ADVERTISEMENT

‘ಅಲಯನ್ಸ್ ವಿವಿ ಘಟಿಕೋತ್ಸವ ಕಾನೂನುಬಾಹಿರ’

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2019, 14:50 IST
Last Updated 21 ಅಕ್ಟೋಬರ್ 2019, 14:50 IST
ಡಾ.ಮಧುಕರ್.ಜಿ.ಅಂಗೂರ್
ಡಾ.ಮಧುಕರ್.ಜಿ.ಅಂಗೂರ್   

ಆನೇಕಲ್: ‘ಅಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಡಾ.ಅಯ್ಯಪ್ಪ ದೊರೆ ಅವರ ಕೊಲೆಯು ದೊಡ್ಡ ಸಂಚಾಗಿದ್ದು ಅದನ್ನು ಭೇದಿಸಿ ನ್ಯಾಯ ದೊರಕಿಸಿಕೊಡಬೇಕು. ವಿಶ್ವವಿದ್ಯಾಲಯದ ಆಡಳಿತದ ಚುಕ್ಕಾಣಿ ಹಿಡಿಯಲು ಗುಂಪೊಂದು ಸಂಚು ನಡೆಸಿದ್ದು ಇದರ ಭಾಗವಾಗಿ ನನ್ನ ಕೊಲೆ ಮಾಡಲು ಸುಪಾರಿ ನೀಡಲಾಗಿತ್ತು’ ಎಂದು ಅಲಯನ್ಸ್‌ ವಿಶ್ವವಿದ್ಯಾಲಯದ ಸಂಸ್ಥಾಪಕ ಕುಲಪತಿ ಡಾ.ಮಧುಕರ್‌.ಜಿ.ಅಂಗೂರ್‌ ತಿಳಿಸಿದರು.

‘ಅಯ್ಯಪ್ಪ ದೊರೆ ಅವರು 2010ರಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದಾಗ ಮೊದಲ ಸಹ ಕುಲಪತಿಯಾಗಿದ್ದರು. ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಶ್ರಮಿಸಿದ್ದರು. ಕೆಲವರ ಪಿತೂರಿಯಿಂದ ಆಡಳಿತದಲ್ಲಿ ತೊಡಕು ಉಂಟಾಗಿತ್ತು. ನ್ಯಾಯಾಲಯಗಳಲ್ಲಿ ನಮ್ಮ ಪರವಾಗಿ ಆದೇಶಗಳು ಇತ್ತೀಚೆಗೆ ಬರುತ್ತಿವೆ. ಆರು ವಾರಗಳಲ್ಲಿ ವಿಶ್ವವಿದ್ಯಾಲಯದ ಆಡಳಿತದ ಸಂಬಂಧ ಇರುವ ವಿವಾದವನ್ನು ಇತ್ಯರ್ಥ ಪಡಿಸುವಂತೆ ಹೈಕೋರ್ಟ್‌ ಆದೇಶ ನೀಡಿದೆ. ಇದೇ ಕಾರಣಕ್ಕೆ ನನ್ನ ಕೊಲೆ ಮಾಡಲು ಸಂಚು ಮಾಡಲಾಗಿತ್ತು’ ಎಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಡಿಜಿಟಲ್‌ ಸಹಿಯನ್ನು ನಕಲು ಮಾಡಿ ವಂಚಿಸಲಾಗಿದೆ. ಈ ಸಂಬಂಧ ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಮಗ್ರ ತನಿಖೆ ನಡೆದು ನ್ಯಾಯಯುತ ತೀರ್ಪು ಹೊರಬೀಳುತ್ತಿರುವ ಕಾರಣ ಕೆಲವರು ಪಿತೂರಿ ನಡೆಸಿ ಹತ್ಯೆ ಮಾಡಲು ಸಂಚು ರೂಪಿಸಿದ್ದರು’ ಎಂದು ದೂರಿದರು.

ADVERTISEMENT

‘ನವೆಂಬರ್‌ 3ರಂದು ಘಟಿಕೋತ್ಸವ ಮಾಡಲು ವಿಶ್ವವಿದ್ಯಾಲಯ ಸಿದ್ಧತೆ ನಡೆಸಿದೆ. ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ದೂರು ನೀಡಲಾಗಿದ್ದು, ಘಟಿಕೋತ್ಸವವನ್ನು ನಿಲ್ಲಿಸಬೇಕು ಹಾಗೂ ಘಟಿಕೋತ್ಸವ ಕಾನೂನು ಬಾಹಿರ ಎಂದು ಮನವರಿಕೆ ಮಾಡಿಕೊಡಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿವಾದ ಬಗೆಹರಿಯುತ್ತಿದ್ದಂತೆ ನಿಯಮಬದ್ಧವಾಗಿ ಘಟಿಕೋತ್ಸವ ನಡೆಸಲಾಗುವುದು’ ಎಂದರು.

‘ನಾನು ಕುಲಪತಿಯಾಗಿದ್ದ ಅವಧಿಯಲ್ಲಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮವಾದ ಉದ್ಯೋಗಾವಕಾಶ ದೊರೆಯುತ್ತಿತ್ತು. ಈ ವಿವಾದಗಳಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಡಕಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.