ADVERTISEMENT

ಸುಬ್ರಮಣ್ಯೇಶ್ವರಗೆ ನವರಾತ್ರಿ ಅಲಂಕಾರ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2023, 6:13 IST
Last Updated 20 ಅಕ್ಟೋಬರ್ 2023, 6:13 IST
ಆನೇಕಲ್‌ನ ಬರಗೂರು ಪೇಟೆಯ ಶ್ರೀವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯೇಶ್ವರ ಸ್ವಾಮಿಗೆ ವಿಜಯದಶಮಿ ಪ್ರಯುಕ್ತ ಭೂವರಾಹಸ್ವಾಮಿ ಅಲಂಕಾರ ಮಾಡಲಾಗಿತ್ತು
ಆನೇಕಲ್‌ನ ಬರಗೂರು ಪೇಟೆಯ ಶ್ರೀವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯೇಶ್ವರ ಸ್ವಾಮಿಗೆ ವಿಜಯದಶಮಿ ಪ್ರಯುಕ್ತ ಭೂವರಾಹಸ್ವಾಮಿ ಅಲಂಕಾರ ಮಾಡಲಾಗಿತ್ತು   

ಆನೇಕಲ್ : ಬರಗೂರು ಪೇಟೆಯ ಶ್ರೀವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ವಿಜಯದಶಮಿ ಶೂರಸಂಹಾರ ಉತ್ಸವ ಭಕ್ತಿಯಿಂದ ನಡೆಯುತ್ತಿದೆ.

ದೇವಾಲಯದ ಪ್ರಮುಖ ಆಕರ್ಷಣೆ ದೇವರ ಅಲಂಕಾರವಾಗಿದೆ. ವಿನೂತನ ಮತ್ತು ವಿಶೇಷ ಅಲಂಕಾರಗಳು ಭಕ್ತರ ಕಣ್ಮನ ಸೆಳೆಯುತ್ತಿದೆ. ಪ್ರತಿನಿತ್ಯ ನೂರಾರು ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ.

ಪಟ್ಟಣದ ಶ್ರೀವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯೇಶ್ವರ ಸ್ವಾಮಿಗೆ ಶರನ್ನವರಾತ್ರಿಯ ಪ್ರಯುಕ್ತ ಒಂಭತ್ತು ದಿನಗಳು ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಸುಬ್ರಮಣ್ಯೇಶ್ವರ ಸ್ವಾಮಿಗೆ ಕುಬೇಲಕ್ಷ್ಮೀ ಅಲಂಕಾರ, ಹರಿಹರೇಶ್ವರ ಸ್ವಾಮಿ ಅಲಂಕಾರ, ಭೂವರಾಹ ಸ್ವಾಮಿ ಅಲಂಕಾರ, ವಾಮನ ಬಲೀಂದ್ರ ಅಲಂಕಾರ, ಷಣ್ಮುಖ ಸ್ವಾಮಿ ಅಲಂಕಾರ ಮಾಡಲಾಗಿದೆ.

ADVERTISEMENT

ಶುಕ್ರವಾರ ಸುದರ್ಶನ ಅಲಂಕಾರ, ಶನಿವಾರ ಪಂಚಮುಖಿ ಆಂಜನೇಯಸ್ವಾಮಿ ಅಲಂಕಾರ, ಭಾನುವಾರ ನಟರಾಜ ಅಲಂಕಾರ, ಸೋಮವಾರ ಶರಬೇಶ್ವರ ಸ್ವಾಮಿ ಅಲಂಕಾರ ಆಯೋಜಿಸಲಾಗಿದೆ. ಮಂಗಳವಾರ ವಿಜಯದಶಮಿಯ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ.

ದೇವಾಲಯದಲ್ಲಿ ನವರಾತ್ರಿಯ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾಗೇಶ್ ಮತ್ತು ತಂಡದವರು ಭಕ್ತಿಗೀತೆಗಳ ಗಾಯನ, ಡೋಲು ವಿದ್ವಾನ್‌ ಮಂಜುನಾಥ ಮತ್ತು ಎಸ್‌.ಧನಂಜಯ ತಂಡದಿಂದ ನಾದಸ್ವರ ಕಚೇರಿ, ಶಾಸ್ತ್ರೀಯ ಸಂಗೀತ, ಲಲಿತಾ ಸಹಸ್ರನಾಮ ಕಾರ್ಯಕ್ರಮಗಳು ನಡೆದಿದೆ. ಶುಕ್ರವಾರ ಹರಿಕಥೆ ಆಯೋಜಿಸಲಾಗಿದೆ.

ದೇವಾಲಯ ಸಮಿತಿಯ ನಂಜುಂಡೇಶ್ವರ ಅವರು ಮಾತನಾಡಿ, ಶ್ರೀವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯೇಶ್ವರ ಸ್ವಾಮಿಯ ಅಲಂಕಾರಗಳಿಂದ ಹೆಚ್ಚಿನ ಪ್ರಸಿದ್ದಿ ಪಡೆದಿದೆ. ಹಲವು ವಿನೂತನ ಅಲಂಕಾರಗಳು ಭಕ್ತರನ್ನು ಆಕರ್ಷಿಸುತ್ತಿದೆ. ಪ್ರತಿ ವರ್ಷವು ದೇವಾಲಯದಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುವುದು. ಆಯುಧಪೂಜೆಯ ದಿನ ಶರಬೇಶ್ವರ ಸ್ವಾಮಿ ಅಲಂಕಾರವಿದ್ದು ಸ್ವಾಮಿಗೆ ವಿನೂತನವಾಗಿ ಅಲಂಕಾರ ಮಾಡಲಾಗುವುದು ಎಂದರು.

ಹರಿಹರೇಶ್ವರ ಸ್ವಾಮಿ ಅಲಂಕಾರದಲ್ಲಿ ಸುಬ್ರಮಣ್ಯೇಶ್ವರ
ವಾಮನ ಬಲೀಂದ್ರ ಅಲಂಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.