ADVERTISEMENT

ಮಹಿಳಾ ಸಬಲೀಕರಣಕ್ಕೆ ಸ್ವ ಉದ್ಯೋಗ ಅವಶ್ಯ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ದೇವನಹಳ್ಳಿ: ಕೇಂದ್ರ, ರಾಜ್ಯ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳಡಿ ಉಚಿತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಈ ಕಾರ್ಯಕ್ರಮಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮದರ್ ಥೆರೆಸಾ ಸೇವಾ ಟ್ರಸ್ಟ್ ಅಧ್ಯಕ್ಷ ಎಂ.ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿನ ಸೂಲಿಬೆಲೆ ರಸ್ತೆಯ ಮದರ್ ಥೆರೆಸಾ ಸೇವಾ ಭವನದಲ್ಲಿ ಬುಧವಾರ ಜಿಲ್ಲಾ ಜವಳಿ ಇಲಾಖೆ ಮತ್ತು ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಏರ್ಪಡಿಸಿದ್ದ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಕುರಿತ ತರಬೇತಿ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

ಮಹಿಳೆಯರ ಆರ್ಥಿಕ ಚೇತರಿಕೆ ಮತ್ತು ಸಬಲೀಕರಣಕ್ಕೆ ಸ್ವ ಉದ್ಯೋಗ ಅವಶ್ಯ. ಗ್ರಾಮೀಣ ಮಹಿಳೆಯರು ವಿದ್ಯಾವಂತರಿದ್ದರೂ ಸೂಕ್ತ ತರಬೇತಿ ಮತ್ತು ಪ್ರೋತ್ಸಾಹ ಸಿಗುತ್ತಿಲ್ಲ. ಸ್ವ ಉದ್ಯೋಗ ಮಾಡುವ ಮಹಿಳೆಯರಿಗೆ  ಅಗತ್ಯ ಪರಿಕರ ಮತ್ತು ಸಾಲ ಸೌಲಭ್ಯ ನೀಡಲಾಗುತ್ತೆ  ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ.ಉಷಾ ರವೀಂದ್ರ,  ಕೃಷಿ ಇಲಾಖೆ  ಕ್ಷೇತ್ರೋತ್ಸವ ಶಿಬಿರ ಏರ್ಪಡಿಸಿ,  ಅಣಬೆ, ಎರೆಹುಳು ಸಾಕಾಣಿಕೆ, ಆಹಾರ ಮೌಲ್ಯ ವರ್ಧನೆ, ಆಹಾರ ಉತ್ಪನ್ನಗಳಿಗೆ ಮಾರಾಟ ವ್ಯವಸ್ಥೆಯನ್ನು ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಲು ವಿಶೇಷ ಘಟಕ  ಮೀಸಲಿರಿಸಿದೆ ಎಂದರು. ಪ್ರಾತ್ಯಾಕ್ಷಿತೆ ಕಲಿಕೆಯಿಂದ ಸುಲಭವಾಗಿ ತಿಳಿಯಬಹುದು, ದುಡಿಮೆಯ ಛಲವಿದ್ದಾಗ ಪ್ರತಿಫಲ ಸಿಗಲಿದೆ ಎಂದು ತಿಳಿಸಿದರು.

ಜಿಲ್ಲಾ ಜವಳಿ ಇಲಾಖೆ ಉಪವ್ಯವಸ್ಥಾಪಕ ರಾಜನ್, ಮದರ್ ಥೆರೆಸಾ ಟ್ರಸ್ಟ್ ಕಾರ್ಯದರ್ಶಿ ಎಂ.ನಾಗರಾಜ್,   ತಮಿಷಾ, ಸೆಲ್ವಿ, ಲಕ್ಷ್ಮಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.