ADVERTISEMENT

ವಿಜಯದಶಮಿ| ಬಡಿಗೆಯಲ್ಲಿ ಬಡಿದಾಟ: 100 ಮಂದಿಗೆ ಗಾಯ; ಕೊಂಬೆ ಮುರಿದು 3 ಸಾವು

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2023, 10:04 IST
Last Updated 25 ಅಕ್ಟೋಬರ್ 2023, 10:04 IST
<div class="paragraphs"><p>ಬಡಿಗೆಯಲ್ಲಿ ಬಡಿದಾಟ</p></div>

ಬಡಿಗೆಯಲ್ಲಿ ಬಡಿದಾಟ

   

ಡಿ.ಮಾರೆಪ್ಪ ನಾಯಕ

ಸಿರುಗುಪ್ಪ (ಬಳ್ಳಾರಿ ಜಿಲ್ಲೆ): ಆಂಧ್ರಪ್ರದೇಶದ ವ್ಯಾಪ್ತಿಯಲ್ಲಿದ್ದರೂ, ಸಂಪೂರ್ಣ ಕನ್ನಡದಲ್ಲೇ ಮಾತುಕತೆ, ವ್ಯವಹಾರ ನಡೆಯುವ ತಾಲ್ಲೂಕಿನ ಗಡಿನಾಡು ಹೊಳಗುಂದ ಮಂಡಲದ ದೇವರ ಗುಡ್ಡದಲ್ಲಿ ವಿಜಯದಶಮಿ ಅಂಗವಾಗಿ ಮಂಗಳವಾರ ಮಧ್ಯರಾತ್ರಿಯಿಂದ ಬುಧವಾರ ನಸುಕಿನವರೆಗೆ ಮಾಳಮ್ಮ ಮಲ್ಲೇಶ್ವರ ಕಲ್ಯಾಣೋತ್ಸವ ನಡೆದಿದ್ದು, ಉತ್ಸವ ಮೂರ್ತಿಗಾಗಿ ನಡೆದ ಬಡಿಗೆ ಬಡಿದಾಟದಲ್ಲಿ 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ADVERTISEMENT

ಬಡಿಗೆ ಬಡಿದಾಟವನ್ನು ನೋಡಲೆಂದು ಹತ್ತಾರು ಮಂದಿ ಮರ ಎರಿದ್ದರು. ಈ ಪೈಕಿ ಒಂದು ಕೊಂಬೆ ಮುರಿದು ಬಿದ್ದುದರಿಂದ ಮೂವರು ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೃತರನ್ನು ಆಸ್ಟರಿ ಗ್ರಾಮದ ಗಣೇಶ (19), ಮಲಗಲಪಲ್ಲಿ ಕೊಟ್ಟಾಲು ಗ್ರಾಮದ ರಾಮಾಂಜನೇಯಲು (59) ಹಾಗೂ ಕರ್ನಾಟಕದ ಬಳ್ಳಾರಿಯ ಪ್ರಕಾಶ್ (30) ಎಂದು ಗುರುತಿಸಲಾಗಿದೆ ಎಂದು ಕರ್ನೂಲ್‌ ಎಸ್‌ಪಿ ಕೃಷ್ಣ ಕಾಂತ್‌ ತಿಳಿಸಿದ್ದಾರೆ.

ಬಡಿಗೆ ಬಡಿದಾಟ ಆಚರಣೆ: ಇಲ್ಲಿ ಬಡಿಗೆ ಬಡಿದಾಟ ನಡೆಯುವುದು ಒಂದು ಆಚರಣೆ. ಇದನ್ನು ನೋಡಲು ಕರ್ನಾಟಕ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣಗಳಿಂದ ಲಕ್ಷಾಂತರ ಮಂದಿ ಬರುತ್ತಾರೆ. ಬಡಿದಾಟದಲ್ಲಿ ಗಾಯಗೊಳ್ಳುವುದು, ಆಸ್ಪತ್ರೆಗೆ ದಾಖಲಿಸುವುದು ಇಲ್ಲಿ ಸಾಮಾನ್ಯವಾಗಿದ್ದು, ಈ ವರ್ಷ ಬಡಿಗೆ ಬಡಿದಾಟದಲ್ಲಿ ಸಾವು ಸಂಭವಿಸದಿದ್ದರೂ, ಮರ ಮುರಿದು ಬಿದ್ದುದರಿಂದ ಮೂವರ ಸಾವು ಸಂಭವಿಸಿದೆ.

ಉತ್ಸವ ಮೂರ್ತಿಗಳನ್ನು ತಮ್ಮದಾಗಿಸಿಕೊಳ್ಳಲು ನೇರಣಿಕಿ, ವಿರುಪಾಪುರ, ಸುಳುವಾಯಿ, ಆಲೂರು ಶೇಕ್ಷಾವಲಿ ತಾಂಡ, ಆಲೂರು ತಾಂಡ, ಹೊಳಗುಂದಿಯ ಗ್ರಾಮಸ್ಥರು ಬಡಿಗೆಗಳಲ್ಲಿ ಬಡಿದಾಡಿಕೊಂಡರು. ಸಾವಿರಾರು ಮಂದಿ ಬಡಿಗೆಯಿಂದ ಬಡಿಯುತ್ತಿದ್ದಂತೆಯೇ ಅಲ್ಲಿ ರಕ್ತ ಚಿಮ್ಮುತ್ತಿತ್ತು. ಆದರೂ ದೇವರ ಮೂರ್ತಿಗಳಿಗಾಗಿ ರಾತ್ರಿಯಿಡೀ ಹೊಡೆದಾಟ ಮುಂದುವರಿಯಿತು. ಕೊನೆಗೆ ನೇರಣಿಕಿ ಗುಂಪಿನವರಿಗೆ ಉತ್ಸವ ಮೂರ್ತಿಗಳು ದೊರೆತವು.

ಉತ್ಸವ ನಡೆಯುವ ಬಗೆ: ದೇವರು ಗುಡ್ಡದ ಸುತ್ತಮುತ್ತಲಿನ 10 ಗ್ರಾಮಸ್ಥರು ರಾತ್ರಿ 12ಗಂಟೆಯಿಂದಲೇ ಮಾಳಮ್ಮ ಜೊತೆಯಲ್ಲಿ ತೆರಳುವ ಮಲ್ಲೇಶ್ವರ ಸ್ವಾಮಿಯ ಉತ್ಸವ ಮೂರ್ತಿಯೊಂದಿಗೆ ರಾಕ್ಷಸರ ಸಂಹಾರ ನಡೆಸಿ ಬನ್ನಿ ಮುಡಿಯುತ್ತಾರೆ ಎಂಬುದು ಇಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ.

ಕಾಡಸಿದ್ದಪ್ಪಮಠದ ಮೂಲಕ ತೆರಳಿ ಪಾದಲಗಟ್ಟೆಗೆ ಸೇರಿಕೊಳ್ಳುವುದು, ಮುಳ್ಳಿನ ಬಂಡೆಯಲ್ಲಿ ರಾಕ್ಷಸ ಪಡೆಯತ್ತ ತೆರಳಿ ಮಣಿಮಲ್ಲಾಸುರರಿಗೆ ಅರ್ಚಕರು ಮೂರು ಹನಿಗಳ ರಕ್ತತರ್ಪಣ ನೀಡುವುದು, ಬನ್ನಿಕಟ್ಟೆಗೆ ತೆರಳಿ ಶಮಿವೃಕ್ಷಕ್ಕೆ ಪೂಜೆ ನೆರವೇರಿಸುವುದು, ಎದುರು ಬಸವಣ್ಣ ದೇವಸ್ಥಾನದ ಮೇಲೆ ಆರ್ಚಕರು ಕಾರಣಿಕೆ ನುಡಿಯುವುದು, ಕಾರಣಿಕ ನುಡಿದ ಅರ್ಚಕರನ್ನು ಸಿಂಹಾಸನ ಕಟ್ಟೆಗೆ ಕರೆದುಕೊಂಡು ಬಂದು ಕುದುರೆ ಉತ್ಸವ ಮೂರ್ತಿಗಳನ್ನು ಕೂಡಿಸುವ ಸಂಪ್ರದಾಯ ಇಲ್ಲಿ ನಡೆಯುತ್ತದೆ.

ಗುಡ್ಡದ ಮೇಲಿರುವ ಮಾಳಮಲ್ಲೇಶ್ವರ ಸ್ವಾಮಿಯ ಉದ್ಭವ ಮೂರ್ತಿಯ ದರ್ಶನ ಮಾಡಿಕೊಂಡು ಭಕ್ತರು ಬಂಡಾರವನ್ನು ಎರಚಿ ಭಕ್ತಿ ಸಮರ್ಪಿಸಿಕೊಳ್ಳುತ್ತಾರೆ.

ಬಡಿದಾಟ ಯಾಕಾಗಿ?:  ಉತ್ಸವ ಮೂರ್ತಿಗಳನ್ನು ಪಡೆದುಕೊಳ್ಳಲು ನೇರಣಿಕಿ ಹಾಗೂ ಇತರೆ ಗ್ರಾಮಸ್ಥರ ಗುಂಪು, ಆಲೂರು, ಸುಳುವಾಯಿ, ಎಳ್ಳಾರ್ತಿ, ಅರಿಕೇರ, ನಿಟ್ಟರವಟ್ಟಿ, ಬಿಳಾಹಾಳ್ ಗ್ರಾಮಸ್ಥರು ಮತ್ತೊಂದು ಗುಂಪುಗಳ ಮಧ್ಯೆ ಬಡಿಗೆ ಕಾದಾಟ ನಡೆಯುತ್ತದೆ. ಪಂಜುಗಳನ್ನು ಪರಸ್ಪರರ ಮೇಲೆ ಎಸೆಯುವುದೂ ನಡೆಯುತ್ತದೆ. ಉತ್ಸವ ಮೂರ್ತಿ ದೊರೆತ ಊರಿಗೆ ಶುಭವಾಗುತ್ತದೆ ಎಂಬ ನಂಬಿಕೆಯಿಂದಾಗಿ ಈ ಹೊಡೆದಾಡುವ ಆಚರಣೆ ಪ್ರಚಲಿತದಲ್ಲಿದೆ.

ಭವಿಷ್ಯದ ಕಾರಣಿಕೆ: ದೇವಸ್ಥಾನದ ಅರ್ಚಕ ಉಪವಾಸ ವ್ರತ ಆಚರಿಸಿ ಬೆಳಗಿನ ಜಾವ ಎದುರು ಬಸವಣ್ಣ ದೇವಸ್ಥಾನದ ಹತ್ತಿರ ಹೇಳಿದ ಕಾರಣಿಕವನ್ನು ಕೇಳಿ ಜನ ಪುಳಕಿತರಾದರು. ‘ಗಂಗೆ ಹೊಳೆದಂಡಿಗೆ ನಿಂತಾಳ, ನಾಲ್ಕು ಭಾಗ ಮಾಡ್ಯಾಳ, ನಗಳ್ಳ(ಹತ್ತಿ) 7700, ವಕ್ರ ಜೋಳ 4700, 3 -6 ಆದಿತ್ತು, 6-1 ಆದಿತ್ತು’ ಎಂಬ ಭವಿಷ್ಯದ ಕಾರಣಿಕೆ ನುಡಿದರು.

ಈ ಕಾರಣಿಕವನ್ನು ಅವಲಂಬಿಸಿ ಸುತ್ತಮುತ್ತ ರೈತರು ತಮ್ಮ ಬೆಳೆಗಳಿಗೆ ಮಾರುಕಟ್ಟೆ ದರಗಳನ್ನು ಕಂಡುಕೊಳ್ಳುತ್ತಾರೆ. ಈ ವರ್ಷ ಯಾವ ಬೆಳೆ ಉತ್ತಮವಾಗಿ ಬರುತ್ತದೆ ಎನ್ನುವುದನ್ನು ಲೆಕ್ಕಹಾಕಿ ಬೆಳೆಯುತ್ತಾರೆ. ದೇಶ ಮತ್ತು ರಾಜ್ಯದಲ್ಲಿ ಸಂಭವಿಸಬಹುದಾದ ಘಟನೆಗಳನ್ನು ಈ ಭವಿಷ್ಯವಾಣಿಯ ಮೂಲಕ ತಿಳಿದುಕೊಳ್ಳುತ್ತಾರೆ.

ಸೀಮಾಂದ್ರ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ರಾಜ್ಯಗಳ ಸಾವಿರಾರು ಕುಟುಂಬಗಳಿಗೆ ದೇವರ ಗುಡ್ಡದ ಮಾಳಮ್ಮ ಮಲ್ಲೇಶ್ವರ ಮನೆದೇವರಾಗಿದ್ದಾರೆ.

ಸೀಮಾಂದ್ರ ಪ್ರದೇಶದ ಕರ್ನೂಲು ಜಲ್ಲೆಯ ನೂರಾರು ಪೊಲೀಸರು ಸ್ಥಳದಲ್ಲಿದ್ದರು. ಲಕ್ಷಕ್ಕೂ ಅಧಿಕ ಭಕ್ತರು, ಉತ್ಸಾಹಿಗಳು ಈ ಹೊಡೆದಾಟಕ್ಕೆ ಸಾಕ್ಷಿಯಾದರು.

ಆಚರಣೆಗ ಅಡ್ಡಿ ಮಾಡಿಲ್ಲ

‘ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆದೋನಿ ಮತ್ತು ಅಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ, ಗುಡ್ಡದಲ್ಲಿ ಬೆಳಗಿನ 6 ಗಂಟೆಯಿಂದ ಸಂಜೆ 6 ಗಂಟೆ ಒಳಗೆ ಧಾರ್ಮಿಕ ವಿಧಿ ವಿಧಾನಗಳನ್ನು ಮುಗಿಸುವಂತೆ ಭಕ್ತರಿಗೆ ಸೂಚನೆ ನೀಡಲಾಗಿತ್ತು. ಆದರೆ ಪುರಾತನ ಕಾಲದಿಂದಲೂ ನಡೆದು ಬಂದ ಪದ್ಧತಿಯನ್ನು ಬದಲಾಯಿಸುವುದು ಬೇಡವೆಂದು ಸಂಪ್ರದಾಯ ಮುಂದುವರಿಸಲು ಅವಕಾಶ ನೀಡಿದ್ದೇವೆ.  ಹೊಡೆದಾಟದಿಂದ ಆಗುವ ಅನಾಹುತದ ಬಗ್ಗೆ ನಮ್ಮ ಇಲಾಖೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದ್ಡರು. ಬಡಿಗೆ ಬಡಿದಾಟದಲ್ಲಿ ಸಾವು ಸಂಭವಿಸಲಿಲ್ಲ. ಆದರೆ  ಮರದಲ್ಲಿ ಹೆಚ್ಚಿನ ಜನ ಕುಳಿತಿದ್ದರಿಂದ ಭಾರ ತಾಳಲಾರದೆ ಕೊಂಬೆ ಮುರಿದು ಮೂವರು ಸಾವನ್ನಪ್ಪಿದರು’ ಎಂದು ಕರ್ನೂಲ್‌ ಎಸ್‌ಪಿ ಕೃಷ್ಣ ಕಾಂತ್‌ ಮಾಧ್ಯಮದವರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.