ಆನೇಕಲ್: ತಾಲ್ಲೂಕಿನ ಹಳೇ ಚಂದಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ–44ರ ಕಾಲುವೆ ಮತ್ತು ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸಂಚಾರ ನಿಧಾನಗತಿಯಲ್ಲಿದ್ದು, ನಿತ್ಯ ಕಿ.ಮೀ ಗಟ್ಟಲೇ ವಾಹನ ದಟ್ಟಣೆ ಇರುತ್ತದೆ. ಕಾಮಗಾರಿ ನಡೆಯುವ ಒಂದು ಕಿ.ಮೀ ಸಂಚಾರಕ್ಕೆ ಎರಡರಿಂದ ಮೂರು ಗಂಟೆ ಸಮಯ ಹಿಡಿಯುತ್ತಿದೆ.
ರಾಷ್ಟ್ರೀಯ ಹೆದ್ದಾರಿ–44 ಬೆಂಗಳೂರಿನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುತ್ತದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಹಳೇಚಂದಾಪುರದಲ್ಲಿ ಮಳೆ ನೀರು ಹರಿಯಲು ಕಾಲುವೆ ನಿರ್ಮಾಣ ಜೊತೆಗೆ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಕಳೆದ 10 ತಿಂಗಳಿನಿಂದ ಕಾಮಗಾರಿ ಪ್ರಗತಿಯಲ್ಲಿದೆ. ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಕಿರಿದಾದ ರಸ್ತೆಯಲ್ಲಿ ವಾಹನಗಳು ಸುಗಮವಾಗಿ ಸಂಚರಿಸಲು ಆಗುತ್ತಿಲ್ಲ. ಅತ್ತಿಬೆಲೆ- ಚಂದಾಪುರ- ಹೆಬ್ಬಗೋಡಿ ರಾಷ್ಟ್ರೀಯ ಹೆದ್ದಾರಿ ರಸ್ತೆ, ಸರ್ವೀಸ್ ರಸ್ತೆಯ ವಾಹನಗಳಿಂದ ತುಂಬಿರುತ್ತದೆ.
ಹೆದ್ದಾರಿ ಕಾಮಗಾರಿಗಾಗಿ ತೋಡಲಾಗಿದ್ದ ಬೃಹತ್ ಗುಂಡಿಗೆ ಕಾರೊಂದು ಶುಕ್ರವಾರ ಬಿದ್ದಿತ್ತು. ಸುರಕ್ಷಿತ ಕ್ರಮ ಕೈಗೊಳ್ಳದ ಹಾಗೂ ಅವೈಜ್ಞಾನಿಕ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದರು.
ಹೆದ್ದಾರಿ ಪ್ರಾಧಿಕಾರವು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಕಾಮಗಾರಿ ನಡೆಸುತ್ತಿದೆ. ಕಾಮಗಾರಿ ಸ್ಥಳಗಳಲ್ಲಿ ಸೂಚನಾ ಫಲಕ ಅಳವಡಿಸಿಲ್ಲ. ಬ್ಯಾರಿಕೇಡ್ ಹಾಕದ ಕಾರಣ ಅವಘಡ ಸಂಭವಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾಮಮಗಾರಿ ನಡೆಯುತ್ತಿರುವ ಪ್ರದೇಶ ಕೆರೆಯಂತಾಗಿದೆ. ಈ ಮಧ್ಯೆ ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಬೈಕ್ ಸವಾರರು ತಂತಿ ಮೇಲಿನ ನಡಿಗೆಯಂತೆ ಸಂಚಾರಿಸಬೇಕಿದೆ. ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ದೊಡ್ಡದಾಗಿ ಹಳ್ಳ ತೋಡಲಾಗಿದೆ. ಇದರಿಂದ ಒಂದು ವಾಹನ ಮಾತ್ರ ಸಾಗಬಹುದಾಗಿದೆ. ಮಳೆಯಿಂದಾಗಿ ತ್ಯಾಜ್ಯ ನೀರು ಸಹ ಸರ್ವೀಸ್ ರಸ್ತೆಯಲ್ಲಿ ಹರಿಯುತ್ತಿದ್ದು, ದುರ್ನಾತ ಬೀರುತ್ತಿದೆ.
ಮಳೆಯಿಂದ ಸರ್ವೀಸ್ ರಸ್ತೆ ಕೆಸರು ಗದ್ದೆಯಾಗಿದೆ. ದ್ವಿಚಕ್ರ ವಾಹನಗಳು ಜಾರಿ ಬೀಳುತ್ತಿವೆ. ನೆರಳೂರು, ಬಳಗಾರನಹಳ್ಳಿ, ಗುಡ್ಡಹಟ್ಟಿ ಗೇಟ್ ಸೇರಿದಂತೆ ಹಲವೆಡೆ ಹೆದ್ದಾರಿ ಬದಿಯೇ ಕಸ ಸುರಿಯಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕಾಮಗಾರಿಗೆ ವೇಗ ನೀಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಚಂದಾಪುರ, ಅತ್ತಿಬೆಲೆಗಳಲ್ಲಿ ಹೆಚ್ಚಿನ ವಾಹನ ದಟ್ಟಣೆ ಉಂಟಾಗುತ್ತಿರುವುದರಿಂದ ವಾಹನಗಳ ನಿರ್ವಹಣೆಗೆ ಸಂಚಾರ ಪೊಲೀಸರು ಕ್ರಮ ವಹಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಕಾಲೇಜಿಗೆ ಹೋಗಬೇಕಾದಾಗ ವಾರದಲ್ಲಿ ಮೂರ್ನಾಲ್ಕು ದಿನ ಈ ರಸ್ತೆಯಲ್ಲಿ ವಾಹನ ದಟ್ಟಣೆಯಲ್ಲಿ ಸಿಲುಕುತ್ತಿದ್ದೇವೆ. ದೂರವಾದರೂ ಪರವಾಗಿಲ್ಲ ಎಂದು ಆನೇಕಲ್ ಜಿಗಣಿ ಜಯದೇವ ಆಸ್ಪತ್ರೆಯ ಮೂಲಕ ಬೆಂಗಳೂರಿನ ಕಾಲೇಜಿಗೆ ತೆರಳುತ್ತಿದ್ದೇವೆಮಾನಸ ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.