ಬಳ್ಳಾರಿ: ರಾಜ್ಯದಲ್ಲಿ ಎದುರಾಗಿರುವ ಯೂರಿಯಾ ಬಿಕ್ಕಟ್ಟಿನ ಹಿಂದೆ ರಸಗೊಬ್ಬರ ತಯಾರಕ ಕಂಪನಿಗಳು ವ್ಯಾಪಾರಿಗಳ ಮೇಲೆ ಹೇರುತ್ತಿರುವ ಒತ್ತಡವೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.
ಯೂರಿಯಾ ಖರೀದಿ ಮಾಡಲು ಬರುವ ರೈತರಿಗೆ, ಯೂರಿಯಾ ಜೊತೆಗೆ ಇತರ ಉಪ ಉತ್ಪನ್ನಗಳನ್ನು ಖರೀದಿ ಮಾಡುವಂತೆ ಮಾರಾಟಗಾರರು ಒತ್ತಾಯಿಸುತ್ತಿದ್ದಾರೆ. ಯೂರಿಯಾ ಒಂದೇ ಬೇಕಾದರೆ, ದುಪ್ಪಟ್ಟು ದರ ಕೇಳುತ್ತಿದ್ದಾರೆ ಎಂಬ ಆರೋಪಗಳು ರಾಜ್ಯದ ಹಲವು ಕಡೆಗಳಿಂದ ಕೇಳಿ ಬಂದಿವೆ. ಇದರ ಜಾಡು ಹಿಡಿದು ಹೊರಟಾಗ ರಸಗೊಬ್ಬರ ಉತ್ಪಾದಕ ಕಂಪನಿಗಳ ಒತ್ತಡ ಬಯಲಾಗಿದೆ.
ಯೂರಿಯಾ ಮತ್ತು ಇತರ ರಸಗೊಬ್ಬರಗಳ ಜೊತೆಗೆ ಡೀಲರ್‌ಗಳು ಇತರ ಉತ್ಪನ್ನಗಳನ್ನು ಖರೀದಿ ಮಾಡಲೇ ಬೇಕು ಎಂದು ಕಂಪನಿಗಳು ಒತ್ತಾಯಿಸುತ್ತಿವೆ. ಹೀಗಾಗಿ ಡೀಲರ್‌ಗಳು ಯೂರಿಯಾ ಜೊತೆಗೆ ಅನಿವಾರ್ಯವಾಗಿ ಇತರೆ ಉತ್ಪನ್ನಗಳನ್ನೂ ಖರೀದಿಸಿ ತರುತ್ತಿದ್ದಾರೆ. ಇದೇ ಡೀಲರ್‌ಗಳು ವ್ಯಾಪಾರಿಗಳ ಮೇಲೆ ಒತ್ತಡ ಹೇರಿ ಯೂರಿಯಾ ಜತೆಗೆ ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಮಾರಾಟಗಾರರು ಈ ಒತ್ತಡವನ್ನು ರೈತರ ಮೇಲೆ ಹಾಕುತ್ತಿದ್ದಾರೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ.
‘ನ್ಯಾನೊ ಯುರಿಯಾ, ನ್ಯಾನೊ ಡಿಎಫ್‌ಎಗಳಿಗೆ ಕಂಪನಿಗಳು ಇತ್ತೀಚೆಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಯೂರಿಯಾ ಜೊತೆಗೆ ಈ ಉತ್ಪನ್ನಗಳನ್ನೂ ಖರೀದಿಸಲೇ ಬೇಕು ಎಂದು ಕಡ್ಡಾಯಪಡಿಸುತ್ತಿವೆ. ನ್ಯಾನೊ ಉತ್ಪನ್ನಗಳನ್ನು ಬೇಡ ಎಂದರೆ ಏನನನ್ನೂ ಕೊಡುವುದಿಲ್ಲ ಎನ್ನುತ್ತಿವೆ. ಅವರು ಹೇಳಿದಂತೆ ಕೇಳಬೇಕು ಎಂಬಂತಾಗಿದೆ. ಅವರು ಕೊಡುವ ಉತ್ಪನ್ನಕ್ಕೂ ಕೇವಲ ಒಂದು ವರ್ಷದ ಕಾಲಾವಧಿ ಇರುತ್ತದೆ. ಅದರ ಒಳಗೆ ಮಾರಲೇ ಬೇಕಾದ ಪರಿಸ್ಥಿತಿ ಡೀಲರ್‌ಗಳದ್ದು ಮತ್ತು ವ್ಯಾಪಾರಸ್ಥರದ್ದು. ಇತ್ತೀಚೆಗೆ ಎಲ್ಲ ಕಂಪನಿಗಳೂ ನ್ಯಾನೊ ಉತ್ಪನ್ನಗಳನ್ನು ಮಾರುತ್ತಿವೆ. ನಾವು ಕಂಪನಿಯವರ ಮಾತು ಕೇಳುವುದೋ ಅಥವಾ ಮಾರಾಟಗಾರರು, ರೈತರ ಮಾತು ಕೇಳುವುದೋ ಗೊತ್ತಿಲ್ಲ’ ಎಂದು ರಸಗೊಬ್ಬರದ ಡೀಲರ್‌ವೊಬ್ಬರು ಮಾಹಿತಿ ನೀಡಿದ್ದಾರೆ.
‘ಯೂರಿಯಾ ಜತೆಗೆ, ಇತರೆ ಉತ್ಪನ್ನಗಳನ್ನೂ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರವೇ ಹೇಳಿದೆ. ಹಾಗೆಂದು ರೈತರು ಇತರೆ ಉತ್ಪನ್ನಗಳನ್ನು ಖರೀದಿಸಲೇಬೇಕು ಎಂದು ಒತ್ತಡ ಹೇರುವಂತೆ ಇಲ್ಲ. ಅವರಿಗೆ ಅಗತ್ಯವಿದ್ದ ಉತ್ಪನ್ನಗಳನ್ನು ಮಾತ್ರವೇ ವ್ಯಾಪಾರಸ್ಥರು ಮಾರಾಟ ಮಾಡಬೇಕು’ ಎಂದು ಸರ್ಕಾರ ಹೇಳಿದೆ ಎಂದು ಕೃಷಿ ಇಲಾಖೆಯ ಬಳ್ಳಾರಿ ಜಿಲ್ಲೆಯ ಜಂಟಿ ನಿರ್ದೇಶಕ ಸೋಮವಸುಂದರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ರೈತರ ಮನಸ್ಥಿತಿಯೂ ಕಾರಣ: ರಸಗೊಬ್ಬರ ಎಂದರೆ ಯೂರಿಯಾ ಮಾತ್ರ. ಅದನ್ನು ಸಿಂಪರಣೆ ಮಾಡಿದರೆ ಬೆಳೆಗೆ ಗೊಬ್ಬರ ಹಾಕಿದ ಜವಾಬ್ದಾರಿ ಮುಗಿಯಿತು ಎಂಬ ತಪ್ಪು ಕಲ್ಪನೆಯೂ ಯೂರಿಯಾ ಬಿಕ್ಕಟ್ಟಿಗೆ ಮತ್ತೊಂದು. ಇದರ ಜತೆಗೆ, ಇತರ ಉತ್ಪನ್ನಗಳಿಗಿಂತಲೂ ಯೂರಿಯಾ ಬೆಲೆ ಕಡಿಮೆ ಇದೆ. ಹೀಗಾಗಿ ರೈತರು ಯೂರಿಯಾ ಕಡೆ ಮುಗಿಬೀಳುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಆದೇಶ ಎಲ್ಲಿದೆ: ಮಾಧವ ರೆಡ್ಡಿ ಪ್ರಶ್ನೆ
ಯೂರಿಯಾ ಜತೆಗೆ, ಇತರ ಉತ್ಪನ್ನಗಳನ್ನೂ ಮಾರಾಟ ಮಾಡಬೇಕು ಎಂದು ಕೇಂದ್ರ ಸರ್ಕಾರ ಯಾವಾಗ ಹೇಳಿದೆ? ಆದೇಶ ಮಾಡಿದ್ದರೆ ಕೃಷಿ ಇಲಾಖೆ ಅದನ್ನು ತಮ್ಮ ಕಚೇರಿಗಳ ಮೇಲೆ ಅಂಟಿಸಲಿ. ಅದು ಬಿಟ್ಟು ಬಿಕ್ಕಟ್ಟಿಗೆ ಸಬೂಬು ಹೇಳಬಾರದು. ಇಲ್ಲಿ ಕಂಪನಿಗಳ ಲಾಭಿ ಸ್ಪಷ್ಟವಾಗಿ ಕಾಣುತ್ತಿದೆ. ಸರ್ಕಾರ ಅದನ್ನು ಪರಿಹರಿಸುವ ಕೆಲಸ ಮಾಡಬೇಕೇ ಹೊರತು, ಕಾರಣಗಳನ್ನು ನೀಡಬಾರದು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಮಾಧವ ರೆಡ್ಡಿ ಹೇಳಿದ್ದಾರೆ.
ಯೂರಿಯಾ ಜತೆಗೆ ಇತರೆ ಉತ್ಪನ್ನಳನ್ನು ಕೊಳ್ಳಲೇಬೇಕು ಎಂದು ರೈತರ ಮೇಲೆ ಒತ್ತಡ ಹಾಕದಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಡೀಲರ್‌ಗಳು, ವ್ಯಾಪಾರಿಗಳ ಸಭೆಯಲ್ಲಿ ಹೇಳಲಾಗಿದೆ.-ಸೋಮಸುಂದರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಬಳ್ಳಾರಿ
ಯೂರಿಯಾ ಜತೆಗೆ, ಇತರ ಉತ್ಪನ್ನಗಳನ್ನೂ ಕೊಳ್ಳುವಂತೆ ಕಂಪನಿಗಳು ಒತ್ತಡ ಹೇರುತ್ತಿವೆ. ಕೊಳ್ಳದೇ ಹೋದರೆ, ಯಾವುದೇ ಉತ್ಪನ್ನವನ್ನೂ ಕೊಡುವುದಿಲ್ಲ. ಇದು ಕಂಪನಿಗಳು ಸೃಷ್ಟಿಸುತ್ತಿರುವ ಸಮಸ್ಯೆ.-ತಿಮ್ಮನಗೌಡ, ಜಿಲ್ಲಾ ಕೃಷಿ ಪರಿಕರ ಮಾರಾಟಗಾರ ಸಂಘದ ಆಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.