ADVERTISEMENT

ಅಕ್ಷಯ ತೃತೀಯ: ಆಭರಣದಂಗಡಿಗಳು ಭಣಭಣ

ಬಂಗಾರ ಖರೀದಿಗೆ ಲಾಕ್‌ಡೌನ್‌ ಅಡ್ಡಿ l ಹಬ್ಬಕ್ಕಿಲ್ಲ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2020, 12:27 IST
Last Updated 26 ಏಪ್ರಿಲ್ 2020, 12:27 IST
ಆಭರಣಗಳು
ಆಭರಣಗಳು   

ವಿಜಯಪುರ: ಅಕ್ಷಯ ತೃತೀಯ ದಿನ ಚಿನ್ನ ಕೊಂಡರೆ ವರ್ಷವಿಡೀ ಬಾಳು ಬಂಗಾರವಾಗಿರುತ್ತದೆ ಎಂಬ ನಂಬಿಕೆಯಿಂದ ಜನರು ಆಭರಣ ಮಳಿಗೆಗಳಿಗೆ ದೌಡಾಯಿಸುತ್ತಿದ್ದದ್ದು ಎಲ್ಲ ವರ್ಷಗಳಲ್ಲೂ ಸಾಮಾನ್ಯವಾಗಿತ್ತು.ಆದರೆ, ಈ ಬಾರಿ ಕೊರೊನಾ, ಲಾಕ್‌ಡೌನ್‌ ಚಿನ್ನ ಖರೀದಿಯ ಖುಷಿಯನ್ನು ಇಲ್ಲವಾಗಿಸಿದೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಎಲ್ಲ ಮಳಿಗೆಗಳು ಮುಚ್ಚಿವೆ. ಇನ್ನು ಜನರು ಮುಗಿಬಿದ್ದು ಖರೀದಿಸುತ್ತಿದ್ದ ಚಿನ್ನದ ಉಂಗುರ, ಓಲೆ, ಸರ, ಲಕ್ಷ್ಮೀ ಮುದ್ರೆಯ ನಾಣ್ಯಗಳು ಮಳಿಗೆಗಳ ಕಪಾಟುಗಳಲ್ಲಿ ಭದ್ರವಾಗಿವೆ.

ಇಲ್ಲಿನ ಹಳೇ ಕೆನರಾ ಬ್ಯಾಂಕ್ ರಸ್ತೆ, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಇರುವ ವಿವಿಧ ಆಭರಣಗಳ ಮಳಿಗೆಗಳಿಗೆ ಮಧ್ಯಾಹ್ನದ ನಂತರ ಚಿನ್ನ ಖರೀದಿಗೆ ಮುಗಿಬೀಳುತ್ತಿದ್ದ ಗ್ರಾಹಕರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ.

ADVERTISEMENT

ಶನಿವಾರ 916 ಹಾಲ್ ಮಾರ್ಕ್ ಇರುವ ಒಂದು ಗ್ರಾಂ ಚಿನ್ನಕ್ಕೆ ₹ 4,200, ಅಪರಂಜಿ ಚಿನ್ನಕ್ಕೆ ₹ 4,780 ಬೆಲೆ ಇತ್ತು.ಜನರು ಅಕ್ಷಯ ತೃತೀಯ ದಿನದಂದು ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಚಿನ್ನ ಖರೀದಿಸುವುದು ರೂಢಿ ಮಾಡಿಕೊಂಡಿದ್ದರು. ಬೆಲೆ ಗಗನಕ್ಕೇರಿದರೂ ಈ ದಿನ ಚಿನ್ನ ಕೊಳ್ಳುವುದನ್ನು ತಪ್ಪಿಸುತ್ತಿರಲಿಲ್ಲ. ಬಡವರೂ ಕನಿಷ್ಠ ಒಂದು ಮೂಗುನತ್ತಾನ್ನಾದರೂ ಖರೀದಿಸಿದರೆ, ಶ್ರೀಮಂತರು ಚೈನು, ನೆಕ್ಲೆಸ್, ಬಳೆ ಹೊಂದಿರುವ 200 ಗ್ರಾಂನ ಸೆಟ್ ಖರೀದಿಸುತ್ತಿದ್ದರು ಎಂದು ಸ್ವಾತಿ ಜ್ಯುವೆಲರ್ಸ್ ಮಾಲೀಕ ರಮೇಶ್ ಪವಾರ್ ತಿಳಿಸಿದರು.

ವ್ಯಾಪಾರಿ ಚರಣ್ ಮಾತನಾಡಿ, ‘ಗ್ರಾಹಕರು ಅರ್ಧ ಗ್ರಾಂ.ನಿಂದ ನಾಲ್ಕೈದು ತೊಲದಷ್ಟು ಚಿನ್ನ ಖರೀದಿಸುತ್ತಿದ್ದರು. ಕೆಲವರು ಸಾಲ ಮಾಡಿಯಾದರೂ ಖರೀದಿ ಮಾಡುತ್ತಿದ್ದರು. ಮಹಿಳೆಯರು ವರ್ಷಗಟ್ಟಲೆ ಹಣ ಕೂಡಿಟ್ಟು. ತಮ್ಮ ಇಷ್ಟದ ವಿನ್ಯಾಸದ ಒಡವೆ ಕೊಂಡುಕೊಳ್ಳಲಿಕ್ಕೆ ಬರುತ್ತಿದ್ದರು. ತಿಂಗಳ ಮುಂಚೆಯೇ ಆಭರಣ ಖರೀದಿಸಿ, ತಮ್ಮ ಇಷ್ಟದ ಒಡವೆ ತಯಾರಿಸಿ ಕೊಳ್ಳುತ್ತಿದ್ದರು. ಈಗ ಒಡವೆ ಬೇಕು ಎಂದು ಬರುವವರೇ ಇಲ್ಲವಾಗಿದ್ದಾರೆ’ ಎಂದರು. ‌

‘ನಾವು ಮಗಳ ಮದುವೆ ನಿಶ್ಚಯಮಾಡಿದ ನಂತರ ಲಾಕ್‌ಡೌನ್ ಆಗಿದ್ದು, ಆಭರಣಗಳನ್ನು ಖರೀದಿ ಮಾಡಲಿಕ್ಕೆ ಸಾಕಷ್ಟು ತೊಂದರೆಯಾಯಿತು. ಕೆಲವು ಕಡೆಗಳಲ್ಲಿ ಆಭರಣಗಳಿಗೆ ಆರ್ಡರ್ ತೆಗೆದುಕೊಂಡು ದುಬಾರಿ ಬೆಲೆಗೆ ಮಾಡಿಕೊಡುತ್ತಿದ್ದಾರೆ. ಆದರೆ, ಅಷ್ಟೊಂದು ದುಬಾರಿ ಬೆಲೆ ಕೊಡಲಿಕ್ಕೆ ಸಾಧ್ಯವಿಲ್ಲದ ಕಾರಣ ಮದುವೆ ಮುಂದಕ್ಕೆ ಹಾಕಿಕೊಂಡಿದ್ದೇವೆ. ಬಟ್ಟೆಗಳ ಖರೀದಿಗೂ ತೊಂದರೆಯಾಗಿದೆ’ ಎಂದು ಗ್ರಾಹಕ ಮುನಿರಾಜು ತಿಳಿಸಿದರು.

ಅಕ್ಷಯ ತೃತೀಯ ಸಂಭ್ರಮ ಈ ವರ್ಷವಿಲ್ಲ. ಚಿನ್ನ ಪ್ರಿಯರಾದ ಮಹಿಳೆಯರಿಗಂತೂ ಈ ವರ್ಷ ಯಾವುದೇ ಖರೀದಿ ಇಲ್ಲ. ವ್ಯಾಪಾರಿಗಳಿಗೂ ಮಾರಾಟ ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.