ADVERTISEMENT

ಬಳ್ಳಾರಿ: ಉಗ್ರಪ್ಪನೋ, ಶಾಂತಕ್ಕನೋ?

ಶುರುವಾಯ್ತು ಸೋಲು–ಗೆಲುವಿನ ಲೆಕ್ಕಾಚಾರ

ಕೆ.ನರಸಿಂಹ ಮೂರ್ತಿ
Published 3 ನವೆಂಬರ್ 2018, 13:52 IST
Last Updated 3 ನವೆಂಬರ್ 2018, 13:52 IST
ವಿ.ಎಸ್‌.ಉಗ್ರಪ್ಪ ಹಾಗೂ ಜೆ.ಶಾಂತಾ
ವಿ.ಎಸ್‌.ಉಗ್ರಪ್ಪ ಹಾಗೂ ಜೆ.ಶಾಂತಾ   

ಬಳ್ಳಾರಿ: ಲೋಕಸಭೆ ಉಪಚುನಾವಣೆಯ ಮತದಾನ ಮುಗಿಯುತ್ತಿದ್ದಂತೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಆಯ್ಕೆಯಾಗುತ್ತಾರೋ ಅಥವಾ ಬಿಜೆಪಿಯ ಶಾಂತಾ ಎರಡನೇ ಬಾರಿ ಗೆಲ್ಲುತ್ತಾರೋ ಎಂಬ ಚರ್ಚೆಯು ಆರಂಭವಾಗಿದೆ. ಅದರ ಹಿಂದೆಯೇ, ಸೋಲು–ಗೆಲುವಿನ ರಾಜಕೀಯ ಲೆಕ್ಕಾಚಾರಗಳು ನಡೆದಿವೆ.

ಬಳ್ಳಾರಿ ಉಪಚುನಾವಣೆಯು ಮುಂದಿನ ಲೋಕಸಭೆ ಚುನಾವಣೆಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಕುತೂಹಲವೂ ಮೂಡಿದೆ

ಫಲಿತಾಂಶವು ಬಿಜೆಪಿ, ಕಾಂಗ್ರೆಸ್–ಜೆಡಿಎಸ್‌ ಬಲಾಬಲವನ್ನೂ ನಿರ್ಧರಿಸುವುದರಿಂದ ಹಾಗೂ ಅಭ್ಯರ್ಥಿಗಳ ಭವಿಷ್ಯದ ಮೇಲೂ ಪರಿಣಾಮ ಬೀರುವುದರಿಂದ ಚರ್ಚೆಗಳು ಬಿಸಿಯೇರಿವೆ.

ADVERTISEMENT

ಹೊರಗಿನವರು–ಒಳಗಿನವರು: ಅಭ್ಯರ್ಥಿಯಾಗಿ ಉಗ್ರಪ್ಪ ಹೆಸರನ್ನು ಕಾಂಗ್ರೆಸ್ ಘೋಷಿಸಿದ ದಿನದಿಂದಲೂ ಅವರು ಹೊರಗಿನವರು ಎಂದು ಬಿಜೆಪಿಯು ಪ್ರತಿಪಾದಿಸಿತ್ತು.

ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ ಕೂಡ ಶಾಂತಾ ಅವರೇನು ಬಳ್ಳಾರಿಯವರೇ ಎಂಬ ಪ್ರಶ್ನೆಯನ್ನು ಮುಂದು ಮಾಡಿತ್ತು. ‘ಬಳ್ಳಾರಿಯ ಮಗಳು’ ಎಂಬ ಅಸ್ತ್ರವನ್ನು ಮುಂದೊಡ್ಡಿದ್ದ ಬಿಜೆಪಿಯ ಎದುರಿಗೆ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಬಹುತೇಕ ಸಚಿವರು, ಶಾಸಕರು ಕ್ಷೇತ್ರದಲ್ಲಿ ಠಿಕಾಣಿ ಹೂಡಿ ಪ್ರಚಾರ ತಂತ್ರಗಳನ್ನು ರೂಪಿಸಿದ್ದರು.

ಅದರೊಂದಿಗೆ, ಚುನಾವಣೆ ಕಣವು ಶಾಂತಾ ಸಹೋದರ ಶಾಸಕ ಬಿ.ಶ್ರೀರಾಮುಲು ಮತ್ತು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಡುವಿನ ವಾಗ್ವಾದದ ಪರಿಣಾಮವಾಗಿ ಬಿಸಿಯೇರಿತ್ತು. ಎಲ್ಲ ಎಂಟೂ ಕ್ಷೇತ್ರಗಳಲ್ಲಿ ಇದು ಎರಡೂ ಪಕ್ಷಗಳ ಕಾರ್ಯಕರ್ತರು ಹಾಗೂ ಜನಸಾಮಾನ್ಯರ ನಡುವೆ ಚರ್ಚೆಗೂ ದಾರಿ ಮಾಡಿತ್ತು.

ಬಹಿರಂಗ ಪ್ರಚಾರ ಕೊನೆಗೊಳ್ಳುವ ಕೊನೆಯ ದಿನದವರೆಗೂ ಜಿದ್ದಾಜಿದ್ದಿಯ ಪ್ರಚಾರ, ರೋಡ್‌ಷೋ, ಬಹಿರಂಗ ಸಭೆಗಳ ಮೂಲಕ ಇಬ್ಬರೂ ಅಭ್ಯರ್ಥಿಗಳು ಗಮನ ಸೆಳೆದಿದ್ದರು. ನಂತರ ಮನೆಮನೆಗೂ ಭೇಟಿ ನೀಡಿ ಮತದಾರರನ್ನು ಓಲೈಸಿದ್ದರು. ಈ ಸಂದರ್ಭದಲ್ಲಿ ಮತದಾರಿಗೆ ಬೆಳ್ಳಿ ನಾಣ್ಯ, ನೂರು ರೂಪಾಯಿ ನೋಟಿನ ಆಮಿಷವನ್ನೂ ಒಡ್ಡಲಾಗಿತ್ತು ಎಂಬ ಮಾತುಗಳೂ ಕೇಳಿಬಂದಿದ್ದವು.

ಗೆಲುವು ಯಾರದು?:ಈ ಹಿನ್ನೆಲೆಯಲ್ಲೇ ಸೋಲು–ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ‘ಜನ ಕಾಂಗ್ರೆಸ್‌ ಕಡೆಗೆ ಒಲವು ತೋರಿದ್ದಾರೆ. ಇದು ಶ್ರೀರಾಮುಲು ಪಡೆಯಲ್ಲಿ ಅಳುಕು ಮೂಡಿಸಿದೆ’ ಎಂದು ಆ ಪಕ್ಷದವರು ಹೇಳುತ್ತಿದ್ದಾರೆ. ‘ಜಿಲ್ಲೆಯ ಜನ ಮತ್ತೊಮ್ಮೆ ಶಾಂತ ಅವರನ್ನು ಗೆಲ್ಲಿಸುತ್ತಾರೆ’ ಎಂದು ಬಿಜೆಪಿಯ ಮುಖಂಡರು ಪ್ರತಿಪಾದಿಸುತ್ತಿದ್ದಾರೆ.

ನರಕ ಚತುರ್ದಶಿಯ ದಿನವಾದ ನ.6ರಂದು ನಡೆಯಲಿರುವ ಮತ ಎಣಿಕೆಯೇ ಈ ಎಲ್ಲ ಲೆಕ್ಕಾಚಾರಗಳಿಗೆ ಸ್ಪಷ್ಟ ರೂಪ ನೀಡಲಿದೆ. ಅಲ್ಲೀವರೆಗೂ ಅಭ್ಯರ್ಥಿಗಳಾದಿಯಾಗಿ ಎಲ್ಲರೂ ಕಾಯಲೇಬೇಕಾಗಿದೆ.

ಸೋಲು–ಗೆಲುವಿನ ಬೆಟ್ಟಿಂಗ್‌..
ಬಳ್ಳಾರಿ: ಮತದಾನದ ಬಳಿಕ ಎಂದಿನಂತೆ ಯಾರು ಸೋಲುತ್ತಾರೆ? ಮತ್ಯಾರು ಗೆಲ್ಲುತ್ತಾರೆ ಎಂಬ ಕುರಿತು ಬೆಟ್ಟಿಂಗ್‌ ಕೂಡ ಜಿಲ್ಲೆಯಲ್ಲಿ ಆರಂಭವಾಗಿದೆ.

‘ಒನ್‌ ಸೈಟ್‌ ವೋಟಿಂಗ್‌ ಆಗಿದೆ. ಕಾಂಗ್ರೆಸ್‌ ಗೆಲ್ಲುತ್ತದೆ? ಬೆಟ್ಟಿಂಗ್‌ ಎಷ್ಟಿರಲಿ? ಇಲ್ಲ, ಶಾಂತಕ್ಕ ಗೆಲ್ಲುತ್ತಾರೆ, ನೀವೆಷ್ಟು ಬೆಟ್‌್ ಕಟ್ಟುತ್ತೀರಿ? ಎಂಬ ಮಾತುಗಳು ಶನಿವಾರ ಸಂಜೆ ಕೇಳಿ ಬಂದವು.

***
ಬಳ್ಳಾರಿಯ ಜನ ತಮ್ಮ ಮಗಳನ್ನು ಎರಡನೇ ಬಾರಿಗೆ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವಿದೆ.
–ಜೆ.ಶಾಂತಾ, ಬಿಜೆಪಿ ಅಭ್ಯರ್ಥಿ

***
ನನಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸಂಪೂರ್ಣ ನಂಬಿಕೆ ಇದೆ. ಮತದಾರರು ನನ್ನ ಕೈಹಿಡಿಯುವುದು ಖಚಿತ.
–ವಿ.ಎಸ್‌.ಉಗ್ರಪ್ಪ, ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.