ADVERTISEMENT

ಆನೇಕಲ್ ಕಿತ್ತಗಾನಹಳ್ಳಿ ಶ್ರೀನಿವಾಸ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 2:15 IST
Last Updated 23 ಫೆಬ್ರುವರಿ 2026, 2:15 IST
ಆನೇಕಲ್ ತಾಲ್ಲೂಕಿನ ಕಿತ್ತಗಾನಹಳ್ಳಿಯಲ್ಲಿ ಶ್ರೀನಿವಾಸ ದೇವಾಲಯದಲ್ಲಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಆನೇಕಲ್ ತಾಲ್ಲೂಕಿನ ಕಿತ್ತಗಾನಹಳ್ಳಿಯಲ್ಲಿ ಶ್ರೀನಿವಾಸ ದೇವಾಲಯದಲ್ಲಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು   

ಆನೇಕಲ್: ಕಿತ್ತಗಾನಹಳ್ಳಿಯಲ್ಲಿ ಶ್ರೀನಿವಾಸ ದೇವಾಲಯದ ರಥೋತ್ಸವ ಭಾನುವಾರ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಈ ಧಾರ್ಮಿಕ ಸಂಭ್ರಮದಲ್ಲಿ ಪಾಲ್ಗೊಂಡು ದರ್ಶನ ಪಡೆದರು.

ರಥದಲ್ಲಿ ಶ್ರೀನಿವಾಸ ಉತ್ಸವ ಮೂರ್ತಿಯನ್ನು ಕುಳ್ಳಿರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ಗೋವಿಂದ ಘೋಷಣೆ ಕೂಗಿ ರಥವನ್ನು ಸ್ವಾಗತಿಸಿದರು. ದವನ ಚುಚ್ಚಿದ ಬಾಳೆ ಹಣ್ಣು ರಥದತ್ತ ಎಸೆಯುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.

ಬಿರುಬಿಸಿಲು ಲೆಕ್ಕಿಸದೆ ಭಕ್ತರು ರಥದ ಸುತ್ತ ಉರುಳು ಸೇವೆ ಸಲ್ಲಿಸಿದರು. ರಥವು ದೇವಾಲಯದ ಪ್ರದಕ್ಷಿಣೆ ಹಾಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಥ ಸಾಗುವ ಮಾರ್ಗದಲ್ಲಿ ಮನೆಗಳ ಮುಂದೆ ಭಕ್ತರು ಪೂಜೆ ಸಲ್ಲಿಸಿ ಸ್ವಾಗತಿಸಿದರು.

ADVERTISEMENT

ಜಾತ್ರಾ ಮಹೋತ್ಸವ ಅಂಗವಾಗಿ ಮೂರು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಫೆ.20ರಂದು ಶ್ರೀವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯಸ್ವಾಮಿ ಕಲ್ಯಾಣೋತ್ಸವ, ಫೆ.21ರಂದು ನಾಗಾರಾಧನೆ, ಸುಬ್ರಮಣ್ಯಸ್ವಾಮಿ ಮಯೂರ ವಾಹನೋತ್ಸವ ಮತ್ತು ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಫೆ.23ರಂದು ವಸಂತ ಮಾಧವ ಪೂಜೆ, ವಸಂತೋತ್ಸವ ಮತ್ತು ಸಂಜೆ ಶೇಷವಾಹನೋತ್ಸವ ನಡೆಯಲಿದೆ.

ಬೆಳಗ್ಗೆಯಿಂದ ಸಂಜೆವರೆಗೆ ಅನ್ನದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಗ್ರಾಮದ ಹಲವೆಡೆ ಅರವಂಟಿಕೆ ಸ್ಥಾಪಿಸಿ ಭಕ್ತರಿಗೆ ನೀರು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿ ಬಿಸಿಲಿನ ಬೇಗೆ ತಣಿಸಿದರು.

ಆನೇಕಲ್ : ತಾಲ್ಲೂಕಿನ ಕಿತ್ತಗಾನಹಳ್ಳಿಯಲ್ಲಿ ಭೂನೀಳಾ ಸಮೇತ ಶ್ರೀನಿವಾಸ ದೇವಾಲಯದಲ್ಲಿ ಸ್ವಾಮಿಯ ಬ್ರಹ್ಮರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಶ್ರೀನಿವಾಸ ದೇವರ ಬ್ರಹ್ಮರಥೋತ್ಸವಕ್ಕೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಸಾಕ್ಷಿಯಾದರು. ಬಿರು ಬಿಸಿಲಿನಲ್ಲಿಯೂ ಭಕ್ತರು ರಥದ ಸುತ್ತಲೂ ಉರುಳು ಸೇವೆ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಜಾತ್ರೆಯ ಪ್ರಯುಕ್ತ ಮೂರು ದಿನಗಳಿಂದಲೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಅಲಂಕೃತ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಕುಳ್ಳರಿಸಲಾಯಿತು. ರಥದ ಸುತ್ತಲೂ ಉತ್ಸವ ಮೂರ್ತಿಯನ್ನು ಮೂರು ಪ್ರದಕ್ಷಿಣೆ ಹಾಕಿಸಿ ರಥದಲ್ಲಿ ಕುಳ್ಳರಿಸುತ್ತಿದ್ದಂತೆ ಭಕ್ತರು ಗೋವಿಂದ ಗೋವಿಂದ ಎಂದು ಹೇಳುವ ಮೂಲಕ ರಥವನ್ನು ಸ್ವಾಗತಿಸಿದರು. ದವನ ಚುಚ್ಚಿದ ಬಾಳೆ ಹಣ್ಣನ್ನು ತೇರಿನತ್ತ ಎಸೆಯುವ ಮೂಲಕ ಭಕ್ತರು ಸಂಭ್ರಮಿಸಿದರು.

ರಥೋತ್ಸವದ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುತ್ತಮುತ್ತಲ ಗ್ರಾಮಗಳ ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಬೆಳಗಿನಿಂದ ಸಂಜೆಯವರೆಗೂ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವದ ಪ್ರಯುಕ್ತ ಹೆಬ್ಬಗೋಡಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಮನೆ ಮನೆಗಳ ಬಳಿ ರಥವು ಆಗಮಿಸುತ್ತಿದ್ದಂತೆ ಭಕ್ತರು ಪೂಜೆ ಸಲ್ಲಿಸಿದರು.

ರಥವು ದೇವಾಲಯದ ಪ್ರದಕ್ಷಿಣೆ ನಡೆಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿತು. ಉರಿಬಿಸಿಲನ್ನು ಲೆಕ್ಕಿಸದೇ ನೂರಾರು ಮಂದಿ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವದ ಅಂಗವಾಗಿ ಭಕ್ತರು ಉರಿಬಿಸಿಲನ್ನು ಲೆಕ್ಕಿಸದೇ ಉರುಳು ಸೇವೆ ಮಾಡುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಶ್ರೀನಿವಾಸ ದೇವರ ಬ್ರಹ್ಮರಥೋತ್ಸವದಲ್ಲಿ ಉರುಳು ಸೇವೆ ಮಾಡುವುದರಿಂದ ಒಳ್ಳೆಯದ್ದಾಗುತ್ತದೆ ಎಂಬುದು ಭಕ್ತರ ಅಭಿಪ್ರಾಯವಾಗಿದೆ. ಗ್ರಾಮದ ಹಲವೆಡೆ ಅರವಂಟಿಕೆಗಳನ್ನು ಸ್ಥಾಪಿಸಿ ಬಂದ ಭಕ್ತರಿಗೆ ನೀರು ಮಜ್ಜಿಗೆ, ಪಾನಕ, ಕೋಸಂಬರಿ ನೀಡಿ ಬಿಸಿಲಿನ ಬೇಗೆಯನ್ನು ತಣಿಸಿದರು.

ಬ್ರಹ್ಮರಥೋತ್ಸವದ ಪ್ರಯುಕ್ತ ಫೆ.20 ರಂದು ಶ್ರೀವಲ್ಲಿ ದೇವಸೇನಾ ಸಮೇತ ಸುಬ್ರಮಣ್ಯ ಸ್ವಾಮಿಯ ಕಲ್ಯಾಣೋತ್ಸವ, ಫೆ.21ರಂದು ನಾಗಾರಾಧನೆ, ಸುಬ್ರಮಣ್ಯಸ್ವಾಮಿ ಮಯೂರ ವಾಹನೋತ್ಸವ, ಸಂಜೆ ಭೂನೀಳಾ ಸಮೇತ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು. ಫೆ.23ರಂದು ವಸಂತ ಮಾಧನ ಪೂಜೆ ವಸಂತೋತ್ಸವ, ಸಂಜೆ ಶೇಷವಾಹನೋತ್ಸವ ನಡೆಯಲಿದೆ. ಸೂರ್ಯನಾರಾಯಣ ದೀಕ್ಷಿತ್‌ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.