 2 ಮಾರ್ಚ್ 2026, 2:12 IST
<div class="paragraphs"><p>ಹೂವಿನಹಡಗಲಿ ತಾಲ್ಲೂಕಿನ ತಳಕಲ್ಲು ಕೆರೆ ಅಂಗಳ ನೀರಿಲ್ಲದೆ ಒಣಗಿದೆ</p></div>

ಹೂವಿನಹಡಗಲಿ ತಾಲ್ಲೂಕಿನ ತಳಕಲ್ಲು ಕೆರೆ ಅಂಗಳ ನೀರಿಲ್ಲದೆ ಒಣಗಿದೆ

   

ಹೂವಿನಹಡಗಲಿ: ತಾಲ್ಲೂಕಿನ ಪ್ರಮುಖ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಂಡು ದಶಕ ಕಳೆದಿದ್ದರೂ ಯೋಜನೆ ವ್ಯಾಪ್ತಿಯ ಅರ್ಧದಷ್ಟು ಕೆರೆಗಳು ನೀರಿಲ್ಲದೆ ಭಣಗುಡುತ್ತಿವೆ.

ಎರಡು ವರ್ಷಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ನದಿಯಿಂದ ಪೈಪ್‌ಲೈನ್ ಮೂಲಕ ನೇರವಾಗಿ ನೀರು ಹರಿಸುವ ಯೋಜನೆ ಜಾರಿಯಾಗಿದ್ದರೂ ಕೆರೆಗಳ ಒಡಲು ತುಂಬಿಲ್ಲ.

ADVERTISEMENT

ತಳಕಲ್ಲು, ಹಿರೇಮಲ್ಲನಕೆರೆ, ಬನ್ನಿಕಲ್ಲು, ಜಿ. ಕೋಡಿಹಳ್ಳಿ, ದಾಸನಹಳ್ಳಿ, ಹ್ಯಾರಡ ಕೆರೆಗಳಿಗೆ ಸಣ್ಣಪುಟ್ಟ ಗುಂಡಿಗಳು ತುಂಬುವಷ್ಟು ಮಾತ್ರ ನೀರು ಹರಿಯುತ್ತದೆ. ಈ ಯೋಜನೆಯಿಂದ ಕೆಲವರ ಜೇಬು ತುಂಬಿದೆಯೇ ಹೊರತು ಕೆರೆಯಲ್ಲಿ ನೀರು ತುಂಬಲಿಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಲ್ಲೂಕಿನ 10 ಕೆರೆಗಳಿಗೆ ನೀರು ತುಂಬಿಸುವ ₹76.70 ಕೋಟಿ ಮೊತ್ತದ ಯೋಜನೆ 2010ರಲ್ಲಿ ಮಂಜೂರಾಗಿತ್ತು. 2013ರಲ್ಲಿ ಯೋಜನೆ ಪರಿಷ್ಕರಿಸಿ, ಹೆಚ್ಚುವರಿಯಾಗಿ 11 ಕೆರೆಗಳನ್ನು ಸೇರ್ಪಡೆಗೊಳಿಸಲಾಯಿತು. ಒಟ್ಟು ₹121 ಕೋಟಿ ಮೊತ್ತದ ಯೋಜನೆಗೆ ಚಾಲನೆ ನೀಡಲಾಯಿತು. ಜಲ ಸಂಪನ್ಮೂಲ ಇಲಾಖೆ 2017ರಲ್ಲಿ ಕಾಮಗಾರಿ ಪೂರ್ಣಗೊಳಿಸಿ, ನೀರು ಹರಿಸಲು ಪ್ರಾರಂಭಿಸಿತು.

ಅರಳಿಹಳ್ಳಿ, ಹಿರೇಹಡಗಲಿ, ಹಗರನೂರು, ದೇವಗೊಂಡನಹಳ್ಳಿ, ಮುದೇನೂರು, ನಾಗತಿಬಸಾಪುರ, ಮಾನ್ಯರಮಸಲವಾಡ ಕೆರೆಗಳಿಗೆ ಏಳೆಂಟು ವರ್ಷಗಳಿಂದ ನೀರು ಹರಿಸಲಾಗುತ್ತಿದೆ. ಬೇಸಿಗೆಯಲ್ಲೂ  ಮೈದುಂಬಿಕೊಂಡ ಈ ಕೆರೆಗಳಿಗೆ ಜೀವಕಳೆ ಬಂದಿದೆ. ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿದೆ.

ಸುತ್ತಲಿನ ನಾಲ್ಕೈದು ಕಿ.ಮೀ. ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ಬತ್ತಿದ್ದ ಕೊಳವೆ ಬಾವಿಗಳಲ್ಲೂ ನೀರು ಚಿಮ್ಮುತ್ತಿದೆ. ಮಳೆಯಾಶ್ರಿತ ಬೆಳೆಗಳನ್ನು ಬೆಳೆದು ಕೈ ಸುಟ್ಟಿಕೊಂಡಿದ್ದ ರೈತರು ಇದೀಗ ಕಬ್ಬು, ಅಡಿಕೆ, ಭತ್ತ ಮುಂತಾದ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಅನ್ನದಾತರ ಬದುಕಿನಲ್ಲಿ ಬದಲಾವಣೆ ಕಾಣಿಸಿದೆ.

ಆದರೆ, ಮೂಲ ಯೋಜನೆಯಲ್ಲಿರುವ ತಳಕಲ್ಲು, ಹಿರೇಮಲ್ಲನಕೆರೆ, ಬನ್ನಿಕಲ್ಲು, ದಾಸನಹಳ್ಳಿ, ಹ್ಯಾರಡ ಮಲಿಯಮ್ಮ ಕೆರೆ, ಪರಿಷ್ಕೃತ ಯೋಜನೆಯಲ್ಲಿರುವ ಜಿ. ಕೋಡಿಹಳ್ಳಿ, ಹ್ಯಾರಡ ಹೊಸ, ಕೊಯಿಲಾರಗಟ್ಟಿ, ಸೋವೇನಹಳ್ಳಿ ಕೆರೆಗಳಿಗೆ ನದಿಯ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ. ಈ ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಇದೆ.

‘ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಸಕ್ತಿ ಕೊರತೆಯಿಂದ ಮಹತ್ವಾಕಾಂಕ್ಷಿ ಯೋಜನೆ ಇದ್ದೂ ಇಲ್ಲದಂತಾಗಿದೆ. ಸಂಬಂಧಿಸಿದವರು ಯೋಜನೆಯ ತಾಂತ್ರಿಕ ದೋಷ ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಈ ವರ್ಷದ ಮಳೆಗಾಲದಲ್ಲಿ ಎಲ್ಲ ಕೆರೆಗಳನ್ನು ಭರ್ತಿ ಮಾಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ನೀರು ಕಳವಿಗೆ ಕಡಿವಾಣ ಅವಶ್ಯ

ಕೆರೆ ತುಂಬಿಸುವ ಯೋಜನೆಗಾಗಿ 40.5 ಕಿ.ಮೀ. ಸ್ಟೀಲ್ ಪೈಪ್‌ಲೈನ್ 38 ಕಿ.ಮೀ. ಸಿಮೆಂಟ್ ಕಾಂಕ್ರೀಟ್ ಪೈಪ್‌ಲೈನ್ ಹಾಕಲಾಗಿದೆ. 106 ಕಡೆ ಏರ್ ವಾಲ್ವ್ ಅಳವಡಿಸಲಾಗಿದೆ. ಏರ್ ವಾಲ್ವ್ ಹಾಗೂ ಪೈಪ್‌ಲೈನ್‌ಗೆ ಕೆಲವರು ರಂಧ್ರ ಕೊರೆದು ಹೊಲಗಳಿಗೆ ಅಕ್ರಮವಾಗಿ ನೀರು ಹರಿಸುತ್ತಿದ್ದಾರೆ. ಇದರಿಂದ ಕೆರೆಗಳಿಗೆ ನೀರು ತಲುಪುತ್ತಿಲ್ಲ. ರಂಧ್ರ ಕೊರೆಯುವವರ ವಿರುದ್ಧ ಕ್ರಮ ಜರುಗಿಸಿ ಯೋಜನೆಯನ್ನು ಸಮರ್ಪಕ ಜಾರಿಗೊಳಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ. 

ಯಾರು ಏನಂತರೆ...?

ಪ್ರತ್ಯೇಕ ಯೋಜನೆಗೆ ಸಿಗದ ಅನುದಾನ

10 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಅವೈಜ್ಞಾನಿಕವಾಗಿ 21 ಕೆರೆಗಳಿಗೆ ವಿಸ್ತರಿಸಿರುವುದು ಮತ್ತು ಕಳಪೆ ಗುಣಮಟ್ಟದ ಪೈಪ್ ಹಾಕಿರುವುದು ಈ ಸಮಸ್ಯೆಗೆ ಕಾರಣವಾಗಿದೆ. ತಳಕಲ್ಲು ಬನ್ನಿಕಲ್ಲು ಹಿರೇಮಲ್ಲನಕೆರೆ ಕೆರೆಗಳಿಗೆ ನೀರು ಹರಿಸಲು ಪ್ರತ್ಯೇಕ ಕ್ರಿಯಾ ಯೋಜನೆ ರೂಪಿಸಿದ್ದು ಸರ್ಕಾರ ಅನುದಾನ ನೀಡುತ್ತಿಲ್ಲ -  ಎಲ್.ಕೃಷ್ಣನಾಯ್ಕ ಶಾಸಕ ಹೂವಿನಹಡಗಲಿ.

ಎಲ್ಲ ಕೆರೆಗೆ ನೀರು ಹರಿಸಲು ಯೋಜನೆ

ಪೈಪ್‌ಲೈನ್ ಜಾಲದಲ್ಲಿನ ನ್ಯೂನತೆಗಳನ್ನು ಗುರುತಿಸಿದ್ದೇವೆ. ಪಿಎಚ್‌ಸಿ ಪೈಪ್‌ಗಳಿರುವ ಕಡೆ ಎಂಎಸ್ ಪೈಪ್‌ಲೈನ್ ಹಾಕಬೇಕಿದ್ದು ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಅಡೆತಡೆ ನಿವಾರಿಸಿ ಈ ಬಾರಿ ಎಲ್ಲ ಕೆರೆಗಳಿಗೆ ನೀರು ಹರಿಸಲು ಯೋಜನೆ ರೂಪಿಸಿದ್ದೇವೆ - ಶಿವಮೂರ್ತಿ, ಕಾರ್ಯನಿರ್ವಾಹಕ ಎಂಜಿನಿಯರ್

ಹೊಸ ಯೋಜನೆಗೆ ಮಂಜೂರಾತಿ ಕೊಡಿಸಲಿ

ಪೈಪ್‌ಲೈನ್ ಸೋರಿಕೆಯಿಂದ ತಳಕಲ್ಲು ಕೆರೆಗೆ ನೀರು ಹರಿಯುತ್ತಿಲ್ಲ. ಈ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿದೆ. ದೇವಗೊಂಡನಹಳ್ಳಿ ಕೆರೆಯಿಂದ ತಳಕಲ್ಲು ಕೆರೆಗೆ ನೀರು ಲಿಫ್ಟ್ ಮಾಡುವ ₹27 ಕೋಟಿ ಮೊತ್ತದ ಹೊಸ ಯೋಜನೆಗೆ ಶಾಸಕರು ಮಂಜೂರಾತಿ ಕೊಡಿಸಬೇಕು - ಎಸ್. ಚಂದ್ರಪ್ಪ, ಕಾರ್ಯದರ್ಶಿ, ತಳಕಲ್ಲು ಕೆರೆ ಹೋರಾಟ ಸಮಿತಿ 

ಕೆರೆ ಜೋಡಣೆ; ಗ್ರಾಮಸ್ಥರ ಅಡ್ಡಿ

ಜಿ. ಕೋಡಿಹಳ್ಳಿ ಕೆರೆಗೆ ಬನ್ನಿಕಲ್ಲು ಕೆರೆಯಿಂದ ಜೋಡಣೆ ಮಾಡಿರುವುದಕ್ಕೆ ಆ ಗ್ರಾಮದವರು ಅಡ್ಡಿಪಡಿಸುತ್ತಿದ್ದಾರೆ. ಪ್ರತ್ಯೇಕ ಯೋಜನೆ ಜಾರಿಯಾಗಿದ್ದರೂ ಸರಿಯಾಗಿ ನೀರು ಹರಿಯುತ್ತಿಲ್ಲ. ಸಂಬಂಧಿಸಿದವರು ಗಮನಹರಿಸಿ ಕೆರೆ ಭರ್ತಿ ಮಾಡಬೇಕು. ನಿರ್ವಹಣೆ ಸಮಸ್ಯೆ ಬಗೆಹರಿಸಬೇಕು - ಪಿ. ಯುವರಾಜ ಜಿ. ಕೋಡಿಹಳ್ಳಿ ನಿವಾಸಿ

ಹಿರೇಮಲ್ಲನಕೆರೆ ಕೆರೆಯ ಗುಂಡಿಗಳಲ್ಲಿ ಅಲ್ಪ ನೀರು ಸಂಗ್ರಹವಿದೆ
ಹಿರೇಹಡಗಲಿ ಕೆರೆ ಮೈದುಂಬಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.