ADVERTISEMENT

ಆನೇಕಲ್| ರಾಜ್ಯಮಟ್ಟದ ಕೊಕ್ಕೊ ಪಂದ್ಯಾವಳಿ; 24 ಬಾಲಕ, 15 ಬಾಲಕಿಯರ ತಂಡಗಳು ಭಾಗಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 6:20 IST
Last Updated 1 ಫೆಬ್ರುವರಿ 2026, 6:20 IST
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಬಿ.ಶಿವಣ್ಣ ಆಪ್ತ ಬಳಗದ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಖೋಖೊ ಪಂದ್ಯಾವಳಿಯಲ್ಲಿ ರಾಜ್ಯ ವಿವಿಧ ಜಿಲ್ಲೆಗಳಿಂದ ಆಟಗಾರರು ಆಗಮಿಸಿದ್ದರು
ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಬಿ.ಶಿವಣ್ಣ ಆಪ್ತ ಬಳಗದ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಖೋಖೊ ಪಂದ್ಯಾವಳಿಯಲ್ಲಿ ರಾಜ್ಯ ವಿವಿಧ ಜಿಲ್ಲೆಗಳಿಂದ ಆಟಗಾರರು ಆಗಮಿಸಿದ್ದರು   

ಚಂದಾಪುರ(ಆನೇಕಲ್): ಬಿ.ಶಿವಣ್ಣ ಆಪ್ತ ಬಳಗದಿಂದ ತಾಲ್ಲೂಕಿನ ಚಂದಾಪುರ ಸೂರ್ಯಸಿಟಿಯಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿಗೆ ಶನಿವಾರ ಚಾಲನೆ ದೊರೆಯಿತು. ರಾಜ್ಯದ ವಿವಿಧೆಡೆಯ 24 ಬಾಲಕರ ತಂಡ ಮತ್ತು 15 ಬಾಲಕಿಯರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ. 

ಕೋಲಾರ, ಚಿತ್ರದುರ್ಗ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕೊಕ್ಕೊ ಆಟಗಾರರು ಆಗಮಿಸಿದ್ದರು. ಅಂಕಣಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿರುವುದರಿಂದ ವಿದ್ಯುತ್‌ ದೀಪಗಳ ಬೆಳಕಿನಲ್ಲಿ ಕೊಕ್ಕೊ ಅಂಕಣ ಝಗಮಗಿಸುತ್ತಿದೆ. ಇದೇ ಮೊದಲ ಬಾರಿಗೆ ಚಂದಾಪುರದಲ್ಲಿ ರಾಜ್ಯ ಮಟ್ಟದ ಖೋಖೊ ಆಯೋಜಿಸಲಾಗಿದ್ದು ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು, ಕೊಕ್ಕೊ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಶಾಸಕ ಬಿ.ಶಿವಣ್ಣ ಮಾತನಾಡಿ ಕಬಡ್ಡಿ, ಕ್ರಿಕೆಟ್‌ಗೆ ದೊರೆತ ಜನಮನ್ನಣೆ ಕೊಕ್ಕೊ ಕ್ರೀಡೆಗೂ ದೊರೆಯಬೇಕು. ಕೊಕ್ಕೊ ಆಟಗಾರರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯ ಮಟ್ಟದ ಕೊಕ್ಕೊ ಆಯೋಜಿಸಲಾಗಿದೆ. 39 ತಂಡಗಳು ಬಾಲಕರು ಮತ್ತು ಬಾಲಕಿಯರ ವಿಭಾಗದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ. ಕ್ರೀಡೆಗಳಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯವಾಗಿದೆ. ನಿರಂತರ ಶ್ರದ್ಧೆ, ಸತತ ಪ್ರಯತ್ನಸಿದ್ದರೆ ಸಾಧನೆ ಮಾಡಬಹುದಾಗಿದೆ ಎಂದರು.

ADVERTISEMENT

ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಿಂದ ಆಟಗಾರರು ರಾಜ್ಯ ಮಟ್ಟದ ಕೊಕ್ಕೊ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಾರೆ. ಆಟಗಾರರಿಗೆ ವಸತಿ, ಊಟ ಸೇರಿದಂತೆ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಬಳಗದ ವತಿಯಿಂದ ಈ ಹಿಂದೆ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು ಕ್ರೀಡಾ ವಿಭಾಗಕ್ಕೆ ಬಲ ನೀಡುವ ಸಲುವಾಗಿ ಕೊಕ್ಕೊ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ವಾಲಿಬಾಲ್‌ ಪಂದ್ಯಾವಳಿ ಆಯೋಜಿಸಲಾಗುವುದು ಎಂದು ಆಪ್ತ ಬಳಗದ ಶ್ರೀನಿವಾಸ್‌ ಮತ್ತು ಬನಹಳ್ಳಿ ಅಭಿ ತಿಳಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ರಘುಪತಿರೆಡ್ಡಿ, ಲಿಂಗಣ್ಣ, ತೋಟಗಾರಿಕೆ ವಿಶ್ವವಿದ್ಯಾಲಯದ ಸೆನೆಟ್‌ ಸದಸ್ಯ ಉಲ್ಲಾಸ್‌, ಮುಖಂಡರಾದ ಚಂದ್ರಪ್ಪ, ಕೂಡ್ಲು ಬಾಲಕೃಷ್ಣ, ಪುಷ್ಪರಾಜು, ಮುನಿತಿಮ್ಮಾರೆಡ್ಡಿ, ಭೈರೇಶ್, ಶಿವಪ್ಪರೆಡ್ಡಿ, ಗೋಪಾಲ್‌, ಅಂಬರೀಷ್, ಎಸ್‌.ಟಿ.ಡಿ.ರಮೇಶ್‌, ಗಂಗಣ್ಣ, ಬಸವರಾಜು ಇದ್ದರು.

ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ಬಿ.ಶಿವಣ್ಣ ಆಪ್ತ ಬಳಗದ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಖೋಖೊ ಪಂದ್ಯಾವಳಿಯ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.