ADVERTISEMENT

ಕೊನೆಗೂ ಉಪಕಾಲುವೆ ನವೀಕರಣ ಆರಂಭ

ರೈತರ ಬಹುವರ್ಷಗಳ ಬೇಡಿಕೆ ಮನ್ನಿಸಿದ ತುಂಗಭದ್ರಾ ನೀರಾವರಿ ನಿಗಮ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 3 ಜನವರಿ 2020, 13:58 IST
Last Updated 3 ಜನವರಿ 2020, 13:58 IST
ತುಂಗಭದ್ರಾ ನೀರಾವರಿ ನಿಗಮದಿಂದ ಬಸವ ಕಾಲುವೆ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿರುವುದು
ತುಂಗಭದ್ರಾ ನೀರಾವರಿ ನಿಗಮದಿಂದ ಬಸವ ಕಾಲುವೆ ನವೀಕರಣ ಕಾಮಗಾರಿ ಕೈಗೆತ್ತಿಕೊಂಡಿರುವುದು   

ಹೊಸಪೇಟೆ: ಕೊನೆಗೂ ವಿಜಯನಗರ ಉಪಕಾಲುವೆಗಳ ಆಧುನೀಕರಣ ಕೆಲಸವನ್ನು ತುಂಗಭದ್ರಾ ನೀರಾವರಿ ನಿಗಮ ಆರಂಭಿಸಿದೆ.

ಇದರೊಂದಿಗೆ ಈ ಭಾಗದ ರೈತರ ಬಹುವರ್ಷಗಳ ಬೇಡಿಕೆ ಮನ್ನಿಸಿದಂತಾಗಿದೆ. ವಾರದ ಹಿಂದೆ ಕಾಮಗಾರಿ ಆರಂಭಗೊಂಡಿದೆ. ಕಾರ್ಮಿಕರಲ್ಲದೆ ಹಿಟಾಚಿ, ಜೆ.ಸಿ.ಬಿ., ಟಿಪ್ಪರ್‌ ಬಳಸಿಕೊಂಡು ಕಾಮಗಾರಿ ನಡೆಸಲಾಗುತ್ತಿದೆ. ರಾಯ, ಬಸವ, ಬೆಲ್ಲ ಹಾಗೂ ಕಾಳಘಟ್ಟ ಉಪಕಾಲುವೆಗಳ ಕೆಲಸ ತ್ವರಿತಗತಿಯಲ್ಲಿ ನಡೆಯುತ್ತಿದೆ. ಶೀಘ್ರದಲ್ಲೇ ತುರ್ತಾ ಕಾಲುವೆಯ ಕೆಲಸವೂ ಶುರುವಾಗಲಿದೆ ಎಂದು ಗೊತ್ತಾಗಿದೆ. ಇನ್ನೂ ಎಡಭಾಗದ ಉಪಕಾಲುವೆಗಳ ನವೀಕರಣ ಕೆಲಸ ಏಪ್ರಿಲ್‌ನಲ್ಲಿ ಶುರುವಾಗಲಿದೆ.

ರೈತರ ಸಮ್ಮತಿಯಂತೆ ಡಿಸೆಂಬರ್‌ ಒಂದರಿಂದ ಉಪಕಾಲುವೆಗಳಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿ, ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿ ಜನವರಿ ಅಂತ್ಯದ ವರೆಗೂ ನಿರಂತರವಾಗಿ ನಡೆಯಲಿದೆ. ಬಳಿಕ ರೈತರ ಬೆಳೆಗೆ ನೀರು ಹರಿಸಿ, ಅದಾದ ಬಳಿಕ ಮತ್ತೆ ಕೆಲಸ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ADVERTISEMENT

ಉಪಕಾಲುವೆಗಳ ಆಧುನೀಕರಣಕ್ಕೆ ಏಷ್ಯನ್‌ ಅಭಿವೃದ್ಧಿ ಬ್ಯಾಂಕಿನಿಂದ ಒಟ್ಟು ₹430 ಕೋಟಿ ಬಿಡುಗಡೆಯಾಗಿದೆ. ಆರ್‌.ಎನ್‌. ಶೆಟ್ಟಿ ಕಂಪನಿಗೆ ಕೆಲಸ ವಹಿಸಲಾಗಿದೆ. 2018ರ ಮಾರ್ಚ್‌ನಲ್ಲೇ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ, ಮಳೆಗಾಲದ ಆರಂಭದಲ್ಲೇ ಜಲಾಶಯ ತುಂಬಿ, ಕಾಲುವೆಗಳಿಗೆ ನೀರು ಹರಿಸಲಾಗಿತ್ತು.

‘ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ’ ಎಂದು ರೈತರು ಆರೋಪಿಸಿದ್ದರು. ಹೀಗಾಗಿ ನೀರಾವರಿ ನಿಗಮವು ಎರಡ್ಮೂರು ಸಭೆಗಳನ್ನು ನಡೆಸಿ, ರೈತರನ್ನು ಭರವಸೆಗೆ ತೆಗೆದುಕೊಂಡ ಬಳಿಕ ಕೆಲಸ ಕೈಗೆತ್ತಿಕೊಂಡಿದೆ.

ತುಂಗಭದ್ರಾ ಜಲಾಶಯದಿಂದ ಹೊಸಪೇಟೆ ತಾಲ್ಲೂಕು, ಕಂಪ್ಲಿ ವರೆಗೆ ಈ ಉಪಕಾಲುವೆಗಳು ಹಾದು ಹೋಗಿವೆ. ಇವುಗಳನ್ನೇ ನೆಚ್ಚಿಕೊಂಡು ರೈತರು ಕಬ್ಬು, ಬಾಳೆ, ಭತ್ತ ಬೆಳೆಯುತ್ತಾರೆ. ಆದರೆ, ಅವುಗಳು ನಿರ್ಮಾಣಗೊಂಡ ಬಳಿಕ ನವೀಕರಣಗೊಂಡಿರಲಿಲ್ಲ.

ಇದರಿಂದಾಗಿ ಕಾಲುವೆಗಳಲ್ಲಿ ಮುಳ್ಳು, ಕಂಟಿ ಹಾಗೂ ದಟ್ಟವಾಗಿ ಪೊದೆ ಬೆಳೆದಿತ್ತು. ಕೆಲವು ಕಡೆ ಕಾಲುವೆಗಳು ಅಸ್ತಿತ್ವವನ್ನೇ ಕಳೆದುಕೊಂಡಿದ್ದವು. ಅಷ್ಟರಮಟ್ಟಿಗೆ ಅವುಗಳು ಹಾಳಾಗಿದ್ದವು. ಇದರಿಂದ ಕೊನೆಯ ಭಾಗದ ರೈತರಿಗೆ ನೀರು ತಲುಪುತ್ತಿರಲಿಲ್ಲ. ಹೀಗಾಗಿ ಅನೇಕ ವರ್ಷಗಳಿಂದ ರೈತರು ಹೋರಾಟ ನಡೆಸುತ್ತಿದ್ದರು. ಈಗ ಅದಕ್ಕೆ ಫಲ ಸಿಕ್ಕಿದೆ.

‘ತಡವಾಗಿಯಾದರೂ ಉಪಕಾಲುವೆಗಳ ನವೀಕರಣ ಕೆಲಸ ಕೈಗೆತ್ತಿಕೊಂಡಿರುವುದು ಸ್ವಾಗತಾರ್ಹ. ನಿಗದಿತ ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸಬೇಕು’ ಎಂದು ರೈತ ಗುರುಬಸಪ್ಪ ಆಗ್ರಹಿಸಿದರು.

‘ನಾಲ್ಕೈದು ದಶಕಗಳ ಹಿಂದೆ ನಿರ್ಮಿಸಿದ ಕಾಲುವೆಗಳು ಇದುವರೆಗೆ ಸರಿಯಾಗಿದ್ದವು. ಕಾರಣ ಒಳ್ಳೆಯ ಗುಣಮಟ್ಟದ ಸಾಮಗ್ರಿ ಬಳಸಿ ನಿರ್ಮಿಸಲಾಗಿತ್ತು. ಈಗ ಕೂಡ ಗುಣಮಟ್ಟಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಕಳಪೆ ಕಾಮಗಾರಿಯಾದರೆ ನೀರು ಹರಿಯುವ ವೇಗಕ್ಕೆ ಕಾಲುವೆ ಕಿತ್ತು ಹೋಗುವ ಸಾಧ್ಯತೆ ಹೆಚ್ಚಿರುತ್ತದೆ. ನೀರಾವರಿ ನಿಗಮ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು’ ಎಂದು ರೈತ ಹುಲುಗಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.