ಬಳ್ಳಾರಿ: ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಅಮೆರಿಕ ಹೇರಿರುವ ಶೇ 25ರಷ್ಟು ಹೆಚ್ಚುವರಿ ಸುಂಕವು ರಾಜ್ಯದ ಸೀಗಡಿ ಕೃಷಿಕರಿಗೆ ಭಾರಿ ಹೊಡೆತ ನೀಡಿದೆ.
ಬಳ್ಳಾರಿ, ರಾಯಚೂರು, ಯಾದಗಿರಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೂರಾರು ರೈತರು, ಸಾವಿರಾರು ಎಕರೆ ಪ್ರದೇಶದಲ್ಲಿ ಸೀಗಡಿ ಕೃಷಿಯಲ್ಲಿ ತೊಡಗಿದ್ದಾರೆ. ಟ್ರಂಪ್ ಸುಂಕ ನೀತಿಗೂ ಮೊದಲು ಅಮೆರಿಕಕ್ಕೆ ರಫ್ತಾಗುತ್ತಿದ್ದ 30 ಕೌಂಟ್ (ಒಂದು ಕೆ.ಜಿಗೆ 30 ಸೀಗಡಿ) ಒಳನಾಡು ಸೀಗಡಿಗೆ ₹500 ಸಿಗುತ್ತಿತ್ತು. ಈಗ ಅದು 380ಕ್ಕೆ ಕುಸಿದಿದೆ. 40 ಕೌಂಟ್‌ಗೆ ₹420 ಸಿಗುತ್ತಿತ್ತು. ಈಗ ₹330 ಸಿಗುತ್ತಿದೆ. 50 ಕೌಂಟ್‌ಗೆ ₹370 ಸಿಗುತ್ತಿತ್ತು. ಸದ್ಯ ₹310 ಆಗಿದೆ. ಬೆಲೆ ಇನ್ನೂ ಇಳಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬೆಳೆಯಲಾಗುವ ಸೀಗಡಿಯನ್ನು ಆಂಧ್ರ ಪ್ರದೇಶದ ನೆಲ್ಲೂರು, ಭೀಮಾವರಂ, ಗೋವಾ ಮತ್ತು ರಾಜ್ಯದ ಮಂಗಳೂರು, ಉಡುಪಿಯ ಮಧ್ಯವರ್ತಿಗಳು ಖರೀದಿಸುತ್ತಾರೆ. ಅದನ್ನು ಸಂಸ್ಕರಿಸಿ, ಪ್ಯಾಕೇಜ್ ಮಾಡಿ, ಅಮೆರಿಕ, ಜಪಾನ್, ಚೀನಾ, ಥಾಯ್ಲೆಂಡ್‌ಗೆ ರಫ್ತು ಮಾಡುತ್ತಾರೆ. ಅಮೆರಿಕವೇ ದೊಡ್ಡ ಖರೀದಿ ರಾಷ್ಟ್ರ ಎನ್ನಲಾಗಿದೆ.
ಭಾರತದಿಂದ ಹೋಗಿರುವ ಹಲವು ಉದ್ಯಮಿಗಳು ಅಮೆರಿಕದಲ್ಲಿ ಗೋದಾಮುಗಳನ್ನು ನಿರ್ಮಿಸಿ ವ್ಯಾಪಾರ ಆರಂಭಿಸಿದ್ದಾರೆ. ಅವರು ಭಾರತದಿಂದ ಬರುವ ಸೀಗಡಿಗಳನ್ನು ಖರೀದಿಸಿ, ಅಲ್ಲಿ ಮಾರಾಟ ಮಾಡುತ್ತಾರೆ.
ಯಾವಾಗ ಟ್ರಂಪ್ ಸುಂಕ ಹೆಚ್ಚಿಸಿದರೋ, ಆಗ ಅಮೆರಿಕದ ಉದ್ಯಮಿಗಳು ನಷ್ಟವನ್ನು ರಫ್ತುದಾರರಿಗೆ ವರ್ಗಾಯಿಸಿದರು. ರಫ್ತುದಾರರು, ಮಧ್ಯವರ್ತಿಗಳ ಮೇಲೆ, ಮಧ್ಯವರ್ತಿಗಳು ರೈತರ ಮೇಲೆ ನಷ್ಟ ವರ್ಗಾಯಿಸಿದ್ದಾರೆ.
ನಿರಂತರ ವಿದ್ಯುತ್: ಒಳನಾಡು ಸೀಗಡಿ ಕೃಷಿ ವೆಚ್ಚದಾಯಕ. ಅಷ್ಟೇ ಅನಿಶ್ಚಿತ. ನಾಲ್ಕು ತಿಂಗಳಿಗೇ ಬೆಳೆ ಬಂದರೂ, ಸೀಗಡಿ ಅತ್ಯಂತ ಸೂಕ್ಷ್ಮ. ಒಂದು ಬಾರಿ ಸೋಂಕು ತಗುಲಿದರೆ ಅಥವಾ ಅದಕ್ಕೆ ಆಮ್ಲಜನಕ ಕಡಿಮೆಯಾದರೆ ಇಡೀ ಬೆಳೆಯೇ ನಾಶವಾಗುತ್ತದೆ.
ಅದಕ್ಕಾಗಿಯೇ ನೀರಿನಲ್ಲಿ ಆಮ್ಲಜನಕ ಮಟ್ಟವನ್ನು ನಿರಂತರವಾಗಿ ಕಾಪಾಡುವ ವ್ಯವಸ್ಥೆಯನ್ನು ಎಲ್ಲ ಕೃಷಿಕರೂ ಅಳವಡಿಸಿಕೊಂಡಿದ್ದಾರೆ. ಅದಕ್ಕೆ ನಿರಂತರ ವಿದ್ಯುತ್ ಅಗತ್ಯ. ಒಂದೇ ಒಂದು ಗಂಟೆ ವಿದ್ಯುತ್ ಕೈಕೊಟ್ಟರೆ, ಇಡೀ ಬೆಳೆ ನಾಶವಾಗುತ್ತದೆ. ಸದ್ಯ ಕೃಷಿಕರು ಯೂನಿಟ್‌ಗೆ ₹6 ಪಾವತಿಸುತ್ತಿದ್ದಾರೆ. ಆಂಧ್ರ ಪ್ರದೇಶ, ಒಡಿಶಾ ಮಾದರಿಯಲ್ಲಿ ಸಬ್ಸಿಡಿ ಅಥವಾ ಉಚಿತ ವಿದ್ಯುತ್ ನೀಡಬೇಕು ಎಂದು ಕೃಷಿಕ ಜಾನಕಿರಾಮ ರಾಜು ಹೇಳಿದ್ದಾರೆ.
ಸೀಗಡಿಯನ್ನು ಸಂಸ್ಕರಿಸಲು ಈ ಭಾಗದಲ್ಲಿ ಗೋದಾಮು ಬೇಕಿದೆ. ಇಂಥ ಪರಿಸ್ಥಿತಿಯಲ್ಲಿ ಉತ್ಪನ್ನವನ್ನು ಸಂರಕ್ಷಿಸಿ ಬೆಲೆ ಬಂದಾಗ ಮಾರಾಟ ಮಾಡಿಕೊಳ್ಳಲು ಅನುಕೂಲವಾಗಲಿದೆ. ಸರ್ಕಾರ ಗಮನಿಸಲಿಶ್ರೀನಿವಾಸ್ ಸೀಗಡಿ ಕೃಷಿಕರು ಬಳ್ಳಾರಿ
ಅಮೆರಿಕ ಸುಂಕ ಏರಿಕೆಯಿಂದ ಸೀಗಡಿ ಬೆಲೆ ಇಳಿಕೆಯಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿಯೂ ಕೇಳುವವರಿಲ್ಲ. ಸುಂಕವು ಸರ್ಕಾರದ ವಿಚಾರ. ಕೃಷಿಕರಿಗೆ ಸಬ್ಸಿಡಿ ರೂಪದಲ್ಲಿ ವಿದ್ಯುತ್ ಒದಗಿಸಿದರೆ ಉತ್ಪಾದನಾ ವೆಚ್ಚವಾದರೂ ಕಡಿಮೆಯಾಗಲಿದೆ.ಶಿವಣ್ಣ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಬಳ್ಳಾರಿ
ಸಿಂಡಿಕೇಟ್‌ಗಳ ಆಟ
ಆರಂಭದಲ್ಲಿ ಶೇ 9ರ ಸುಂಕದಲ್ಲೇ ಅಮೆರಿಕದೊಂದಿಗೆ ವ್ಯಾಪಾರ ನಡೆಯುತ್ತಿತ್ತು. ಆ ಬಳಿಕ ಶೇ 25ಕ್ಕೆ ಏರಿತು. ಈಗ ಶೇ 50ಕ್ಕೆ ಏರಿಸಲಾಗುತ್ತಿದೆ. ಹೀಗಾಗಿ ಮಾರುಕಟ್ಟೆ ಕುಸಿಯುತ್ತಿದೆ. ‘ಮಧ್ಯವರ್ತಿಗಳ ಸಿಂಡಿಕೇಟ್ ಕೃಷಿಕರಿಂದ ಖರೀದಿಸುವ ಒಟ್ಟು ಉತ್ಪನ್ನದ ಶೇ 30ರಷ್ಟನ್ನು ಮಾತ್ರ ವಿದೇಶಗಳಿಗೆ ಕಳುಹಿಸುತ್ತಾರೆ. ಆದರೆ ಸುಂಕದ ನೆಪವೊಡ್ಡಿ ಇಡೀ ಉತ್ಪನ್ನದ ಮೇಲೆ ದರ ಕಡಿತಗೊಳಿಸುತ್ತಿದ್ದಾರೆ. ಅಮೆರಿಕದ ಸುಂಕದ ವಿಚಾರವನ್ನೇ ಇಟ್ಟುಕೊಂಡು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ನಷ್ಟಪರಿಹಾರವನ್ನೂ ಪಡೆಯುತ್ತಾರೆ. ಪರಿಸ್ಥಿತಿಯ ಲಾಭವನ್ನು ಅವರು ಪಡೆಯುತ್ತಿದ್ದಾರೆ. ಕೃಷಿಕರಿಗೆ ಏನೂ ಸಿಗುವುದಿಲ್ಲ. ಸರ್ಕಾರ ಗಮನಹರಿಸಬೇಕು. ಕೃಷಿಕರಿಗೂ ನಷ್ಟಪರಿಹಾರ ಕೊಡಬೇಕು‘ ಎಂದು ಸೀಗಡಿ ಕೃಷಿಕ ಶ್ರೀನಿವಾಸ್‌ರಾವ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.