ADVERTISEMENT

ಮೋದಿ ಜನಪರ ಕಾರ್ಯಕ್ರಮ ಮೆಚ್ಚಿ ಪಕ್ಷ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 5:14 IST
Last Updated 14 ಅಕ್ಟೋಬರ್ 2017, 5:14 IST

ದೇವನಹಳ್ಳಿ: ಕೇಂದ್ರ ಸರ್ಕಾರದ ಪ್ರದಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಪ್ರಜ್ಞಾವಂತ ಯುವ ಸಮುದಾಯ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

ಇಲ್ಲಿನ ಡಿವಿಎಂ ಬಡಾವಣೆಯಲ್ಲಿ ನಡೆದ ವಿವಿಧ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿಸ್ತು ಮತ್ತು ಕ್ರಿಯಾಶೀಲ ಪಕ್ಷವಾಗಿರುವ ಬಿಜೆಪಿ ಪ್ರಸ್ತುತ ದೇಶದಲ್ಲಿ ಬಲಿಷ್ಠವಾಗಿದೆ. ದೇಶದಲ್ಲಿ ಶೇಕಡ 75 ರಷ್ಟು ರಾಜ್ಯಗಳ ಸರ್ಕಾರದ ಚುಕ್ಕಾಣಿಯನ್ನು ಬಿಜೆಪಿ ಹಿಡಿದಿದೆ. ಅದು 2018ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಆಧಿಕಾರ ನಡೆಸುವ ವಿಶ್ವಾಸವಿದೆ ಎಂದರು.

ಬಿಜೆಪಿ ನಡೆಸುತ್ತಿರುವ ರಥಯಾತ್ರೆ ಮತ್ತು ಸಮಾವೇಶಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಯಾವುದೇ ಸಮಾವೇಶ ನಡೆಸಿದರು ವಿಫಲವೆಂದೇ ಭಾವಿಸಬೇಕು, ಸಮಾವೇಶಕ್ಕೆ ಪಕ್ಷದಲ್ಲಿರುವ ನಿಷ್ಠಾವಂತ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದರು. ಸ್ಥಳೀಯ ಮುಖಂಡರು ಪಕ್ಷದಲ್ಲಿ ಕ್ರಿಯಾಶೀಲರಾದರೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧ್ಯವಾಗಲಿದೆ ಎಂದರು.

ADVERTISEMENT

ಬಿಜೆಪಿ ಮುಖಂಡ ಡಿ.ಆರ್ ನಾರಾಯಣಸ್ವಾಮಿ ಮಾತನಾಡಿ, ದೇವನಹಳ್ಳಿ ಮೀಸಲು ವಿಧಾನಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದು ಅನೇಕ ಶಾಸಕರು ಆಯ್ಕೆಗೊಂಡಿದ್ದಾರೆ, ತಲಾಂತರದ ಮೂಲ ಸೌಲಭ್ಯ ಸಮಸ್ಯೆಗಳು ನಿವಾರಣೆಯಾಗಿಲ್ಲ ಕ್ಷೇತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಹ ಸ್ಥಿತಿಯಲ್ಲಿದೆ ಎಂದು ಟೀಕಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು ನೂರಾರು ಕೋಟಿ ಶುಲ್ಕ ಸಂಗ್ರಹಣೆಯಾಗುತ್ತಿದೆ. ಆದರೂ, ಈ ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಪ್ರಜ್ಞಾವಂತರು ಈ ಕುರಿತು ಚಿಂತಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ರಾಜಣ್ಣ, ಉಪಾಧ್ಯಕ್ಷ ಎಚ್.ಎಂ.ರವಿಕುಮಾರ್, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ರಾಜ್ ಗೋಪಾಲ್, ತಾಲ್ಲೂಕು ಘಟಕ ಅಧ್ಯಕ್ಷ ನಾಗರಾಜ್ ಗೌಡ, ಪ್ರಧಾನ ಕಾರ್ಯದರ್ಶಿ ಕೇಶವ, ರಾಷ್ಟ್ರೀಯ ಪರಿಷದ್ ಸದಸ್ಯ ಗುರುಸ್ವಾಮಿ, ರಾಜ್ಯ ಪರಿಷದ್ ಸದಸ್ಯ ದೇ.ಸು.ನಾಗರಾಜ್, ಮುಖಂಡ ಬಾಲರಾಜ್, ರಮೇಶ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.