ADVERTISEMENT

ನಮ್ಮ ದರ ಕೊಟ್ಟರೆ ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಕೆ: ಭೀಮ ನಾಯ್ಕ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2023, 19:03 IST
Last Updated 28 ಆಗಸ್ಟ್ 2023, 19:03 IST
ಭೀಮ ನಾಯ್ಕ
ಭೀಮ ನಾಯ್ಕ   

ಬಳ್ಳಾರಿ: ‘ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್‌) ನಷ್ಟ ಮಾಡಿಕೊಂಡು ತಿರುಪತಿ ಲಡ್ಡುಗೆ ನಂದಿನಿ ತುಪ್ಪ ಪೂರೈಸುವ ಪ್ರಶ್ನೆಯೇ ಇಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಭೀಮ ನಾಯ್ಕ ಸ್ಪಷ್ಟಪಡಿಸಿದರು.

‘ಇದು ರೈತರ ಒಕ್ಕೂಟ. ನಷ್ಟ ಮಾಡಿಕೊಂಡು ತಿರುಪತಿಗೆ ತುಪ್ಪ ಕಳಿಸಲು ಸಾಧ್ಯವೇ? ಮಾರುಕಟ್ಟೆಯಲ್ಲಿ ನಂದಿನಿ ತುಪ್ಪಕ್ಕೆ ವಿಪರೀತ ಬೇಡಿಕೆ ಇದೆ. ಗ್ರಾಹಕರೇ ಕೆ.ಜಿಗೆ ₹ 610 ಕೊಟ್ಟು ಖರೀದಿಸುತ್ತಾರೆ’ ಎಂದು ಅವರು ಹೇಳಿದರು.

ಇಲ್ಲಿನ ಬಸವ ಭವನದಲ್ಲಿ ಸೋಮವಾರ ನಡೆದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಉತ್ಪಾದಕರ ಒಕ್ಕೂಟದ ವಾರ್ಷಿಕ ಮಹಾಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ನಂದಿನಿ ತುಪ್ಪದ ಹೆಸರಿನಲ್ಲಿ ರಾಜಕೀಯ ನಡೆದಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಯಾವ ಸರ್ಕಾರವಿತ್ತು? ತಿರುಪತಿಗೆ ಎಷ್ಟು ಲೀಟರ್ ತುಪ್ಪ ಪೂರೈಸಲಾಯಿತು? ಬಿಜೆಪಿ ಸರ್ಕಾರದ 4 ವರ್ಷದ ಅವಧಿಯಲ್ಲಿ ಒಂದೇ ಒಂದು ಲೀಟರ್‌ ತುಪ್ಪ ಕಳಿಸಲಿಲ್ಲ’ ಎಂದು ಲೇವಡಿ ಮಾಡಿದರು.

‘ಕೆಎಂಎಫ್ ವರ್ಷಕ್ಕೆ 30 ಸಾವಿರ ಟನ್‌ ತುಪ್ಪ ಉತ್ಪಾದಿಸುತ್ತಿದೆ. ಇನ್ನು 10 ಸಾವಿರ ಟನ್‌ ತುಪ್ಪಕ್ಕೆ ಬೇಡಿಕೆ ಇದೆ. ಹಾಲಿನ ದರ ₹3 ಹೆಚ್ಚಳವಾದ ಬಳಿಕ ಸಂಸ್ಕರಣೆ ಪ್ರಮಾಣ ಏರಿದೆ. 86 ರಿಂದ 87 ಲಕ್ಷ ಲೀಟರ್ ಸಂಗ್ರಹಿಸಲಾಗುತ್ತಿದೆ. ರಾಬಕೊವಿ ಸಂಗ್ರಹವೇ ಪ್ರತಿನಿತ್ಯ 10ರಿಂದ 15 ಸಾವಿರ ಲೀಟರ್‌ ಹೆಚ್ಚಿದೆ’ ಎಂದು ಅವರು ತಿಳಿಸಿದರು.

ತಗ್ಗಿದ ಹಾಲಿನ ಪುಡಿ ಉತ್ಪಾದನೆ
ಎಲ್ಲ ಶಾಲೆ ಮತ್ತು ಅಂಗನವಾಡಿಗಳಿಗೆ ಹಾಲಿನ ಪುಡಿ ಕಳಿಸಲಾಗುತ್ತಿದೆ. ಕಲಬುರಗಿ ಭಾಗಕ್ಕೆ ಪೂರೈಕೆ ಆಗುತ್ತಿಲ್ಲ. ಹಾಲಿನ ಪುಡಿ ಉತ್ಪಾದನೆ ಕಡಿಮೆ ಆಗಿದ್ದರಿಂದ ಸಮಸ್ಯೆ ಆಗಿದೆ ಎಂದು ಕೆಎಂಎಫ್‌ ಮೂಲಗಳು ಸ್ಪಷ್ಟಪಡಿಸಿವೆ. ಒಂದು ಕೆ.ಜಿ ಹಾಲಿನ ಪುಡಿ ತಯಾರಿಕೆಗೆ ಎಂಟು ಲೀಟರ್‌ ಹಾಲು ಬೇಕಾಗಲಿದೆ. ಪ್ರತಿ ಕೆ.ಜಿ ಉತ್ಪಾದನಾ ವೆಚ್ಚ ₹350 ಬೀಳಲಿದೆ. ಒಕ್ಕೂಟಕ್ಕೆ ಸರ್ಕಾರ ಪಾವತಿಸುವ ದರ ₹300. ಇದರಿಂದಾಗಿ ಹಾಲಿನ ಪುಡಿ ಉತ್ಪಾದನೆ ಕಡಿಮೆ ಮಾಡಲಾಗಿದೆ ಎಂದು ಮೂಲಗಳು ವಿವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.