ADVERTISEMENT

ಹರಪನಹಳ್ಳಿ: ಯೂರಿಯಾ ಗೊಬ್ಬರಕ್ಕಾಗಿ ನೂಕು ನುಗ್ಗಲು

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 4:19 IST
Last Updated 24 ಜುಲೈ 2025, 4:19 IST
ಹರಪನಹಳ್ಳಿ ತಾಲ್ಲೂಕು ಅರಸೀಕೆರೆ  ಗ್ರಾಮದ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಬೆಳಿಗ್ಗೆ ಯೂರಿಯಾ ಗೊಬ್ಬರಕ್ಕಾಗಿ ರೈತರು ನಿಂತಿರುವುದು.
ಹರಪನಹಳ್ಳಿ ತಾಲ್ಲೂಕು ಅರಸೀಕೆರೆ  ಗ್ರಾಮದ ಸಹಕಾರ ಸಂಘದ ಆವರಣದಲ್ಲಿ ಬುಧವಾರ ಬೆಳಿಗ್ಗೆ ಯೂರಿಯಾ ಗೊಬ್ಬರಕ್ಕಾಗಿ ರೈತರು ನಿಂತಿರುವುದು.   

ಹರಪನಹಳ್ಳಿ: ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರು ಯೂರಿಯಾ ಗೊಬ್ಬರಕ್ಕಾಗಿ ಬುಧವಾರ ಪರದಾಡಿದರು.

ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಮತ್ತು ವಿವಿದೋದ್ಧೇಶ ಗ್ರಾಮೀಣ ಕೃಷಿ ಸಹಕಾರ ಸಂಘ (ಬಿ90)ದ ಮುಂದೆ ಬೆಳಿಗ್ಗೆ 8 ಗಂಟೆಗೆ ಜಮಾಯಿಸಿದ್ದ ರೈತರು ಗೊಬ್ಬರ ಖರೀದಿಗೆ ಮುಗಿಬಿದ್ದಿದ್ದರು.

ಪಟ್ಟಣದ ಎರಡು ಸೊಸೈಟಿಗಳಲ್ಲಿ 15 ಟನ್‌ ಮಾತ್ರ ಗೊಬ್ಬರ ಬಂದಿತ್ತು. ಅದನ್ನು 500 ರೈತರಿಗೆ ವಿತರಿಸಲು ಸೊಸೈಟಿ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಕೊನೆಗೆ ಪೊಲೀಸ್‌ ಸಿಬ್ಬಂದಿ ಆಗಮಿಸಿ ಸರದಿಯಲ್ಲಿ ನಿಲ್ಲಿಸಿದ ನಂತರ ಟೋಕನ್‌ ಕೊಟ್ಟು ಒಬ್ಬೊಬ್ಬರಿಗೆ ಗೊಬ್ಬರದ ಚೀಲ ವಿತರಿಸಿದರು.

ADVERTISEMENT

ಚೀಲವೊಂದಕ್ಕೆ 266 ಮತ್ತು ಸಾರಿಗೆ ವೆಚ್ಚ ₹34 ಪಾವತಿಸಿ ಪ್ರತಿ ರೈತರು ಎರಡು ಚೀಲ ಪಡೆದುಕೊಂಡರು. ಸರದಿಯಲ್ಲಿ ಕಾದಿದ್ದರೂ ಗೊಬ್ಬರ ಸಿಗದೇ ಕೆಲ ರೈತರು ನಿರಾಸೆಯಿಂದ ಅಧಿಕಾರಿಗಳನ್ನು ಶಪಿಸುತ್ತಾ ಮರಳಿದರು.

ತಾಲ್ಲೂಕಿನ ಅರಸೀಕೆರೆ, ಉಚ್ಚಂಗಿದುರ್ಗ, ಪುಣಬಘಟ್ಟ, ತೌಡೂರು ಹಾಗೂ ಹೊಸಕೋಟೆ ಗ್ರಾಮಗಳಲ್ಲೂ ಯೂರಿಯಾ ಸಿಗದೇ ರೈತರು ಪರದಾಡಿದ್ದಾರೆ. ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ, ರೈತ ಮುಖಂಡರಾದ ರಾಮಪ್ಪ, ಹನುಮಂತಪ್ಪ, ನರಸಿಂಹಪ್ಪ,ಮಂಜುನಾಥ್, ಪ್ರವೀಣ್,ಮಹಾಂತೇಶ್, ನಾಗರಾಜ್ ಇದ್ದರು.

ಹರಪನಹಳ್ಳಿ ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಬುಧವಾರ ಬೆಳಿಗ್ಗೆ ಯೂರಿಯಾ ಗೊಬ್ಬರಕ್ಕಾಗಿ ರೈತರು ಮುಗಿಬಿದ್ದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.