ADVERTISEMENT

ಹೊಸಕೋಟೆ: ಯೂಟ್ಯೂಬ್ ನೋಡಿ ಕಾಶ್ಮೀರಿ ಸೇಬು ಬೆಳೆದ ಬಯಲು ಸೀಮೆ ರೈತ ಬಸವರಾಜು

ಪ್ರಜಾವಾಣಿ ವಿಶೇಷ
Published 29 ಮಾರ್ಚ್ 2024, 4:27 IST
Last Updated 29 ಮಾರ್ಚ್ 2024, 4:27 IST
ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿ ಸಿದ್ದೇನಹಳ್ಳಿ ಗ್ರಾಮದಲ್ಲಿ ರೈತ ಬಸವರಾಜು ಬೆಳೆದಿರುವ ಸೇಬು
ಹೊಸಕೋಟೆ ತಾಲ್ಲೂಕು ಸೂಲಿಬೆಲೆ ಹೋಬಳಿ ಸಿದ್ದೇನಹಳ್ಳಿ ಗ್ರಾಮದಲ್ಲಿ ರೈತ ಬಸವರಾಜು ಬೆಳೆದಿರುವ ಸೇಬು   

ಸೂಲಿಬೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸಿದ್ದೇನಹಳ್ಳಿ ಗ್ರಾಮದ ರೈತರೊಬ್ಬರು ಸೇಬು ಬೆಳೆದು ಗಮನ ಸೆಳೆದಿದ್ದಾರೆ. ದೂರದ ಕಾಶ್ಮೀರದಲ್ಲಿ ಮಾತ್ರ ಈ ಬೆಳೆ ಬೆಳೆಯಲು ಸಾಧ್ಯ ಎಂದುಕೊಂಡಿದ್ದ ರೈತರಿಗೆ ಭರ್ಜರಿ ಬೆಳೆ ಬೆಳೆದು ಸೈ ಎನ್ನಿಸಿಕೊಂಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಹೋಬಳಿಯ ಸಿದ್ದೇನಹಳ್ಳಿ ಗ್ರಾಮದ ಬಸವರಾಜು ಅವರು ತನ್ನ ಒಂದು ಎಕರೆ ನಾಲ್ಕು ಗುಂಟೆ ಜಮೀನಿನಲ್ಲಿ ಅನೇಕ ತರಕಾರಿ ಬೆಳೆ ಬೆಳೆಯುತ್ತಿದ್ದರು. ವಿಭಿನ್ನ ರೀತಿಯಲ್ಲಿ ಕೃಷಿಯನ್ನು ಮಾಡಬೇಕೆಂಬ ಮಹದಾಸೆ ಹೊಂದಿದ್ದರು.

ಯೂಟ್ಯೂಬ್‌ನಲ್ಲಿ ವಿಡಿಯೊ ನೋಡಿ ತಾನೂ ಸಹ ಏನನ್ನಾದರೂ ವಿಭಿನ್ನವಾಗಿ ಸಾಧಿಸಬೇಕೆಂದು ಆಲೋಚಿಸಿ ತನ್ನ ಜಮೀನಿನಲ್ಲಿ ಕಾಶ್ಮೀರಿ ಸೇಬು ಬೆಳೆದಿದ್ದಾರೆ. ಯುಟ್ಯೂಬ್‌ನಲ್ಲಿ ಸೇಬು ಬೆಳೆಯುವ ವಿಡಿಯೊವನ್ನು ನೋಡಿ ಹಿಮಾಯಲದ ಡಾ.ಶರ್ಮಾ ಅವರನ್ನು ಭೇಟಿ ಮಾಡಿ ಅವರು ನೀಡಿದ ಮಾರ್ಗದರ್ಶನದ ಪ್ರಕಾರ ಬಿಜಾಪುರದ ರೈತ ಸಚಿನ್ ಬೆಲ್ಲೋಡ ಅವರ ಬಳಿ ಕಾಶ್ಮೀರಿ ಸೇಬು ಗಿಡಗಳನ್ನು ತಂದು ನಾಟಿ ಮಾಡಿದರು. 12 ಗಿಡಗಳನ್ನು ನಾಟಿ ಮಾಡಿ ಸೇಬು ಬೆಳೆಯುವ ಮೂಲಕ ಸೈ ಎನ್ನಿಸಿಕೊಂಡಿದ್ದಾರೆ.

ADVERTISEMENT

ಸೇಬು ಗಿಡಗಳಿಗೆ ಯಾವುದೇ ರಾಸಾಯನಿಕ ಔಷಧಿ ಬಳಸದೇ ಕಪ್ಪು ಮಣ್ಣು, ಹೊಂಗೆ ಹಿಂಡಿ, ಬೇವಿನ ಹಿಂಡಿಯನ್ನು ಹಾಕಿ ಬೆಳೆದಿದ್ದಾರೆ. ಇವರು ಬೆಳೆದ ಸೇಬಿನ ರುಚಿ ಕಾಶ್ಮೀರದಲ್ಲಿ ಬೆಳೆದ ಸೇಬಿನ ರುಚಿಯನ್ನೇ ಹೋಲುತ್ತಿದೆ. ಈ ಸೇಬು ಗಿಡ ನೋಡಲು  ಬರುವ ಸುತ್ತಮುತ್ತಲಿನ ಗ್ರಾಮಸ್ಥರು ಕೆ.ಜಿಯೊಂದಕ್ಕೆ ₹120 ಕೊಟ್ಟು ತಾಜಾ ಕಾಶ್ಮೀರಿ ಸೇಬನ್ನು ಕೊಂಡು ಹೋಗುತ್ತಿದ್ದಾರೆ.

ಈ ಸೇಬು ಗಿಡಗಳನ್ನು ಬೆಳೆಯಲು ₹3 ಲಕ್ಷ ಬಂಡವಾಳ ಹಾಕಿದ್ದು, ಈಗಾಗಲೇ 1,200 ಕೆ.ಜಿಯಷ್ಟು ಸೇಬನ್ನು ಸ್ಥಳದಲ್ಲಿಯೇ ಮಾರಾಟ ಮಾಡಿದ್ದಾರೆ. ಅತಿ ಕಡಿಮೆ ದಿನಗಳಲ್ಲಿ ಅಂದರೆ ಒಂದು ವರ್ಷ ಎಂಟು ತಿಂಗಳಿಗೆ ಈ ಬೆಳೆ ಬರುತ್ತದೆ. ಹಾಕಿದ ಬಂಡವಾಳ ಒಂದೇ ಫಸಲಿಗೆ ಸಿಕ್ಕಿರುವುದು ರೈತನ ಮುಖದಲ್ಲಿ ಸಂತಸ ತಂದಿದೆ. ಇವರ ಈ ಸಾಧನೆಗೆ ಕುಟುಂಬಸ್ಥರು, ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಜಿಕೆವಿಕೆ ಹೆಬ್ಬಾಳಕ್ಕೆ ಹಲವು ಬಾರಿ ಭೇಟಿ ನೀಡಿ ಸೇಬುಬೆಳೆಯ ಬಗ್ಗೆ ಮಾಹಿತಿ ನೀಡುವಂತೆ ಕೇಳಿದೆ. ಅಗತ್ಯ ಮಾಹಿತಿ ಸಿಗಲಿಲ್ಲ. ಹೇಗಾದರೂ ಸರಿ ಈ ಬೆಳೆಯನ್ನು ಬೆಳೆದೇ ಬೆಳೆಯುತ್ತೇನೆಂಬ ಹುಮ್ಮಸ್ಸು ಸಾಧನೆಗೆ ಕಾರಣವಾಯಿತು ಎನ್ನುತ್ತಾರೆ ರೈತಬಸವರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.