ADVERTISEMENT

ಹೊಸಪೇಟೆ: ತರಾತುರಿಯಲ್ಲಿ ಬಂದು ಹೋದ ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 7:06 IST
Last Updated 13 ಏಪ್ರಿಲ್ 2019, 7:06 IST
ಚುನಾವಣಾ ಪ್ರಚಾರಕ್ಕೆ ಸಮಯ ಆಗುತ್ತಿದೆ ಎಂದು ಬಿ.ಎಸ್‌. ಯಡಿಯೂರಪ್ಪನವರು ರಾಣಿ ಸಂಯುಕ್ತಾ ಅವರಿಗೆ ಕೈ ಗಡಿಯಾರ ತೋರಿಸುತ್ತಿರುವುದು
ಚುನಾವಣಾ ಪ್ರಚಾರಕ್ಕೆ ಸಮಯ ಆಗುತ್ತಿದೆ ಎಂದು ಬಿ.ಎಸ್‌. ಯಡಿಯೂರಪ್ಪನವರು ರಾಣಿ ಸಂಯುಕ್ತಾ ಅವರಿಗೆ ಕೈ ಗಡಿಯಾರ ತೋರಿಸುತ್ತಿರುವುದು   

ಹೊಸಪೇಟೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪನವರು ಶನಿವಾರ ನಗರದಲ್ಲಿ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಲೋಕಸಭೆ ಚುನಾವಣೆ ಕುರಿತು ಚರ್ಚಿಸಿದರು.

ಶುಕ್ರವಾರ ಕೊಪ್ಪಳದಲ್ಲಿ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಪರ ಪ್ರಚಾರ ನಡೆಸಿ, ರಾತ್ರಿ ಕಮಲಾಪುರದ ಆರೆಂಜ್‌ ಕೌಂಟಿಯಲ್ಲಿ ವಾಸ್ತವ್ಯ ಮಾಡಿದರು. ಶನಿವಾರ ಬೆಳಿಗ್ಗೆ ಸಂಡೂರು ರಸ್ತೆಯ ವಿವೇಕಾನಂದ ಕಾಲೊನಿಯಲ್ಲಿರುವ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಅವರ ಮನೆಗೆ ಭೇಟಿ ನೀಡಿದರು.

ಮುಖಂಡರಾದ ಶ್ರೀನಿವಾಸ್‌ ರೆಡ್ಡಿ, ರಾಣಿ ಸಂಯುಕ್ತಾ ಅವರೊಂದಿಗೆ ಕೆಲಹೊತ್ತು ಕೊಠಡಿಯಲ್ಲಿ ರಹಸ್ಯವಾಗಿ ಮಾತುಕತೆ ನಡೆಸಿದರು. ನಂತರ ಹೊರಬರುವಾಗ ಶ್ರೀನಿವಾಸ್‌ ರೆಡ್ಡಿ ಅವರು ಯಡಿಯೂರಪ್ಪನವರ ಕೈಗೆ ಚೀಟಿ ಕೊಟ್ಟರು. ಬಳಿಕ ಹೊರಬಂದು ಚಹಾ ಕುಡಿದರು. ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿ, ತರಾತುರಿಯಲ್ಲಿ ಅಲ್ಲಿಂದ ಕೊಪ್ಪಳದ ಕಡೆ ಪಯಣ ಬೆಳೆಸಿದರು.

ADVERTISEMENT

ಯಡಿಯೂರಪ್ಪನವರ ಮಾತು ಕೇಳಲು ಬೆಳಿಗ್ಗೆಯಿಂದ ಕಾರ್ಯಕರ್ತರು ಕಾದು ಕುಳಿತಿದ್ದರು. ಏನನ್ನೂ ಮಾತನಾಡದೆ ನಿರ್ಗಮಿಸಿದ್ದಕ್ಕೆ ಕಾರ್ಯಕರ್ತರು ಅಸಮಾಧಾನ ತೋಡಿಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಣಿ ಸಂಯುಕ್ತಾ, ‘ಬಳ್ಳಾರಿ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ವೈ. ದೇವೇಂದ್ರಪ್ಪನವರ ಗೆಲುವಿಗಾಗಿ ಶ್ರಮಿಸಬೇಕು. ಚುನಾವಣೆಗೆ ಕೆಲವೇ ದಿನಗಳು ಉಳಿದಿದ್ದು, ಎಲ್ಲೆಡೆ ಭರದ ಪ್ರಚಾರ ನಡೆಸುವಂತೆ ಯಡಿಯೂರಪ್ಪನವರು ಸೂಚಿಸಿ ಹೋದರು’ ಎಂದು ತಿಳಿಸಿದರು.

ಮುಖಂಡರಾದ ಅನಂತ ಪದ್ಮನಾಭ, ಗುದ್ಲಿ ಪರಶುರಾಮ, ಚಂದ್ರಕಾಂತ ಕಾಮತ, ಜಂಬಾನಹಳ್ಳಿ ವಸಂತ, ವ್ಯಾಸನಕೇರಿ ಶ್ರೀನಿವಾಸ, ಕಟಗಿ ರಾಮಕೃಷ್ಣ, ಕಾಸೆಟ್ಟಿ ಉಮಾಪತಿ, ದೇವರಮನೆ ಶ್ರೀನಿವಾಸ, ಭಾರತಿ, ಯೋಗಾಲಕ್ಷ್ಮಿ, ಗೋವಿಂದರಾಜು, ಶಂಕರ್‌ ಮೇಟಿ, ಮಲಪನಗುಡಿ ಶಂಕರ್‌, ಬಿಸಾಟಿ ಸತ್ಯನಾರಾಯಣ ಇದ್ದರು. ಮಾಜಿ ಶಾಸಕ ಎಚ್‌.ಆರ್‌. ಗವಿಯಪ್ಪನವರ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.