
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರ ಮುಂಭಾಗದಲ್ಲಿ ಗುಂಪೊಂದು ಸಾಮೂಹಿಕವಾಗಿ ನಮಾಜ್ ಮಾಡಿದ ವಿಡಿಯೊ ಹಾಗೂ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ರಾಜಕೀಯ ಚರ್ಚೆ ಹುಟ್ಟು ಹಾಕಿದೆ.
ವಿದೇಶಕ್ಕೆ ಹೊರಟವರನ್ನು ಬೀಳ್ಕೊಡಲು ಬಂದಿದ್ದ 15–16 ಜನರಿದ್ದ ಗುಂಪೊಂದು ಟರ್ಮಿನಲ್–2ರ ಪ್ರವೇಶ ಪ್ರದೇಶದ ನೆಲದ ಮೇಲೆ ಬಟ್ಟೆ ಹಾಸಿ ಪ್ರಾರ್ಥನೆ ಸಲ್ಲಿಸಿದೆ.
ಟರ್ಮಿನಲ್‌ನಿಂದ ವಾಹನ ನಿಲುಗಡೆ ಪ್ರದೇಶಕ್ಕೆ ತೆರಳುವ ಪ್ರದೇಶದಿಂದ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿಯಲಾಗಿದೆ. ಇದು ನಡೆದದ್ದು ಎಂದು ಮತ್ತು ಯಾವಾಗ ಎಂಬ ನಿರ್ದಿಷ್ಟ ಮಾಹಿತಿ ಲಭ್ಯವಾಗಿಲ್ಲ.
ವಿಡಿಯೊ ಸೆರೆ ಹಿಡಿದ ವ್ಯಕ್ತಿಯ ಪಕ್ಕದಲ್ಲಿಯೇ ವಿಮಾನ ನಿಲ್ದಾಣದ ಭದ್ರತೆಯ ಹೊಣೆ ಹೊತ್ತ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಐದಾರು ಸಿಬ್ಬಂದಿ ನಿಂತಿರುವುದು ದೃಶ್ಯದಲ್ಲಿ ಕಾಣುತ್ತದೆ.
ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಇದಕ್ಕೆ ಹಲವರು ಧ್ವನಿಗೂಡಿಸಿದ್ದಾರೆ.
‘ಟರ್ಮಿನಲ್ ಪ್ರವೇಶ ದ್ವಾರದ ಬಳಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದ್ದು, ನಿರ್ಬಂಧ ಇಲ್ಲ. ಇಲ್ಲಿ ಯಾರು ಏನು ಮಾಡುತ್ತಾರೆ ಎಂದು ಗೊತ್ತಾಗುವುದಿಲ್ಲ. ಇಂತಹದ್ದೇ ಮಾಡಬೇಕು, ಮಾಡಬಾರದು ಎಂಬ ಸ್ಪಷ್ಟ ನಿರ್ದೇಶನ ಇಲ್ಲ’ ಎಂದು ವಿಮಾನ ನಿಲ್ದಾಣದ ಮೂಲಗಳು ಪ್ರತಿಕ್ರಿಯಿಸಿವೆ.
ಪ್ರಾರ್ಥನೆಗೆ ಪ್ರತ್ಯೇಕ ಕೋಣೆ: ವಿವಿಧ ಧರ್ಮಗಳ ಪ್ರಯಾಣಿಕರು ಪ್ರಾರ್ಥನೆ ಸಲ್ಲಿಸಲು ಟರ್ಮಿನಲ್-2ರಲ್ಲಿ ಬಹು ಧಾರ್ಮಿಕ ಪ್ರಾರ್ಥನಾ ಕೋಣೆ ಇದೆ. ಇದನ್ನು ಎಲ್ಲ ಧರ್ಮ, ಜಾತಿಯ ಪ್ರಯಾಣಿಕರು ಪ್ರಾರ್ಥನೆಗೆ ಬಳಸಬಹುದಾಗಿದೆ ಎನ್ನುತ್ತಾರೆ ವಿಮಾನ ನಿಲ್ದಾಣದ ಅಧಿಕಾರಿಗಳು.
ಸರ್ಕಾರದ ಮೌನ ಸಮ್ಮತಿ: ಬಿಜೆಪಿ ಟೀಕೆ
ಸಾಮೂಹಿಕ ನಮಾಜ್ ಮಾಡುವ ದೃಶ್ಯಾವಳಿ ಮತ್ತು ಚಿತ್ರಗಳನ್ನು ಬಿಜೆಪಿ ವಕ್ತಾರ ವಿಜಯ್ ಪ್ರಸಾದ್ ಸಾಮಾಜಿಕ ಮಾಧ್ಯಮ 'ಎಕ್ಸ್' ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಅನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸಾಮೂಹಿಕ ಪ್ರಾರ್ಥನೆಗೆ ರಾಜ್ಯ ಸರ್ಕಾರ ಅಥವಾ ವಿಮಾನ ನಿಲ್ದಾಣ ಆಡಳಿತ ಮಂಡಳಿ ಪೂರ್ವಾನುಮತಿ ನೀಡಿತ್ತೆ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದ್ದಾರೆ.
ವಿಮಾನ ನಿಲ್ದಾಣದಂತಹ ಬಿಗಿ ಭದ್ರತಾ ಪ್ರದೇಶದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಹೇಗೆ ಅವಕಾಶ ನೀಡಲಾಗಿದೆ? ಇದು ಸರ್ಕಾರದ ಸಮ್ಮತಿ ಇಲ್ಲದೆ ಸಾಧ್ಯವಿಲ್ಲ ಎಂದಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಬಿಜೆಪಿ ಅಥವಾ ಹಿಂದೂ ಸಂಘಟನೆಗಳು ಕಾರ್ಯಕ್ರಮ ನಡೆಸಿದರೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳುತ್ತದೆ. ಆದರೆ ನಮಾಜ್ ಮಾಡಿದರೆ ಅದು ಅವರಿಗೆ ಕಾಣುವುದಿಲ್ಲ. ಇದು ದ್ವಂದ್ವ ನೀತಿ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.