ADVERTISEMENT

ಬಳ್ಳಾರಿ: ಅಕ್ರಮ ಮರಳು ಸಾಗಣೆ ತಡೆದ ಗ್ರಾಮ ಲೆಕ್ಕಿಗನ ಕೊಲೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 11:21 IST
Last Updated 2 ಡಿಸೆಂಬರ್ 2021, 11:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಳ್ಳಾರಿ: ಅಕ್ರಮ ಮರಳು ಸಾಗಣೆಗೆ ತಡೆಯೊಡ್ಡಿದ ಗ್ರಾಮ ಲೆಕ್ಕಿಗರ ಮನೆಗೆ ಮಚ್ಚು, ಲಾಂಗ್‌ ಹಾಗೂ ಚಾಕುಗಳನ್ನು ಹಿಡಿದು ನುಗ್ಗಿದ ಗುಂಪೊಂದು ಅವರ ಕೊಲೆಗೆ ಯತ್ನಿಸಿತಲ್ಲದೆ, ರಕ್ಷಣೆಗೆ ಧಾವಿಸಿದ ಪತ್ನಿ, ಇಬ್ಬರು ಮಕ್ಕಳು ಮತ್ತು ನಾದಿನಿ (ಪತ್ನಿ ಸೋದರಿ) ಮೇಲೂ ಹಲ್ಲೆ ನಡೆಸಿದ ಘಟನೆ ಬಳ್ಳಾರಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಈ ಘಟನೆಯಿಂದ ಜಿಲ್ಲಾಡಳಿತ ಆತಂಕಗೊಂಡಿದೆ. ‘ಗ್ರಾಮ ಲೆಕ್ಕಿಗರ ಮೇಲೆ ಹಲ್ಲೆ ಮಾಡಿರುವ ತಂಡದ ಸದಸ್ಯರನ್ನು ತಕ್ಷಣ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಗ್ರಾಮ ಲೆಕ್ಕಿಗ ವೆಂಕಟಸ್ವಾಮಿ ಮತ್ತು ಅವರ ಪತ್ನಿ ವಿಮ್ಸ್‌ಗೆ ದಾಖಲಾಗಿದ್ದಾರೆ. ಇಬ್ಬರು ಮಕ್ಕಳು ಮತ್ತು ನಾದಿನಿಗೂ ಗಾಯಗಳಾಗಿವೆ. ವೆಂಕಟಸ್ವಾಮಿ ಚಿಕಿತ್ಸೆ ಪಡೆಯುತ್ತಿರುವ ವಾರ್ಡ್‌ಗೆ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ADVERTISEMENT

ಬಳ್ಳಾರಿ ತಾಲೂಕು ರೂಪನಗುಡಿ ಹೋಬಳಿ ತೊಲಮಾಮಿಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಗರಿ ಹಳ್ಳದಲ್ಲಿ ಮಂಗಳವಾರ ಮಧ್ಯರಾತ್ರಿ ಅಕ್ರಮವಾಗಿ ಮರಳು ತುಂಬುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ವೆಂಕಟಸ್ವಾಮಿ ಮತ್ತಿತರರು ತಡೆದರು. ಆಗ ಗಲಾಟೆಯಾಗಿ, ತೊಲಮಾಮಿಡಿ ಗ್ರಾಮ ಲೆಕ್ಕಿಗ ಗಣೇಶ್‌ ಮೇಲೆ ಹಲ್ಲೆ ನಡೆದಿತ್ತು. ತದನಂತರ, ಮಕ್ಬೂಲ್‌, ರಫೀಕ್‌, ಇಲಿಯಾಸ್‌ ಮತ್ತಿತರರು ಬುಧವಾರ ರಾತ್ರಿ ಮಚ್ಚು, ಲಾಂಗ್‌, ಚಾಕು ಹಿಡಿದು ವೆಂಕಟಸ್ವಾಮಿ ಮನೆಗೆ ನುಗ್ಗಿ ದಾಂದಲೆ ನಡೆಸಿದರು. ಗ್ಯಾಂಗ್‌ನಲ್ಲಿ ಕೆಲವು ಮಹಿಳೆಯರೂ ಇದ್ದರು ಎಂದು ಬ್ರೂಸ್‌ ಪೇಟೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ನಾಲ್ವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದವರನ್ನು ಸಂಜೆ ಒಳಗಾಗಿ ಬಂಧಿಸುವಂತೆ ಜಿಲ್ಲಾಧಿಕಾರಿ ಪವನ್‌ ಕುಮಾರ್‌ ಮಾಲಪಾಟಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೈದುಲು ಅಡಾವತ್‌ ಅವರಿಗೆ ಸೂಚಿಸಿದ್ದಾರೆ.

ಮರಳು ಮಾಫಿಯಾಕ್ಕೆ ಕಡಿವಾಣ?
ಬಳ್ಳಾರಿಯಲ್ಲಿ ಸದ್ದುಗದ್ದಲವಿಲ್ಲದೆ ಕಾರ್ಯಾಚರಣೆ ನಡೆಸುತ್ತಿರುವ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಪವ‌ನ್‌ ಕುಮಾರ್‌ ಮಾಲಪಾಟಿ ತೀರ್ಮಾನಿಸಿದ್ದಾರೆ.

ಗ್ರಾಮ ಲೆಕ್ಕಿಗರ ಮೇಲೆ ನಡೆದಿರುವ ದಾಳಿಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಧಿಕಾರಿ, ವಾರದೊಳಗೆ ಅಕ್ರಮ ಮರಳು ಸಾಗಣೆ ತಡೆಗೆ ಅಂತರ್‌ ಇಲಾಖೆಗಳ (ಇಂಟರ್‌ ಡಿಪಾರ್ಟ್‌ಮೆಂಟ್ಸ್‌) ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ ರಚಿಸುವುದಾಗಿ ತಮ್ಮನ್ನು ಭೇಟಿಯಾದ ಪತ್ರಕರ್ತರಿಗೆ ತಿಳಿಸಿದರು.

ಸಿರುಗುಪ್ಪದಲ್ಲಿ ಮರಳು ದಾಸ್ತಾನು ಅಂಗಳವಿದೆ. ಬಳ್ಳಾರಿಯಲ್ಲಿ ಇಲ್ಲ. ಇದೀಗ ಎರಡು ಸ್ಥಳಗಳನ್ನು ಬಳ್ಳಾರಿಯಲ್ಲಿ ಗುರುತಿಸಲಾಗಿದೆ. ಪರಿಸರಕ್ಕೆ ಸಂಬಂಧಿಸಿದ ಒಪ್ಪಿಗೆ ಪಡೆದು, ಮರಳು ಗಣಿಗಾರಿಕೆಗೆ ಟೆಂಡರ್‌ ಆಹ್ವಾನಿಸಿ, ಕೆಎಸ್‌ಎಂಸಿಎಲ್‌ ಮೂಲಕ ಮಾರಾಟ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಟ್ರ್ಯಾಕ್ಟರ್‌ ತಡೆದಿದ್ದಕ್ಕೆ ಹಲ್ಲೆ
ಹಗರಿ ಹಳ್ಳದಲ್ಲಿ ಎರಡು ಟ್ರ್ಯಾಕ್ಟರ್‌ನ ಟ್ರೇಲರ್‌ಗಳಿಗೆ ಅಕ್ರಮವಾಗಿ ಮರಳು ತುಂಬುತ್ತಿದ್ದ ಆರೋಪಿಗಳನ್ನು ತಡೆದಿದ್ದರಿಂದ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ವೆಂಕಟಸ್ವಾಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

‘ಹಳ್ಳದಿಂದ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿದೆ’ ಎಂಬ ಸುಳಿವು ಆಧರಿಸಿ, ತೊಲಮಾಮಿಡಿ ಗ್ರಾಮ ಲೆಕ್ಕಿಗ ಜೆ. ಗಣೇಶ್‌ ಮತ್ತು ಕುಂಟನಾಳ್‌ ಗ್ರಾಮ ಲೆಕ್ಕಿಗ ಹಳ್ಳಿ ಮಂಜುನಾಥ್‌, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಜತೆಗೂಡಿ ಸ್ಥಳಕ್ಕೆ ತೆರಳಿ ಆರೋಪಿಗಳಿಗೆ ತಡೆಯೊಡ್ಡಲಾಯಿತು. ಆ ಸಮಯದಲ್ಲಿ ಗಣೇಶ್‌ ಮೇಲೆ ಹಲ್ಲೆ ನಡೆಸಿ, ಆರೋಪಿಗಳು ಮತ್ತೊಂದು ಟ್ರ್ಯಾಕ್ಟರ್‌ನಲ್ಲಿ ಪರಾರಿಯಾದರು. ಈ ಘಟನೆ ಹಿನ್ನೆಲೆಯಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ವೆಂಕಟಸ್ವಾಮಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಆದರೆ, ಆರೋಪಿಗಳು ಮತ್ತು ಪಿರ್ಯಾದಿ ಒಂದೇ ಏರಿಯಾದವರಾಗಿದ್ದು, ಹಲ್ಲೆಗೆ ವೈಯಕ್ತಿಕ ಕಾರಣವೂ ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಎಷ್ಟೇ ಪ್ರಭಾವಿಗಳಾದರೂ ಕ್ರಮ: ಡಿ.ಸಿ
ಗ್ರಾಮ ಲೆಕ್ಕಿಗ ಮತ್ತು ಅವರ ಕುಟುಂಬದ ಮೇಲೆ ದಾಳಿ ನಡೆಸಿದ ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.

ಗುರುವಾರ ಬೆಳಗಿನ ಜಾವ ವಿಮ್ಸ್‌ನಲ್ಲಿ ಕುಟುಂಬ ಸದಸ್ಯರನ್ನು ಭೇಟಿಯಾಗಿ ಮಾಹಿತಿ ಪಡೆದ ಬಳಿಕ ಮಾತನಾಡಿದ ಡಿ.ಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಕುಟುಂಬ ಸದಸ್ಯರಿಗೆ ತಿಳಿಸಿದರು.

ಘಟನೆಯಿಂದ ಹೆದರದೆ, ಧೈರ್ಯವಾಗಿರುವಂತೆಯೂ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.