ADVERTISEMENT

ಭತ್ಯೆ ಇಲ್ಲ; ಅತಂತ್ರದಲ್ಲಿ ಸ್ಪರ್ಧಿಗಳು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2011, 19:30 IST
Last Updated 6 ಅಕ್ಟೋಬರ್ 2011, 19:30 IST

ದೇವನಹಳ್ಳಿ: ಧಾರವಾಡದಲ್ಲಿ ಇದೇ10 ರಿಂದ 12ವರೆಗೆ ಮೂರು ದಿನಗಳ ನಡೆಯಲಿರುವ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಬೇಕಾದ 16 ವಿದ್ಯಾರ್ಥಿಗಳು ಪ್ರಯಾಣಕ್ಕೆ ಹಣವಿಲ್ಲದೆ ಸ್ಪರ್ಧೆಯಿಂದ ದೂರ ಉಳಿದಿದ್ದಾರೆ !

ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ನಡೆಯುತ್ತಿರುವ 2011-12ನೇ ಸಾಲಿನ ರಾಜ್ಯಮಟ್ಟ ಶೈಕ್ಷಣಿಕ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಕುಸ್ತಿ ಮತ್ತು ಟೇಬಲ್ ಟೆನ್ನಿಸ್ ಸ್ಪರ್ಧಿಗಳಿಗೆ ಇಲಾಖೆ ಪ್ರಯಾಣ ಭತ್ಯೆ ನೀಡುತ್ತಿಲ್ಲ. ಆದರೆ  ಇದೀ ಕ್ರೀಡಾಕೂಟದಲ್ಲಿ ಭಾಗವಹಿಸುವ ಅಥ್ಲೆಟಿಕ್ಸ್ ಹಾಗೂ ಗುಂಪು ಆಟಗಳ ಸ್ಪರ್ಧಿಗಳಿಗೆ ಪ್ರಯಾಣ ಭತ್ಯೆ ಹಾಗೂ ಊಟದ ವ್ಯವಸ್ಥೆಗಾಗಿ ಹಣ ನೀಡಿದೆ. ದೇಸಿ ಪರಂಪರೆಯನ್ನು ಪ್ರೋತ್ಸಾಹಿಸಬೇಕಾದ ಸರ್ಕಾರವೇ ಜನಪದ ಕ್ರೀಡೆಯಂತಹ ಕುಸ್ತಿ ಪಟುಗಳಿಗೆ ಹಣ ನೀಡದಿದ್ದರೆ ಹೇಗೆ ಎಂದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪ್ರಶ್ನಿಸಿದ್ದಾರೆ.

ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಂದ ಪ್ರಾಥಮಿಕ ಶಾಲೆಯ ಪ್ರತಿ ವಿದ್ಯಾರ್ಥಿ/ನಿಯರಿಗೆ 7ರೂ. ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿ/ನಿಯರಿಗೆ 15 ರೂ. ವಿದ್ಯಾರ್ಥಿ ಕ್ರೀಡಾ ನಿಧಿ (ವಿ.ಕೆ.ಎನ್) ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ತಂಡದ ಸದಸ್ಯರ ಸಂಖ್ಯೆಗನುಗುಣವಾಗಿ 75 ರಿಂದ 200 ರೂ. ವರೆಗೆ ನೊಂದಣಿ ಶುಲ್ಕ(ಅಫಿಲೇನ್ಸ್ ಫೀ)ರ ಡಿ.ಡಿ ಯನ್ನು ಬಿ.ಇ.ಓ ಹಾಗೂ ಟಿ.ಪಿ.ಓ ಜಂಟಿ ವಿಳಾಸದಲ್ಲಿ ಇಲಾಖೆಗೆ ಜಮಾ ಮಾಡಲಾಗುತ್ತಿದೆ.

ಆದರೆ ವಾರ್ಷಿಕ ಕ್ರೀಡಾಕೂಟ ನಡೆಸುವ ಬಗ್ಗೆ ಜೂನ್‌ನಲ್ಲಿಯೇ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿಗಳು ಕ್ರಿಯಾಯೋಜನೆ ರೂಪಿಸಬೇಕು. ಅಲ್ಲದೆ ಬರಬಹುದಾದ ಕ್ರೋಡೀಕೃತ ಕ್ರೀಡಾ ನಿಧಿ ಅನ್ವಯ ಬಜೆಟ್ ತಯಾರಿಸಬೇಕು. ಆದರೆ ಇದಾವುದು ಪ್ರಸಕ್ತ ಸಾಲಿನಲ್ಲಿ ತಾಲ್ಲೂಕಿನಲ್ಲಿ ನಡೆದಿಲ್ಲ. ಜಿಲ್ಲಾ ಮಟ್ಟದ ಸಮಿತಿಯಲ್ಲಿ ಬಜೆಟ್ ರೂಪಿಸಿ, ನಡೆಸಿದ ಚರ್ಚೆಯಂತೆ ಈ ಎರಡು ಕ್ರೀಡೆಗಳನ್ನು ರಾಜ್ಯಮಟ್ಟದ ಕ್ರೀಡಾಕೂಟದಿಂದ ಹೊರಗಿಡಲಾಗಿದೆ~ ಎಂಬುದು ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ.

`ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರೀಡಾಕೂಟ ನಡೆಸುವ ಕುರಿತು ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳುವ ಇಲಾಖೆ ಅಧಿಕಾರಿಗಳು, ಇಂಥ ಕ್ರೀಡೆಗಳನ್ನು ಕೈಬಿಡುವ ನಿರ್ಧಾರವನ್ನು ಹೋಬಳಿ ಹಂತದಲ್ಲೇ ಪ್ರಕಟಿಸಬೇಕು. ಎರಡ-ಮೂರು ಹಂತ ದಾಟಿದ ಮೇಲೆ ಈಗ ಹಣವಿಲ್ಲ, ಸ್ವಂತ ಖರ್ಚಿನಲ್ಲಿ ಹೋಗಲಿ ಎಂದರೆ ಆರ್ಥಿಕ ದುರ್ಬಲರಾಗಿರುವ ಮಕ್ಕಳು ಹೇಗೆ ಹಣ ಭರಿಸುತ್ತಾರೆ. ಇಂಥ ಕ್ರೀಡೆಗಳನ್ನಾದರೂ ಇಲಾಖೆ ಏಕೆ ನಡೆಸಬೇಕು~ ಎಂಬುದು ಪೊಷಕರ ಆರೋಪ.

ಜಿಲ್ಲಾ ಅಧೀಕ್ಷರ ಸ್ಪಷ್ಟನೆ

 ಶಿಕ್ಷಣ ಆಯುಕ್ತರ ಆದೇಶದ ಮೇರೆಗೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿ ಅಗತ್ಯ ಕ್ರೀಡೆಗಳನ್ನು ಆಯ್ಕೆ ಮಾಡಿ ಬಜೆಟ್ ರೂಪಿಸಲಾಗುತ್ತಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳ ವಿದ್ಯಾರ್ಥಿಗಳ ಕ್ರೀಡಾನಿಧಿಯಲ್ಲಿ ಅಂದಾಜು ಎಂಟೂವರೆ ಲಕ್ಷ ರೂ. ಖರ್ಚಾಗುವ ನಿರೀಕ್ಷೆ ಇದೆ.
 
ಇದರಲ್ಲಿ ರಾಜ್ಯದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ 3.50 ಲಕ್ಷ ರೂ. ನೀಡಲು ಆಯುಕ್ತರಿಗೆ ಮನವಿ ಸಲ್ಲಿಸಲಾಗುತ್ತಿದೆ. ಆದರೆ ಕುಸ್ತಿ ಸೇರಿದಂತೆ ಐದಾರು  ಕ್ರೀಡೆಗಳನ್ನು ಕಮಿಟಿಯಲ್ಲಿಯೇ ಚರ್ಚಸಿ ಕೈಬಿಡಲಾಗಿದೆ. ಪ್ರಚಲಿತ ಕ್ರೀಡೆಗೆ ಮಾತ್ರ ಒತ್ತು ನೀಡಲಾಗುತ್ತಿದೆಯಾದರೂ ಸರ್ಕಾರದಿಂದ ಯಾವುದೇ ಹಣ ಕ್ರೀಡೆಗಾಗಿ ಮೀಸಲಿಲ್ಲ. ವಿದ್ಯಾರ್ಥಿಗಳ ಹಣದಲ್ಲೇ ನಡೆಸಲಾಗುತ್ತಿದೆ ಎಂಬುದಾಗಿ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಮಲ್ಲಪ್ಪ ಸ್ಪಷ್ಟಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.