ADVERTISEMENT

ಶರಣ ಅಂಬಿಗರ ಚೌಡಯ್ಯ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತ: ತಹಶೀಲ್ದಾರ್ ಅನಿಲ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 4:39 IST
Last Updated 22 ಜನವರಿ 2026, 4:39 IST
ದೇವನಹಳ್ಳಿಯ ತಾಲ್ಲೂಕು ಆಡಳಿತ ಸೌಧದಲ್ಲಿ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ನಡೆಯಿತು
ದೇವನಹಳ್ಳಿಯ ತಾಲ್ಲೂಕು ಆಡಳಿತ ಸೌಧದಲ್ಲಿ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ನಡೆಯಿತು   

ದೇವನಹಳ್ಳಿ: ಮೂಢನಂಬಿಕೆ, ಜಾತಿಭೇದ, ಕಂದಾಚಾರ ಮತ್ತು ಅಸಮಾನತೆ ವಿರುದ್ಧ ವಚನ ಮೂಲಕ ಧೈರ್ಯವಾಗಿ ಪ್ರಶ್ನೆ ಎತ್ತಿ ಸಮಾಜದಲ್ಲಿ ಚೇತನ ಮೂಡಿಸಿದ 12ನೇ ಶತಮಾನದ ಶರಣ ಅಂಬಿಗರ ಚೌಡಯ್ಯ ಅವರ ವಿಚಾರಧಾರೆ ಇಂದಿಗೂ ಪ್ರಸ್ತುತವಾಗಿದೆ ಎಂದು ತಹಶೀಲ್ದಾರ್ ಎಂ. ಅನಿಲ್ ಹೇಳಿದರು.

ತಾಲೂಕು ಆಡಳಿತ ಸೌಧದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಮಾತನಾಡಿದರು.

ಅಂಬಿಗರ ಚೌಡಯ್ಯ ಅವರು ಕೇವಲ ದೋಣಿ ಚಲಿಸುವ ಅಂಬಿಗನಲ್ಲ, ಭವಸಾಗರ ದಾಟಿಸುವ ತತ್ವಜ್ಞಾನಿ. ‘ಚಾಟಿ ಏಟಿನ ಶರಣ’ ಎಂದೇ ಖ್ಯಾತರಾದ ಅವರು ಅಧಿಕಾರ, ಅಹಂಕಾರ ಮತ್ತು ಅಜ್ಞಾನವನ್ನು ಪ್ರಶ್ನಿಸಿ ಸಮಾನತೆಯ ಸಮಾಜದ ಕನಸು ಕಂಡವರು ಎಂದರು.

ADVERTISEMENT

ಅನುಭವವೇ ಧರ್ಮ, ಸತ್ಯವೇ ಮಾರ್ಗ ಎಂಬ ನಿಲುವಿನೊಂದಿಗೆ ಬದುಕಿದ ಅವರು ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ ತೀಕ್ಷ್ಣವಾಗಿ ಬಯಲು ಮಾಡಿದರು ಎಂದರು.

ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಸತೀಶ್ ಮಾತನಾಡಿ, ಶ್ರಮದ ಗೌರವ, ಆತ್ಮಗೌರವ ಮತ್ತು ಮಾನವೀಯತೆಯ ಸಂದೇಶಗಳನ್ನು ನೀಡಿದ ಚೌಡಯ್ಯ ಅವರ ವಿಚಾರಗಳು ಸಮುದಾಯದ ಏಳಿಗೆಗೆ ದಿಕ್ಕು ತೋರಿಸುತ್ತವೆ ಎಂದರು.

ಗಂಗಾಮತಸ್ಥ ಬೆಸ್ತರಸಂಘದ ಅಧ್ಯಕ್ಷ ರಾಮಾಂಜಿನಪ್ಪ, ಬಸವಣ್ಣನವರ ಅನುಭವ ಮಂಟಪದ ಸಮಾನ ಭೂಮಿಕೆಯ ಚಿಂತನೆಗೆ ಚೌಡಯ್ಯ ಅವರ ಕೊಡುಗೆ ಮಹತ್ವದ್ದಾಗಿದೆ. ಲಭ್ಯವಿರುವ 171 ವಚನಗಳು ಆತ್ಮಚಿಂತನೆ, ಶಿವಭಕ್ತಿ ಮತ್ತು ಸಾಮಾಜಿಕ ನ್ಯಾಯದ ಸಂದೇಶ ನೀಡುತ್ತವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.