ADVERTISEMENT

ದೊಡ್ಡಬಳ್ಳಾಪುರ: ಅರ್ಹರಿಗೆ ನಿವೇಶನ ನೀಡಲು ಒತ್ತಾಯ

ಬಚ್ಚಹಳ್ಳಿ ಗ್ರಾಮದ ದಲಿತ ಸಮುದಾಯದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 4:30 IST
Last Updated 14 ಆಗಸ್ಟ್ 2025, 4:30 IST
ಆಶ್ರಯ ಯೋಜನೆಯ ನಿವೇಶನಗಳನ್ನು ಅರ್ಹರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಮುಂದೆ ಬಚ್ಚಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು 
ಆಶ್ರಯ ಯೋಜನೆಯ ನಿವೇಶನಗಳನ್ನು ಅರ್ಹರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ ದೊಡ್ಡಬಳ್ಳಾಪುರ ತಾಲ್ಲೂಕು ಪಂಚಾಯಿತಿ ಮುಂದೆ ಬಚ್ಚಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು    

ದೊಡ್ಡಬಳ್ಳಾಪುರ: ಬಡವರಿಗೆ ಹಂಚಬೇಕಾದ ನಿವೇಶನಗಳು ಉಳ್ಳವರ ಪಾಲಾಗುತ್ತಿವೆ. ಇದನ್ನು ತಪ್ಪಿಸಿ ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನ ಹಂಚಬೇಕು ಎಂದು ಒತ್ತಾಯಿಸಿ ಬಚ್ಚಹಳ್ಳಿ ಗ್ರಾಮದ ದಲಿತ ಸಮುದಾಯದ ಜನರು ತಾಲ್ಲೂಕು ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು. 

ಹೋರಾಟದ ಫಲವಾಗಿ ಆಶ್ರಯ ಯೋಜನೆ ಅಡಿ ನಿವೇಶನಗಳ ಹಂಚಿಕೆಗಾಗಿ ಐದು ಎಕರೆ ಜಮೀನು ಮಂಜೂರಾಗಿದೆ. ಆದರೆ, ಇದನ್ನು ಈಗಾಗಲೇ ಜಮೀನು ಇರುವವರೇ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು. 

ದಲಿತ ಮುಖಂಡ ಬಚ್ಚಹಳ್ಳಿ ನಾಗರಾಜು ಮಾತನಾಡಿ, ‘ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಚ್ಚಹಳ್ಳಿ ಗ್ರಾಮದ ಸರ್ವೆ ನಂಬರ್ 10ರಲ್ಲಿ ನಿವೇಶನಗಳ ಹಂಚಿಕೆಗಾಗಿ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಫಲಾನುಭವಿಗಳ ಪಟ್ಟಿಯಲ್ಲಿ ಇರುವ ಬಹುತೇಕರು ನಾಲ್ಕಾರು ಎಕರೆ ಜಮೀನು ಇರುವ ಶ್ರೀಮಂತರೇ ಅಗಿದ್ದಾರೆ. ನಿವೇಶನ ರಹಿತರಿಗೆ ಸಿಗಬೇಕಾದ ನಿವೇಶನಗಳನ್ನು ಕಬಳಿಸಲು ಶ್ರೀಮಂತರ ತಂಡ ಸಂಚು ನಡೆಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

ನಿವೇಶನಕ್ಕಾಗಿ ಹೋರಾಟ ಮಾಡಿದ ಬಡವರನ್ನು ಫಲಾನುಭವಿಗಳ ಪಟ್ಟಿಗೆ ಸೇರಿಸದೆ ಸಂಚು ನಡೆಸಲಾಗಿದೆ. ನಿವೇಶನ ಹಂಚಿಕೆಗೆ ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಒಳಗೊಂಡ ಸಮಿತಿ ರಚಿಸಬೇಕು. ಆ ಸಮಿತಿಯು ನಮ್ಮ ಗ್ರಾಮದ ಪ್ರತಿ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಪ್ರತಿ ಕುಟುಂಬದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ತಿಳಿದು, ನೈಜ ಫಲಾನುಭವಿಗಳನ್ನು ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಬಚ್ಚಹಳ್ಳಿ ನಿವಾಸಿ ಆನಂದಮ್ಮ ಮಾತನಾಡಿ, ‘40 ವರ್ಷಗಳ ಹಿಂದೆ ಹಂಚಿಕೆ ಮಾಡಲಾದ ನಿವೇಶನದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಒಂದೊಂದು ಕುಟುಂಬಗಳಲ್ಲಿ ನಾಲ್ಕೈದು ಮಕ್ಕಳಿದ್ದಾರೆ. ಒಂದೇ ನಿವೇಶನವನ್ನು ನಾಲ್ಕೈದು ಭಾಗ ಮಾಡಿಕೊಂಡು 10 ಅಡಿ ಅಳತೆಯ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ಇದರಲ್ಲೇ ಹಸು, ಕೋಳಿ ಸಾಕಿಕೊಂಡು ಜೀವನ ಮಾಡುತ್ತಿದ್ದೇವೆ. ಬಡವರಿಗೆ ನಿವೇಶನ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದ್ದಾಗಿ’ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಪರಮೇಶ್, ಮಂಜುಳಮ್ಮ, ಗೀತಾ ಬಾಯಿ, ಮಾಜಿ ಉಪಾಧ್ಯಕ್ಷ ಶ್ರೀನಿವಾಸ, ರೈತ ಸಂಘದ ಮುಖಂಡ ಸತೀಶ್ ಗೊಲ್ಲಹಳ್ಳಿ, ಮುನಿಯಪ್ಪ, ಹರೀಶ್ ನಾಯ್ಕ, ಮಂಜುನಾಯ್ಕ, ಹನುಮಂತೇಗೌಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.