ADVERTISEMENT

ಕೃಷಿ ಕಾಯಕ; ಯುವಕರ ಒಲವು

ಲಾಕ್‌ಡೌನ್‌ ಪರಿಣಾಮ: ಸ್ವಂತ ಊರಿಗೆ ಮರಳಿದ ಯುವಜನತೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2020, 9:10 IST
Last Updated 22 ಜೂನ್ 2020, 9:10 IST
ವಿಜಯಪುರದ ಸಮೀಪದ ಯುವ ರೈತನೊಬ್ಬ ಲಾಕ್ ಡೌನ್ ನಡುವೆ ಬೆಳೆದಿದ್ದ ಎಲೆಕೋಸಿನ ಬೆಳೆ (ಸಂಗ್ರಹ ಚಿತ್ರ)
ವಿಜಯಪುರದ ಸಮೀಪದ ಯುವ ರೈತನೊಬ್ಬ ಲಾಕ್ ಡೌನ್ ನಡುವೆ ಬೆಳೆದಿದ್ದ ಎಲೆಕೋಸಿನ ಬೆಳೆ (ಸಂಗ್ರಹ ಚಿತ್ರ)   

ವಿಜಯಪುರ: ಸರ್ಕಾರ ಘೋಷಿಸಿದ 3 ತಿಂಗಳ ಕಾಲ ಲಾಕ್‌ಡೌನ್‌ ಪರಿಣಾಮ ಬೆಂಗಳೂರು ಮಹಾನಗರದಂತಹ ಸಿಟಿಗಳಿಗೆ ಖಾಸಗಿ ಉದ್ಯೋಗ ಅರಸಿ ವಲಸೆ ಹೋಗಿದ್ದ ಸಾವಿರಾರು ಉದ್ಯೋಗಿಗಳು ಹಳ್ಳಿಗಳತ್ತ ವಾಪಸ್‌ ಬಂದಿದ್ದು ಕೃಷಿಯತ್ತ ಗಮನಹರಿಸುತ್ತಿದ್ದಾರೆ.

ನಗರದಿಂದ ಬಂದಾಗಿನಿಂದ ಬಹುತೇಕ ಸಮಯ ಮನೆಗಳಲ್ಲಿ ಕಾಲ ಕಳೆದ ಯುವ ಉದ್ಯೋಗಿಗಳು ಮತ್ತೆ ನಗರಕ್ಕೆ ಹೋಗುವ ಮನಸ್ಸು ತೋರುತ್ತಿಲ್ಲ. ಸಿಟಿ ಸಹವಾಸ ಸಾಕು. ಸ್ಥಳೀಯವಾಗಿಯೇ ಏನಾದರೂ ಸ್ವಯಂ ಉದ್ಯೋಗ ಕೈಗೊಂಡು, ಜೀವನ ರೂಪಿಸಿಕೊಂಡರೆ ಸಾಲದೇ ಎಂಬ ಚಿಂತನೆ ಮಾಡುತ್ತಿದ್ದಾರೆ.

ಕೊರೊನಾ ವೈರಸ್‌, ಯುವ ಮನಸ್ಸುಗಳಲ್ಲಿ ಬಾರೀ ಪರಿವರ್ತನೆಯನ್ನೇ ತಂದಿದೆ. ಇಷ್ಟು ದಿನ ಸಿಟಿ ಲೈಫ್‌ ಇದ್ದರೆ ಸಾಕು ಎಂದುಕೊಂಡಿದ್ದ ಬಹುತೇಕ ಯುವಕರು ಈಗ ಗ್ರಾಮೀಣ ಲೈಫೇ ಎಷ್ಟೋ ಸೊಗಸು ಎಂಬ ಲೆಕ್ಕಾಚಾರಕ್ಕೆ ಬಂದಿದ್ದಾರೆ.

ADVERTISEMENT

ಸರ್ಕಾರ ಕೂಡ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಬೇಕು. ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸಬೇಕು ಎಂಬ ದಿಸೆಯಲ್ಲಿ ಹಲವು ರೀತಿಯ ಉದ್ಯಮಶೀಲತಾ ಯೋಜನೆಗಳನ್ನು ಜಾರಿ ಮಾಡಿದೆ. ಬ್ಯಾಂಕ್‌, ಸಹಕಾರ ಸಂಸ್ಥೆಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸುತ್ತಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳುವತ್ತ ಯುವಕರು ಗಮನಹರಿಸುತ್ತಿದ್ದು, ಬ್ಯಾಂಕುಗಳಿಗೆ ಎಡತಾಕುತ್ತಿದ್ದಾರೆ.

‘ಹತ್ತು ವರ್ಷಗಳಿಂದ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿಕೊಂಡು, ಬಾಡಿಗೆ ಮನೆಯಲ್ಲಿ ವಾಸವಿದ್ದೆ. ಇಷ್ಟಿದ್ದರೆ ಸಾಕು ಲೈಫ್‌ ಎಂದುಕೊಂಡಿದ್ದೆ. ಆದರೆ, ಕೊರೊನಾ ಎಂಬ ಮಹಾಮಾರಿ ಬಂದು, ಕಂಪನಿ ಮುಚ್ಚಿತು. ವಿಧಿಯಿಲ್ಲದೆ ಹಳ್ಳಿಗೆ ವಾಪಸ್‌ ಬರಬೇಕಾಯಿತು. ಈಗ ಗ್ರಾಮೀಣ ಲೈಫೇ ಎಷ್ಟೋ ವಾಸಿ ಅನ್ನಿಸಿದೆ’ ಎಂದು ಬೆಂಗಳೂರಿನ ಸಾಪ್ಟ್‌ವೇರ್‌ ಕಂಪನಿಯೊಂದರ ಉದ್ಯೋಗಿ ನಾಗೇಶ್ ಅಭಿಪ್ರಾಯಪಟ್ಟರು.

ಲಾಕ್‌ಡೌನ್‌ನಿಂದ ಗ್ರಾಮೀಣ ಭಾಗದಲ್ಲಿ ಉಳಿದುಕೊಂಡು ತಮ್ಮ ಮನಸ್ಥಿತಿ ಬದಲಿಸಿಕೊಂಡ ಹಲವು ಉದ್ಯೋಗಿಗಳು ಸ್ಥಳೀಯವಾಗಿ ಯಾವ ಉದ್ಯೋಗ ಕೈಗೊಂಡರೆ ಉತ್ತಮ ಎಂಬ ಚಿಂತನೆಯಲ್ಲಿದ್ದರೆ, ಇದರಲ್ಲಿ ಬಹುತೇಕರು ಕೃಷಿ, ವ್ಯಾಪಾರ ಸೇರಿದಂತೆ ಇನ್ನಿತರ ಸ್ವ ಉದ್ಯೋಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ.

‘ಕೃಷಿ ರಂಗ ಕೂಡ ಸಾಕಷ್ಟು ಲಾಭದಾಯಕ ಉದ್ಯಮವಾಗಿದ್ದು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡರೆ ತಪ್ಪೇನಿಲ್ಲ. ಆದರೆ, ಒಂದು ಕಾಲದಲ್ಲಿ ಇಡೀ ದೇಶಕ್ಕೆ ಹಾಲು, ಹಣ್ಣು, ತರಕಾರಿ, ಹೂಗಳನ್ನು ಯಥೇಚ್ಛವಾಗಿ ಪೂರೈಕೆ ಮಾಡುತ್ತಿದ್ದೆವು. ಈಗ ನೀರಿನ ಕೊರತೆಯಿಂದಾಗಿ ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಲಿಕ್ಕೆ ಆಗದ ಕಾರಣ ಯುವಕರನ್ನು ಸಿಟಿಯತ್ತ ಕಳುಹಿಸಿದ್ದೆವು. ಈಗ ಅವರು ವಾಪಸ್‌ ಬಂದು ಮನೆಯಲ್ಲಿದ್ದಾರೆ. ಅವರು ಪುನಃ ಕೃಷಿಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿಗಳಾಗಬೇಕಾದರೆ ನೀರಾವರಿ ಯೋಜನೆಗಳು ಸಾಕಾರಗೊಳ್ಳಬೇಕು. ಇಲ್ಲವೇ ವರುಣನ ಕೃಪೆಯಿಂದ ಕೆರೆಗಳು ತುಂಬಿದರೆ ಅವರ ಜೀವನ ಅವರು ರೂಪಿಸಿಕೊಳ್ಳುತ್ತಾರೆ’ ಎಂದು ನಂಜುಂಡಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.