
ಆನೇಕಲ್: ಆನೇಕಲ್-ಚಂದಾಪುರ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ರಾತ್ರಿ ವೇಳೆ ನಡೆಸುತ್ತಿರುವ ಹಾಗೂ ಗುಣಮಟ್ಟ ಕಾಯ್ದುಕೊಳ್ಳದ ಕಾರಣ ಗುತ್ತಿಗೆದಾರರು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಶಾಸಕ ಬಿ.ಶಿವಣ್ಣ ಆಕ್ರೋಶ ತರಾಟೆಗೆ ತೆಗೆದುಕೊಂಡರು. ಗುಣಮಟ್ಟದ ರಸ್ತೆ ನಿರ್ಮಾಣ ಮಾಡದಿದ್ದರೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗುರುವಾರ ರಾತ್ರಿ 10ರ ಸುಮಾರಿಗೆ ಆನೇಕಲ್-ಚಂದಾಪುರ ರಸ್ತೆಯ ಡಾಂಬರೀಕರಣ ಮಾಡಲಾಗುತ್ತಿತ್ತು. ಸ್ಥಳಕ್ಕೆ ಶಾಸಕ ಬಿ.ಶಿವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿ, ಗುಣಮಟ್ಟವನ್ನು ಕಾಯ್ದುಕೊಳ್ಳದಿದ್ದರೆ ಮುಲಾಜಿಲ್ಲದೇ ಕ್ರಮ ವಹಿಸಲಾಗುವುದು. ಹಲವು ದಿನಗಳಿಂದ ತಾಂತ್ರಿಕ ಕಾರಣಗಳಿಂದ ಡಾಂಬರೀಕರಣ ಕಾರ್ಯ ತಡವಾಗಿತ್ತು. ಈಗ ಕಾಮಗಾರಿಯನ್ನು ಆರಂಭ ಮಾಡಲಾಗಿದೆ. ರಸ್ತೆ ಪದರದಲ್ಲಿ ಗುಣಮಟ್ಟದ ಕೊರತೆ ಕಂಡು ಬರುತ್ತಿದೆ. ಒಂದೇ ಪದರ ಡಾಂಬರೀಕರಣ ಮಾಡುತ್ತಿರುವುದು ಸರಿಯಲ್ಲ. ಗುತ್ತಿಗೆದಾರರು ಈ ಬಗ್ಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಡಾಂಬರೀಕರಣ ಕಾರ್ಯ ಆರಂಭ ಮಾಡಲಾಗಿದ್ದು, ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಸೂಚಿಸಿದರು.
ಯಾರಿಗೂ ಗೊತ್ತಾಗುವುದಿಲ್ಲವೆಂದು ರಾತ್ರಿ ಸಮಯದಲ್ಲಿ ಕಳಪೆ ಕಾಮಗಾರಿ ಮಾಡುವುದು ನಿಲ್ಲಿಸಬೇಕು. ಆನೇಕಲ್-ಚಂದಾಪುರ ರಸ್ತೆಯು ದ್ವಿಪಥ ಆಗಿರುವುದರಿಂದ ಮತ್ತೊಂದು ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸುತ್ತಾರೆ. ಬೆಳಗ್ಗೆ ಸಮಯದಲ್ಲಿ ಡಾಂಬರೀಕರಣ ಮಾಡುವುದಿಂದ ಸಾರ್ವಜನಿಕರಿಗೆ ರಸ್ತೆಯ ಗುಣಮಟ್ಟ ತಿಳಿಯಲಿದೆ ಎಂದರು.
ಗುಣಮಟ್ಟ ಕಾಯ್ದುಕೊಳ್ಳಿ
ಜಾಗ ಖಾಲಿ ಮಾಡಿ ಗುಣಮಟ್ಟದ ಕಾಮಗಾರಿಯಿಂದ ಮಾಡಿ ಇಲ್ಲವಾದರೇ ಜಾಗ ಖಾಲಿ ಮಾಡಿ. ಚಂದಾಪುರ ಆನೇಕಲ್‌ನ ಪ್ರಮುಖ ರಸ್ತೆಯಾಗಿದೆ ಈ ರಸ್ತೆಯನ್ನು ಸುಸಜ್ಜಿತವಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಗುತ್ತಿಗೆದಾರರು ನಿರ್ಲಕ್ಷ್ಯ ಮಾಡದೇ ಕಾಮಗಾರಿ ನಡೆಸಬೇಕು. ರಸ್ತೆ ಕಾಮಗಾರಿ ಮುಗಿಯುವವರೆಗೂ ಲೋಕೋಪಯೋಗಿ ಇಲಾಖೆಯ ಎಇಇ ಜೆಇಇ ಸ್ಥಳದಲ್ಲಿಯೇ ಗುಣಮಟ್ಟ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಶಾಸಕ ಬಿ.ಶಿವಣ್ಣ ನಿರ್ದೇಶನ ನೀಡಿದರು. ಚಂದಾಪುರ ವೃತ್ತದಿಂದಲೇ ಡಾಂಬರೀಕರಣ ಕಾರ್ಯ ಪ್ರಾರಂಭಿಸಬೇಕು. ಗುಣಮಟ್ಟ ಕಾಯ್ದುಕೊಂಡಿಲ್ಲವೆಂದರೆ ದೂರು ನೀಡಲಾಗುವುದು. ಆನೇಕಲ್-ಚಂದಾಪುರ ಮುಖ್ಯ ರಸ್ತೆಯು ಯುಜಿಡಿ ಕಾಮಗಾರಿಯಿಂದ ತಡವಾಯಿತು. ಈಗಾಗಲೇ ಶೇ.70ರಷ್ಟು ಕಾಮಗಾರಿ ಮುಗಿದಿದ್ದು ಉಳಿದ ದ್ವಿಪಥ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.