
ಆನೇಕಲ್: ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಪಟ್ಟಣದ ಬನ್ನೇರುಘಟ್ಟ ರಸ್ತೆಯ ಚಿನ್ನಪ್ಪ ಸ್ವಾಮಿ ದೇವಾಲಯದಲ್ಲಿ ಕಡಲೆಕಾಯಿ ಪರಿಷೆ ನಡೆಯಿತು. ಆದರೆ ಪ್ರತಿ ವರ್ಷಕ್ಕೆ ಹೋಲಿಸಿಕೊಂಡರೆ ಈ ವರ್ಷ ಕಡಲೆಕಾಯಿ ಅಂಗಡಿಗಳು ಸಂಖ್ಯೆ ಇಳಿಮುಖವಾಗಿತ್ತು.
ಪ್ರತಿ ವರ್ಷ 15 ಕ್ಕೂ ಹೆಚ್ಚು ಕಡಲೆಕಾಯಿ ಅಂಗಡಿಗಳು ಪರಿಷೆಯಲ್ಲಿರುತ್ತಿದ್ದವು. ಆದರೆ ಈ ವರ್ಷ ಐದಾರು ಅಂಗಡಿಗಳೂ ಮಾತ್ರ ಕಂಡು ಬಂದವು. ಬಹುತೇಕ ಅಂಗಡಿಗಳು ಬಸವನಗುಡಿಯ ಜಾತ್ರೆಗೆ ತೆರಳಿದ್ದರಿಂದ ಅಂಗಡಿಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಕಡಲೆಕಾಯಿ ಅಂಗಡಿಯ ಶ್ರೀನಿವಾಸ್ ತಿಳಿಸಿದರು.
ಚಿನ್ನಪ್ಪಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೂ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಸಂಜೆಯ ವೇಳೆಗೆ ಜಾತ್ರೆಯಲ್ಲಿ ಜನಜಂಗುಳಿ ಜಮಾಯಿಸಿತ್ತು.
ಜಾತ್ರೆಯ ಪ್ರಯುಕ್ತ ಚಿನ್ನಪ್ಪಸ್ವಾಮಿ ಕಡಲೆಕಾಯಿಯಲ್ಲಿ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಭಕ್ತರು ಕಡಲೆಕಾಯಿ ಕೊಂಡು ಚಿನ್ನಪ್ಪ ದೇವಾಲಯದ ಮೇಲೆ ಎಸೆದು ಭಕ್ತಿಯನ್ನು ಸಮರ್ಪಿಸಿದರು. ಭಕ್ತರು ಪ್ರಸಾದವೆಂಬಂತೆ ಕಡಲೆಕಾಯಿಗಳನ್ನು ಆಯ್ದು ತಿನ್ನುತ್ತಿದ್ದರು. ಪುಟಾಣಿ ಮಕ್ಕಳು ಕಡಲೆ ಕಾಯಿಯನ್ನು ಆಯ್ದುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಡಲೆಕಾಯಿ ಪರಿಷೆಯ ಪ್ರಯುಕ್ತ ದೇವಾಲಯಕ್ಕೆ ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಸಂಜೆ ವಿದ್ಯುತ್ ದೀಪಗಳಿಂದ ದೇವಾಲಯ ಕಂಗೊಳಿಸುತ್ತಿತ್ತು.
ಕಡಲೆಕಾಯಿ ಪ್ರಿಯ ಚಿನ್ನಪಸ್ವಾಮಿ: ಅವಧೂತರಾಗಿದ್ದ ಚಿನ್ನಪ್ಪ ಸ್ವಾಮಿ ಅವರು ಕಡಲೆಕಾಯಿ ಪ್ರಿಯರಾಗಿದ್ದರು. ಹಾಗಾಗಿ ಕಡೆ ಕಾರ್ತೀಕ ಸೋಮವಾರದಂದು ಇಲ್ಲಿ ಕಡಲೆಕಾಯಿ ಪರಿಷೆ ನಡೆಸಲಾಗುತ್ತಿದೆ. ಭಕ್ತರು ಕಡಲೆಕಾಯಿ ಕೊಂಡು ಚಿನ್ನಪ್ಪಸ್ವಾಮಿ ಅರ್ಪಿಸುವುದು ಇಲ್ಲಿಯ ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.