ಆನೇಕಲ್: ತಾಲ್ಲೂಕಿನ ಬೊಮ್ಮಸಂದ್ರ ಸರ್ಕಾರಿ ಮಾದರಿ ಶಾಲೆಯ 925 ಮಂದಿ ವಿದ್ಯಾರ್ಥಿಗಳಿಗೆ ಗೌರಮ್ಮ ತಿಮ್ಮಾರೆಡ್ಡಿ ಫೌಂಡೇಷನ್ ವತಿಯಿಂದ ಸಮವಸ್ತ್ರ ಮತ್ತು ಕಲಿಕಾ ಸಾಮಗ್ರಿಗಳನ್ನು ಸೋಮವಾರ ವಿತರಿಸಲಾಯಿತು.
ಫೌಂಡೇಷನ್‌ನ ಮುಖ್ಯಸ್ಥ ಬಿ.ಟಿ.ನಾಗರಾಜರೆಡ್ಡಿ, ಗೌರಮ್ಮ ತಿಮ್ಮಾರೆಡ್ಡಿ ಫೌಂಡೇಷನ್ ವತಿಯಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ನೆರವು ನೀಡಲಾಗಿದೆ. ಬೊಮ್ಮಸಂದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ 925 ವಿದ್ಯಾರ್ಥಿಗಳಿಗೆ ಪರಿಕರಗಳ ಕಿಟ್ ನೀಡಲಾಗಿದೆ. ಕಿಟ್‌ನಲ್ಲಿ ಎರಡು ಜೊತೆ ಸಮವಸ್ತ್ರ, ಎರಡು ಜೊತೆ ಶೂಸಾಕ್ಸ್, ವಿದ್ಯಾರ್ಥಿಗಳ ಅಧ್ಯಯನಕ್ಕೆ ಅವಶ್ಯವಿರುವ ನೋಟ್‌ಬುಕ್ ಮತ್ತು ಲೇಖನ ಸಾಮಗ್ರಿ ವಿತರಿಸಲಾಗಿದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಸಿಗುವ ಅವಕಾಶ ಮತ್ತು ಸೌಲಭ್ಯ ಸದುಪಯೋಗ ಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕಾದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಬೊಮ್ಮಸಂದ್ರ ಸರ್ಕಾರಿ ಶಾಲೆಯು ನಮ್ಮೂರಿನ ಶಾಲೆಯಾಗಿರುವುದರಿಂದ ಶಾಲೆಯ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ, ಶಾಲೆಗೆ ಭದ್ರತಾ ಸಿಬ್ಬಂದಿ ನೇಮಕ, ಸ್ಮಾರ್ಟ್ ತರಗತಿ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಲಾಗಿದೆ. ರಾಜ್ಯಸಭೆ ಮಾಜಿ ಸದಸ್ಯ ಶಾಲೆ ಕೊಠಡಿ ನಿರ್ಮಾಣಕ್ಕೆ ₹11 ಲಕ್ಷ ನೆರವು ನೀಡಲು ಮುಂದೆ ಬಂದಿದ್ದಾರೆ. ಇವರ ನೆರವು ಪಡೆದು ಶಾಲೆಯಲ್ಲಿ ಮೂರು ಕೊಠಡಿ ನಿರ್ಮಿಸಲಾಗುವುದು. ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಕಂಪ್ಯೂಟರ್, ಪ್ರಯೋಗಾಲಯ ಸೇರಿದಂತೆ ಎಲ್ಲಾ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರಿರುತ್ತಾರೆ. ಪೋಷಕರು ತಾತ್ಸಾರ ಮನೋಭಾವನೆಯನ್ನು ಬಿಟ್ಟು ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಬೇಕು ಎಂದರು.
ವಕೀಲ ರಾಮಸ್ವಾಮಿ, ಸ್ವಾಮಿ ವಿವೇಕಾನಂದ ಶಾಲೆಯ ವೆಂಕಟೇಶ್ ರೆಡ್ಡಿ, ಮುಖಂಡರಾದ ಪ್ರಕಾಶ್, ಶಿವಪ್ಪ, ಸಿಆರ್‌ಪಿ ವಾಸುದೇವಚಾರ್, ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುನಾಥ್, ಲೋಕೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.