ADVERTISEMENT

‘ಮೇಕಿನ್ ಇಂಡಿಯ’ ಸಾಕಾರಕ್ಕೆ ಸಹಕಾರ ಅಗತ್ಯ

ದೊಡ್ಡಬಳ್ಳಾಪುರ: ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ಶೇ 60ರಷ್ಟು ರಾಜ್ಯದ ಪಾಲು, ರೇಷ್ಮೆ ಮೊಟ್ಟೆಗಳಿಗೆ ಉತ್ತಮ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 5 ಜೂನ್ 2017, 8:33 IST
Last Updated 5 ಜೂನ್ 2017, 8:33 IST
‘ಮೇಕಿನ್  ಇಂಡಿಯ’ ಸಾಕಾರಕ್ಕೆ ಸಹಕಾರ ಅಗತ್ಯ
‘ಮೇಕಿನ್ ಇಂಡಿಯ’ ಸಾಕಾರಕ್ಕೆ ಸಹಕಾರ ಅಗತ್ಯ   

ದೊಡ್ಡಬಳ್ಳಾಪುರ: ದೇಶದ ಒಟ್ಟು ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯದ ಪಾಲು ಶೇ 60ರಷ್ಟು ಇದೆ.  ಇದಲ್ಲದೆ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ರೇಷ್ಮೆ ಬಿತ್ತನೆ ಮೊಟ್ಟೆಗಳಿಗೆ ಉತ್ತಮ ಬೇಡಿಕೆ ಇದೆ ಎಂದು ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಹೇಳಿದರು.

ಅವರು ತಾಲ್ಲೂಕಿನ ರಾಂಪುರ ಗ್ರಾಮದ ರೇಷ್ಮೆ ಬಿತ್ತನೆ ಗೂಡು ಹುಳುಸಾಕಾಣಿಕೆದಾರ ಪ್ರಭುದೇವ್‌ ಅವರ ತೋಟದಲ್ಲಿ  ರೇಷ್ಮೆ ಹುಳು ಬೀಜೋತ್ಪಾದನಾ ಕೇಂದ್ರ, ರಾಷ್ಟ್ರೀಯ ರೇಷ್ಮೆ ಹುಳು ಬೀಜ ಸಂಘಟನೆ ವತಿಯಿಂದ ನಡೆದ ಬಿತ್ತನೆ ಗೂಡು ಬೆಳೆಗಾರರ ತಾಂತ್ರಿಕ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಮೇಕಿನ್‌ ಇಂಡಿಯ’ ಸಾಕಾರಕ್ಕೆ ರೇಷ್ಮೆ ಬೆಳೆಗಾರರ ಸಹಕಾರವು ಅತ್ಯಗತ್ಯವಾಗಿದೆ. ಈ ದಿಸೆಯಲ್ಲಿ ಚೀನಾ ದೇಶದಿಂದ ಆಮದು ಆಗುತ್ತಿರುವ ರೇಷ್ಮೆ ನಿಲ್ಲಬೇಕಾದರೆ ನಮ್ಮಲ್ಲಿಯೇ ಗುಣಮಟ್ಟದ ಸಾಕಷ್ಟು ರೇಷ್ಮೆ ಉತ್ಪಾದನೆಯಾಗಬೇಕು. ಈ ದಿಸೆಯಲ್ಲಿ ಕೇಂದ್ರ ರೇಷ್ಮೆ ಮಂಡಲಿ ರೈತರಿಗೆ ಅಗತ್ಯ ಇರುವ ಎಲ್ಲ ಸೌಲಭ್ಯಗಳನ್ನು ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆ ಮಾಡುವವರಿಗೆ ಹೊಸ ತಾಂತ್ರಿಕತೆಯ ಯಂತ್ರಗಳನ್ನು ಶೇ50ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದರು.

ADVERTISEMENT

ಸದ್ಯಕ್ಕೆ ರಾಜ್ಯದಲ್ಲಿ ರೇಷ್ಮೆ ಇಳುವರಿ 100 ಮೊಟ್ಟೆಗೆ ಸರಾಸರಿ 80 ಕೆಜಿ ಯಷ್ಟು ಇದೆ. ಇದನ್ನು ಹೆಚ್ಚು ಮಾಡಲು ಉತ್ತಮ ಬಿತ್ತನೆ ಗೂಡುಗಳ ಅಗತ್ಯ ಇದೆ. ಈ ನಿಟ್ಟಿನಲ್ಲಿ ಬಿತ್ತನೆ ಗೂಡು ಬೇಳೆಗಾರರ ತಾಂತ್ರಿಕ ಸಮಾವೇಶವನ್ನು ಕೇಂದ್ರ ರೇಷ್ಮೆ ಮಂಡಳಿ ನಡೆಸುತ್ತಿದೆ ಎಂದರು.

ಸಮಾವೇಶದಲ್ಲಿ ರೇಷ್ಮೆ ಬಿತ್ತನೆ ಗೂಡು ಬೆಳೆಗಾರರಿಗೆ ತಾಂತ್ರಿಕ ಮಾಹಿತಿ ನೀಡಿದ ಕೇಂದ್ರ ರೇಷ್ಮೆ ಮಂಡಳಿಯ ಹಿರಿಯ ವಿಜ್ಞಾನಿ ಡಾ.ಪಿ.ಸುಧಾಕರರಾವ್‌, ಇಡೀ ದೇಶಕ್ಕೆ 5 ಕೋಟಿ ಬಿತ್ತನೆ ಬೀಜದ ಮೊಟ್ಟೆ ಅಗತ್ಯ ಇದೆ. ಪೌಷ್ಟಿಕಾಂಶಯುಕ್ತ ಗುಣಮಟ್ಟದ ಸೊಪ್ಪು ಬೆಳೆಯುವುದರಿಂದ ಮಾತ್ರ ಉತ್ತಮ ಬಿತ್ತನೆ ಗೂಡುಗಳನ್ನು ಪಡೆಯಲು ಸಾಧ್ಯ. ಸೊಪ್ಪು ಬೆಳೆಯುವಾಗ ರೈತರು ಬರೀ ರಾಸಾಯನಿಕ ಗೊಬ್ಬರಗಳ ಬಳಕೆ ಕಡೆಗೆ ಗಮನ ನೀಡದೆ ಹಸಿರು ಎಲೆ, ಕೊಟ್ಟಿಗೆ ಗೊಬ್ಬರಕ್ಕೆ ಆದ್ಯತೆ ನೀಡಬೇಕು ಎಂದರು.

ಈಗ ಹೊಸದಾಗಿ ಜಿ–4 ಸೊಪ್ಪು ತಳಿಯನ್ನು ಪರಿಚಯಿಸಲಾಗುತ್ತಿದೆ. ಹುಳು ಸಾಕಾಣಿಕೆ ಮನೆಯನ್ನು ಸೋಂಕು ಮುಕ್ತವಾಗಿ ಇಟ್ಟುಕೊಂಡರೆ ಉತ್ತಮ ಇಳುವರಿಗೆ ಸಹಕಾರಿ ಎಂದರು.

ವಿವಿಧ ತಾಲ್ಲೂಕುಗಳಿಂದ ಬಂದಿದ್ದ ರೇಷ್ಮೆ ಬಿತ್ತನೆ ಗೂಡು ಬೆಳೆಗಾರರಾದ ರಾಜಯ್ಯ, ಎಸ್‌.ವಿ.ಸ್ವಾಮಿ, ಲಕ್ಷ್ಮೀಕಾಂತ್‌, ಶಿವಾನಂದಯ್ಯ, ಎನ್‌.ಹನುಮಂತರಾವ್‌ ಮತ್ತಿತರರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿಗಳಾದ ಡಾ.ಬಿ.ಎ. ಪಾರ್ಥಸಾರಥಿ, ಶ್ರೀನಿವಾಸ್‌, ರಾಯರೆಡ್ಡಿ, ಲೋಕನಾಥ್‌ ಮತ್ತಿತರರು ಭಾಗವಹಿಸಿದ್ದರು. ರೇಷ್ಮೆ ಬೆಳೆಗಾರರಿಗೆ ಅಗತ್ಯ ಇರುವ ವಿವಿಧ ಸಲಕರಣೆಗಳನ್ನು ರೇಷ್ಮೆ ಮಂಡಳಿ ವತಿಯಿಂದ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಯಿತು.

**

ರೇಷ್ಮೆಯ  ಬಿತ್ತನೆಗೂಡಿನ ಬೆಲೆಯನ್ನು ಈಗಿನ ಒಂದು ಕೆ.ಜಿಗೆ ₹ 750 ಗಳಿಂದ ₹ 900ಕ್ಕೆ  ಹೆಚ್ಚು ಮಾಡುವ ಬಗ್ಗೆ ಚಿಂತನೆ ನಡೆಯುತ್ತಿದೆ
–ಕೆ.ಎಂ.ಹನುಮಂತರಾಯಪ್ಪ, ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.