ಇರ್ಫಾನ್ ರಜಾಕ್
ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ 2023-24ನೇ ಸಾಲಿನ 13ನೇ ವಾರ್ಷಿಕ ಘಟಿಕೋತ್ಸವ ಸಮಾರಂಭವು ಸೆ.4ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವವಿದ್ಯಾಲಯದ ಬಯಲು ರಂಗಮಂದಿರದ ಆವರಣದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ.ಎಂ.ಮುನಿರಾಜು ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು, ಕುಲಾಧಿಪತಿಗಳೂ ಆದ ಥಾವರಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ನವದೆಹಲಿಯ ‘ಇಂಟರ್ ಯುನಿವರ್ಸಿಟಿ ಎಕ್ಸಲರೇಟರ್’ ನಿರ್ದೇಶಕ ಪ್ರೊ.ಅವಿನಾಶ್ ಚಂದ್ರ ಪಾಂಡೆ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದರು.
ಉನ್ನತ ಶಿಕ್ಷಣ ಸಚಿವರೂ, ವಿಶ್ವವಿದ್ಯಾಲಯದ ಸಮ-ಕುಲಾಧಿಪತಿಯೂ ಆದ ಡಾ.ಎಂ.ಸಿ.ಸುಧಾಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ವಿಶ್ವವಿದ್ಯಾಲಯದ ಸಿಂಡಿಕೇಟ್, ವಿದ್ಯಾವಿಷಯಕ ಪರಿಷತ್ ಸದಸ್ಯರು, ಕುಲಸಚಿವ ನಾಗರಾಜು.ಸಿ ಹಾಗೂ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ಎಂ.ಸಾಲಿ ಇರಲಿದ್ದಾರೆ ಎಂದರು.
ಪರೀಕ್ಷಾ ಫಲಿತಾಂಶ: ವಿಶ್ವವಿದ್ಯಾಲಯದ ಸ್ನಾತಕ ಪದವಿಯಲ್ಲಿ ಒಟ್ಟು 19,179, ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 1,845 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಉತ್ತೀರ್ಣರಾಗಿದ್ದಾರೆ ಎಂದು ಕುಲಪತಿ ಹೇಳಿದರು.
ಮೂವರಿಗೆ ಗೌರವ ಡಾಕ್ಟರೇಟ್: ಬೆಂಗಳೂರಿನ ಪ್ರೆಸ್ಟೀಜ್ ಗ್ರೂಪ್‌ನ ಗೌರವಾಧ್ಯಕ್ಷ, ರಿಯಲ್ ಎಸ್ಟೇಟ್ ಉದ್ಯಮಿ ಇರ್ಫಾನ್ ರಜಾಕ್, ಲೇಖಕಿ, ಆಯುರ್ವೇದ ತಜ್ಞೆ ಡಾ.ವಸುಂಧರಾ ಭೂಪತಿ, ಗಣಿ ಉದ್ಯಮಿ ಬಾವಿಹಳ್ಳಿ ನಾಗನಗೌಡ ಸೇರಿ ಮೂರು ಮಹನೀಯರಿಗೆ ಈ ಬಾರಿಯ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುತ್ತಿದೆ ಎಂದು ಹೇಳಿದರು.
ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗಗಳ 42 ವಿದ್ಯಾರ್ಥಿಗಳು 51 ಚಿನ್ನದ ಪದಕಗಳ ಪಡೆಯಲಿದ್ದಾರೆ. ವಿವಿಧ ವಿಭಾಗಗಳ ಒಟ್ಟು 59 ಸಂಶೋಧನಾರ್ಥಿಗಳು ಪಿಎಚ್‌ಡಿ ಪದವಿ ಪಡೆಯಲಿದ್ದಾರೆ. ಎಲ್ಲ ವಿಭಾಗಗಳ ಸ್ನಾತಕ ಪದವಿಯ 80 ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿಯಿಂದ 75 ವಿದ್ಯಾರ್ಥಿಗಳು ಸೇರಿ ಒಟ್ಟು 155 ವಿದ್ಯಾರ್ಥಿಗಳು ರ‍್ಯಾಂಕ್ ಪ್ರಮಾಣ ಪತ್ರಗಳನ್ನು ಪಡೆಯಲಿದ್ದಾರೆ ಎಂದು ಹೇಳಿದರು.
ವಾಣಿಜ್ಯ ವಿದ್ಯಾರ್ಥಿನಿಗೆ ಚಿನ್ನದ 4 ಪದಕ: ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ ಹಂಸ ಎನ್. 4 ಚಿನ್ನದ ಪದಕ ಪಡೆಯಲಿದ್ದಾರೆ. ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿ ರಾಜೇಶ್ವರಿ 3 ಚಿನ್ನದ ಪದಕ, ಭೌತಶಾಸ್ತ್ರ ವಿಭಾಗದ ಮನೋಜ್, ರಸಾಯನಶಾಸ್ತ್ರ ವಿಭಾಗದ ಸುಹಾನಾ ತಸ್ಲೀಮ್, ನಂದಿಹಳ್ಳಿಯ ಸ್ನಾತಕೋತ್ತರ ಕೇಂದ್ರದ ಸಮಾಜಕಾರ್ಯ ವಿಭಾಗದ ಶಿಲ್ಪಾ, ಬಿಬಿಸಿ ಕಾಲೇಕ್‌ನ ಬಿಕಾಂ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಮತ್ತು ವೀರಶೈವ ಮಹಾವಿದ್ಯಾಲಯದ ಬಿಎಸ್ಸಿ ವಿದ್ಯಾರ್ಥಿ ಮಹಮ್ಮದ್ ನಕೀಬ್‌ಅಲಿ ತಲಾ ಎರಡು ಚಿನ್ನದ ಪದಕ ಪಡೆಯಲಿದ್ದಾರೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ಹೇಳಿದೆ.
ಕುಲಸಚಿವ ನಾಗರಾಜು.ಸಿ ಹಾಗೂ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ಎಂ.ಸಾಲಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ವೆಚ್ಚ ಕಡಿಮೆಯೂ ಆಗಬಹುದು: ಸ್ಪಷ್ಟನೆ
ಘಟಿಕೋತ್ಸವಕ್ಕೆ ₹60 ಲಕ್ಷ ವಿನಿಯೋಗಿಸುತ್ತಿರುವ ಬಗ್ಗೆ ಕೇಳಿ ಬಂದಿರುವ ಆಕ್ಷೇಪಗಳಿಗೆ ಉತ್ತರಿಸಿದ ಕುಲಪತಿ ಮುನಿರಾಜು ‘ಇಡೀ ಕಾರ್ಯಕ್ರಮಕ್ಕೆಂದು ₹60 ಲಕ್ಷಕ್ಕೆ ಅನುಮೋದನೆ ಪಡೆಯಲಾಗಿದೆ. ಇದರ ಅರ್ಥ ಇಡೀ ₹60 ಲಕ್ಷ ಖರ್ಚು ಮಾಡಲಾಗುತ್ತದೆ ಎಂದಲ್ಲ. ಕಡಿಮೆಯೂ ಆಗಬಹುದು. ಅದನ್ನು ಸಿಂಡಿಕೇಟ್‌ನಲ್ಲಿ ಇರಿಸಲಾಗುವುದು’ ಎಂದು ಸಮಜಾಯಿಷಿ ನೀಡಿದರು. ಹಿಂದಿನ ಘಟಿಕೋತ್ಸವದ ಲೆಕ್ಕಪತ್ರ ಮಂಡನೆಯಾಗದ ಬಗ್ಗೆ ಮಾತನಾಡಿದ ಅವರು ಎರಡೂ ಲೆಕ್ಕಪತ್ರಗಳನ್ನು ಒಟ್ಟಿಗೆ ಮುಂದಿನ ಸಿಂಡಿಕೇಟ್ ಸಭೆಯಲ್ಲಿ ಮಂಡಿಸುವುದಾಗಿ ತಿಳಿಸಿದರು. ಗೌರವ ಡಾಕ್ಟರೇಟ್‌ಗೆ ಬಂದ ಅರ್ಜಿಗಳನ್ನು ಮಾತ್ರವೇ ಪರಿಗಣಿಸಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಮುಂದಿನ ದಿನಗಳಲ್ಲಿ ಪತ್ರಕರ್ತರು ಸಂಘ ಸಂಸ್ಥೆಗಳ ಅಭಿಪ್ರಾಯ ಕೇಳುವುದಾಗಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.