ADVERTISEMENT

ಅಗತ್ಯ ನಿವೇಶನ ಆದ್ಯತೆ ಮೇಲೆ ಕಾಯ್ದಿರಿಸಿ

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2016, 11:30 IST
Last Updated 10 ಆಗಸ್ಟ್ 2016, 11:30 IST
ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೃಷಿ ಹಾಗೂ  ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಮಾತನಾಡಿದರು.
ಬೆಂಗಳೂರಿನ ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಮಾತನಾಡಿದರು.   

ದೊಡ್ಡಬಳ್ಳಾಪುರ: ಕಚೇರಿಗಳ ನಿರ್ಮಾಣಕ್ಕೆ ಅಗತ್ಯ ನಿವೇಶನಗಳನ್ನು ಆದ್ಯತೆ ಮೇಲೆ ಕಾದಿರಿಸಬೇಕೆಂದು ಕೃಷಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ  ಹೇಳಿದರು.

ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.   

ಗ್ರಾಮೀಣ ಭಾಗದಲ್ಲಿ ಅಂಗನವಾಡಿ, ಆಸ್ಪತ್ರೆ, ಶಾಲಾ-ಕಾಲೇಜು, ವಿದ್ಯಾರ್ಥಿನಿಲಯ, ವಸತಿ ಶಾಲೆ, ರೈತ ಸಂಪರ್ಕ ಕೇಂದ್ರಗಳನ್ನು ಉತ್ತಮ ಪರಿಸರದಲ್ಲಿ ನಿರ್ಮಿಸಿದಾಗ ಜನ ಸಾಮಾನ್ಯರ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ಮಾಡಿಕೊಡಲು ಸಾಧ್ಯವಾಗಲಿದೆ.

ಈ ಸಂಸ್ಥೆಗಳ ನಿರ್ಮಾಣಕ್ಕೆ ಅಗತ್ಯ ನಿವೇಶನಗಳನ್ನು ಆದ್ಯತೆ ಮೇಲೆ ಒದಗಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸರ್ಕಾರಿ ನಿವೇಶನ ಲಭ್ಯವಾಗದಿದ್ದರೆ ಸಿಎ ನಿವೇಶನ ಕಾದಿರಿಸಬೇಕೆಂದು ತಿಳಿಸಿದರು. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಗೆ ಹಾಜರಾಗಿ, ಪ್ರಸ್ತಾವನೆಯನ್ನು ಸಲ್ಲಿಸಿ ನಿವೇಶನಗಳನ್ನು ಪಡೆಯಬೇಕು ಎಂದು ತಿಳಿಸಿದರು.

ರಾಗಿಗೆ ಸರ್ಕಾರ ₹ 2000 ಬೆಂಬಲ ಬೆಲೆ ನಿಗದಿ ಪಡಿಸಿರುವುದರಿಂದ ರಾಗಿ ಬೆಳೆಯಲು ರೈತರನ್ನು ಉತ್ತೇಜಿಸಬೇಕೆಂದು ತಿಳಿಸಿದರಲ್ಲದೆ ಈ ಬಗ್ಗೆ ಚುನಾಯಿತ ಪ್ರತಿನಿಧಿಗಳಿಗೆ ಮಾಹಿತಿ ನೀಡಿ ಈ ಸಂಬಂಧ ಹೆಚ್ಚಿನ ಪ್ರಚಾರ ನೀಡಬೇಕು ಎಂದು ತಿಳಿಸಿದರು.

2015–16ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಶೇ50 ಕಿಂತ ಹೆಚ್ಚು ಬೆಳೆ ನಷ್ಟಕ್ಕೀಡಾದ 16,122  ರೈತರಿಗೆ ₹ 338.68  ಲಕ್ಷ ಬೆಳೆ ನಷ್ಟದ ಪರಿಹಾರ ನೀಡಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಪಡಿತರ ಕಾರ್ಡುದಾರರಿದ್ದು, ಬೋಗಸ್ ಕಾರ್ಡ್‌ಗಳನ್ನು ರದ್ದುಪಡಿಸುವ ದಿಸೆಯಲ್ಲಿ ಕೈಗೊಳ್ಳಲಾಗಿದ್ದ ಕಾರ್ಯಚರಣೆಯಲ್ಲಿ 12,128 ಕಾರ್ಡುಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದಾಗ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರು  ಇದರಿಂದ ಕೆಲ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂಬ  ಅಭಿಪ್ರಾಯ ವ್ಯಕ್ತಪಡಿಸಿದರು,

ಇದಕ್ಕೆ ಪ್ರತಿಕ್ರಿಯಿಸಿದ  ಸಚಿವರು ಬೋಗಸ್‌ ಕಾರ್ಡ್‌ಗಳನ್ನು ನಿಯಂತ್ರಿಸಲು ಎಲ್ಲರೂ ಒಕ್ಕೂರಲಿನಿಂದ ಸಹಕರಿಸಬೇಕು.  ನಾವುಗಳೆ ಆಕ್ಷೇಪಿಸಿದರೆ ಈ ರೀತಿಯ ಅನ್ಯಾಯಗಳನ್ನು ಸರಿಪಡಿಸುವುದಾದರು ಹೇಗೆ. 

ಈ ಕಾರ್ಯಚರಣೆಗೆ ಹಲವಾರು ರೀತಿಯ ಪ್ರಯೋಗಗಳನ್ನು ಮಾಡಲಾಗಿದೆಯಾದರು ಯಾವುದು ಯಶಸ್ವಿಯಾಗದ  ಕಾರಣ ಆಧಾರ ಕಾರ್ಡ್‌ಗಳನ್ನು ಆಧಾರವಾಗಿಟ್ಟುಕೊಂಡು ಬೋಗಸ್ ಕಾರ್ಡ್ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗಿದೆ. ಇದರಿಂದ ಯಾರಿಗೂ ಅನ್ಯಾಯವಾಗದು ಎಲ್ಲರೂ ಸಹಕರಿಸುವುದು ಸಮಂಜಸವಲ್ಲವೆಂದು ತಿಳಿಸಿದಾಗ ಶಾಸಕರೆಲ್ಲರು ಸಮ್ಮತಿಸಿದರು.

ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಪರಿಶೀಲನೆ ನಡೆಸಿದ ಸಚಿವರು ಜಿಲ್ಲೆಯಲ್ಲಿ 9 ಗ್ರಾಮಗಳಲ್ಲಿ ಮಾತ್ರ ಅಲ್ಪ-ಸ್ವಲ್ಪ ಸಮಸ್ಯೆಯಾಗಿದ್ದು ಉಳಿದೆಡೆ ಅಂತಹ ಸಮಸ್ಯೆ ಕಾಣುತ್ತಿಲ್ಲವೆಂದು ತಿಳಿಸಿದಾಗ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ಮಾತ್ರ ಇನ್ನು ಪ್ರತಿದಿನ 110 ಟ್ಯಾಂಕ್  ನೀರನ್ನು ಟ್ಯಾಂಕರ್ ಮೂಲಕ ಪೂರೈಸಲಾಗುತ್ತಿದೆ ಎಂಬ ಮಾಹಿತಿಯನ್ನು ಆಲಿಸಿದ ಸಚಿವರು ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಟ್ಯಾಂಕರ್ ಮೂಲಕ ನೀರು ಪೂರೈಸುವುದನ್ನು ಸ್ಥಗಿತಗೊಳಿಸಿ ಈ ದಂದೆಗೆ ಕಡಿವಾಣ ಹಾಕಬೇಕೆಂದರು. 

ಇದಕ್ಕೆ ಶಾಸಕ ಪಿಳ್ಳಮುನಿಶ್ಯಾಮಪ್ಪ ಅವರು ಸಹಮತ ವ್ಯಕ್ತಪಡಿಸಿ, ಕೂಡಲೆ ಟ್ಯಾಂಕರ್ ಮೂಲಕ ನೀರು ಪೂರೈಸುವುದನ್ನು ನಿಲ್ಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ. ಪ್ರಸಾದ್, 

ADVERTISEMENT

ಉಪಾಧ್ಯಾಕ್ಷೆ ಪಿ.ಎನ್‌. ಅನಂತಕುಮಾರಿ, ಶಾಸಕ ಎಂ.ಟಿ.ಬಿ. ನಾಗರಾಜ್, ಡಾ. ಶ್ರೀನಿವಾಸ್‌ಮೂರ್ತಿ, ಪಿಳ್ಳಮುನಿಶ್ಯಾಮಪ್ಪ, ಟಿ. ವೆಂಕಟ ರಮಣಯ್ಯ, ಜಿಲ್ಲಾಧಿಕಾರಿ ಎಸ್. ಪಾಲಯ್ಯ, ಸಿಇಓ ಎನ್. ಮಂಜುಳ, ಎಸ್‌ಪಿ. ಹಮೀತ್‌ಸಿಂಗ್ ಇದ್ದರು.

*
ಈ ಬಾರಿ ಜಿಲ್ಲೆಯಲ್ಲಿ ಕೃಷಿ ಕಾರ್ಯಕ್ಕೆ ಪೂರಕವಾಗಿ ಮಳೆಯಾಗಿರುವುದರಿಂದ ಶೇ 75.39 ರಷ್ಟು ಬಿತ್ತನೆಯಾಗಿದೆ. 3, 266 ಕ್ವಿಂಟಾಲ್ ಬಿತ್ತನೆ ಬೀಜ ವಿತರಿಸಲಾಗಿದೆ ಹಾಗೂ 13,790 ಟನ್ ರಸಗೊಬ್ಬರ ಪೂರೈಸಲಾಗಿದೆ
–ಕೃಷ್ಣ ಭೈರೇಗೌಡ,
ಜಿಲ್ಲಾ  ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.