ADVERTISEMENT

ಹೊಸ ವರ್ಷಾಚರಣೆ: ಬನ್ನೇರುಘಟ್ಟದಲ್ಲಿ ಪ್ರವಾಸಿಗರ ದಂಡು

​ಪ್ರಜಾವಾಣಿ ವಾರ್ತೆ
Published 2 ಜನವರಿ 2025, 4:17 IST
Last Updated 2 ಜನವರಿ 2025, 4:17 IST
ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹೊಸ ವರ್ಷದ ಮೊದಲ ದಿನದಂದು ಕಂಡು ಬಂದ ಪ್ರವಾಸಿಗರ ದಂಡು
ಆನೇಕಲ್‌ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹೊಸ ವರ್ಷದ ಮೊದಲ ದಿನದಂದು ಕಂಡು ಬಂದ ಪ್ರವಾಸಿಗರ ದಂಡು   

ಆನೇಕಲ್: ಹೊಸ ವರ್ಷದ ಮೊದಲ ದಿನವಾದ ಬುಧವಾರ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಪ್ರವಾಸಿಗರು ದಂಡು ಹರಿದು ಬಂದಿತ್ತು.

ಬೆಂಗಳೂರು ನಗರ ಸೇರಿದಂತೆ ವಿವಿಧ ಕಡೆಯಿಂದ ಪ್ರವಾಸಿಗರು ಬಂದಿದ್ದರು. ಉತ್ತರ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಚಿರತೆ, ನೀರಾನೆ, ಆನೆಗಳ ಬಳಿ ಫೋಟೊ ಕ್ಲಿಕ್ಕಿಸಿ ಪ್ರವಾಸಿಗರು ಸಂಭ್ರಮಿಸಿದರು. 

ಸಫಾರಿ, ಚಿಟ್ಟೆ ಪಾರ್ಕ್‌ ಸೇರಿದಂತೆ ಉದ್ಯಾನದ ವಿವಿಧ ತಾಣಗಳು ಜನರಿಂದ ತುಂಬಿದ್ದವು. ಸಫಾರಿ ವಾಹನಗಳು ಮತ್ತು ಉದ್ಯಾನ ವೀಕ್ಷಿಸಲು ಬಳಸುವ ವಿದ್ಯುತ್‌ ಚಾಲಿನ ವಾಹನಗಳು ಬಿಟ್ಟು ಬಿಡದೆ ಓಡಾಡಿದವು.  

ADVERTISEMENT

ಟಿಕೆಟ್‌ ಕೌಂಟರ್‌ ಬಳಿ ಟಿಕೆಟ್‌ ಪಡೆಯಲು ಪ್ರವಾಸಿಗರು ಸರತಿ ಸಾಲಿನಲ್ಲಿ ನಿಂತಿದ್ದರು. ಗಂಟೆಗಟ್ಟಲೆ ಕಾದು ಟಿಕೆಟ್‌ ಪಡೆದು ಉದ್ಯಾನ  ವೀಕ್ಷಿಸಿದರು. ಸಂಜೆ 4 ಗಂಟೆಯಾದರೂ ಟಿಕೆಟ್‌ ಕೌಂಟರ್‌ನಲ್ಲಿ ಪ್ರವಾಸಿಗರ ಸಾಲು ಕರಗಿರಲಿಲ್ಲ.  

ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆಯಿಂದಾಗಿ ಬನ್ನೇರುಘಟ್ಟ ವೃತ್ತದಲ್ಲಿ ಸಂಪೂರ್ಣ ವಾಹನ ದಟ್ಟಣೆ ಉಂಟಾಗಿತ್ತು. ಸಂಚಾರ ವ್ಯವಸ್ಥೆ ನಿಯಂತ್ರಿಸಲು ಪೊಲೀಸರು ಪರದಾಡುವಂತಾಯಿತು.

ಅತ್ತಿಂದಿತ್ತ ಓಡಾಡುತ್ತಿದ್ದ ಉದ್ಯಾನದ ಆನೆಗಳು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳಾಗಿದ್ದವು. ಆನೆಗಳ ಫೋಟೋ ತೆಗೆಯಲು ಪ್ರವಾಸಿಗರು ಮುಗಿಬಿದ್ದಿದ್ದರು. ನೀರಾನೆಗಳು ನೀರಿನಿಂದ ಮೇಲೆ ಏಳಲಿಲ್ಲ. 

ಬನ್ನೇರುಘಟ್ಟ ಜೈವಿಕ ಉದ್ಯಾನದ ಟಿಕೆಟ್‌ ಕೌಂಟರ್‌ ಬಳಿ ಜನಸ್ತೋಮ
ನೀರಾನೆ ವೀಕ್ಷಿಸುತ್ತಿರುವ ಪ್ರವಾಸಿಗರು
ಬನ್ನೇರುಘಟ್ಟದಲ್ಲಿ ಪ್ರವಾಸಿಗರು ಫೋಟೋ ತೆಗೆದುಕೊಳ್ಳುವುದರಲ್ಲಿ ನಿರತರಾಗಿರುವುದು
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಮರಿ ಆನೆಗಳ ಚಿನ್ನಾಟ
ಉದ್ಯಾನದಲ್ಲಿ ನೀರಾನೆಗಳ ಆಟ

ದಾಖಲೆ ಪ್ರವಾಸಿಗರ ಭೇಟಿ

ಉದ್ಯಾನಕ್ಕೆ 24849 ಮತ್ತು ಪ್ರಾಣಿ ಸಂಗ್ರಹಾಲಯಕ್ಕೆ 18032 ಮಂದಿ ಭೇಟಿ ನೀಡಿದ್ದಾರೆ. 6817 ಮಂದಿ ಪ್ರಾಣಿ ಸಂಗ್ರಹಾಲಯ ಮತ್ತು ಸಫಾರಿ ಎರಡಕ್ಕೂ ಭೇಟಿ ನೀಡಿದ್ದಾರೆ.  ಹೊಸ ವರ್ಷದ ಹಿನ್ನೆಲೆಯಲ್ಲಿ ರಜೆ ದಿನವಾದ ಮಂಗಳವಾರ ಸಹ ಉದ್ಯಾನದ ಕಾರ್ಯನಿರ್ವಹಿಸಿತ್ತು. ಮಂಗಳವಾರ 4130 ಮಂದಿ ಪ್ರವಾಸಿಗರು ಉದ್ಯಾನಕ್ಕೆ ಭೇಟಿ ನೀಡಿದರು. ₹1268830 ಸಂಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.