ADVERTISEMENT

ಕದ್ದ ಮೊಬೈಲ್‌ ಮಾರಾಟ 1037 ಮೊಬೈಲ್‌ ವಶ: ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2023, 19:42 IST
Last Updated 27 ಅಕ್ಟೋಬರ್ 2023, 19:42 IST
ಮೊಬೈಲ್‌ ಕಳವು ಮಾಡಿ, ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳು
ಮೊಬೈಲ್‌ ಕಳವು ಮಾಡಿ, ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳು   

ಆನೇಕಲ್: ಕಳವು ಮಾಡಿದ ಮೊಬೈಲ್‌ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಗುರುವಾರ ಬಂಧಿಸಿರುವ ಬನ್ನೇರುಘಟ್ಟ ಪೊಲೀಸರು ಅವರಿಂದ ನೂರಕ್ಕೂ ಹೆಚ್ಚು ಕಂಪನಿಗಳ 1,037 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನ ಮೊಹಮ್ಮದ್‌ ಮಾಮದ್‌ ಪಾಷಾ, ಮೊಹಮದ್‌ ಉಮರ್‌, ಐಯಾನ್‌, ಮೊಹಮದ್ ಸಲೀಂ ಬಂಧಿತ ಆರೋಪಿಗಳು.

ಬನ್ನೇರುಘಟ್ಟದ ಎಎಂಸಿ ಕಾಲೇಜು ಬಳಿ ಆರೋಪಿಗಳು ಕದ್ದ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿರುವ ಕುರಿತು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರ ನಡೆಸಿದರು. 

ADVERTISEMENT

ಈ ವೇಳೆ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಮೆಜೆಸ್ಟಿಕ್‌, ಶಿವಾಜಿನಗರ, ಎಂ.ಜಿ.ರೋಡ್‌ ಮತ್ತಿತರ ಜನಸಂದಣಿಯ ಸ್ಥಳಗಳಲ್ಲಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಮೊಬೈಲ್‌ ಕದಿಯುತ್ತಿದ್ದ ಕಳ್ಳರ ಗುಂಪು ಆರೋಪಿ ಮಹಮದ್‌ ಮಾಮದ್‌ ಪಾಷಾನಿಗೆ ನೀಡುತ್ತಿತ್ತು.

ಕಳವು ಮಾಡಿದವರಿಗೆ ಆರೋಪಿ ಮಾಮದ್‌ ಪಾಷಾ ₹2- ₹3ಸಾವಿರ ಹಣ ನೀಡುತ್ತಿತ್ತು. ಕಳವು ಮಾಡಿದ ಮೊಬೈಲ್‌ಗಳನ್ನು ಬೆಂಗಳೂರಿನ ಹೆಗಡೆನಗರದ ಬಾಡಿಗೆ ಮನೆಯಲ್ಲಿ ಸಂಗ್ರಹಿಸಿಟ್ಟು ತಮಿಳುನಾಡಿನ ಚೆನ್ನೈ, ಕೇರಳದ ಮಂಜೇರಿಗೆ ಖಾಸಗಿ ಬಸ್‌ಗಳಲ್ಲಿ ಪಾರ್ಸಲ್‌ ಕಳುಹಿಸಿ ಮಾರಾಟ ಮಾಡುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬನ್ನೇರುಘಟ್ಟ ಪೊಲೀಸ್‌ ಇನ್‌ಸ್ಪೆಕ್ಟರ್‌ ಕೃಷ್ಣಕುಮಾರ್, ಸಬ್‌ಇನ್‌ಸ್ಪೆಕ್ಟರ್‌ ಸಿದ್ದನಗೌಡ ಜಲಪೂರ್, ಸಿಬ್ಬಂದಿ ದಿನೇಶ್‌, ಕೋಟೇಶ್‌, ಲಕ್ಷ್ಮಣ್‌, ಶಿವಕುಮಾರ್‌, ಸುರೇಶ್ ಕಿಚಡಿ, ಮೆಹಬೂಬ್‌, ಶೇಖರ್‌, ಮುರೆಪ್ಪ ವಾಗೇರಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.