
ಆನೇಕಲ್ ತಾಲ್ಲೂಕಿನ ಚಂದಾಪುರ ಸೂರ್ಯಸಿಟಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶಾಸಕ ಬಿ.ಶಿವಣ್ಣ ಮಾತನಾಡಿದರು
ಆನೇಕಲ್: ಚಂದಾಪುರ ಮುಖ್ಯ ರಸ್ತೆಯ ಅಭಿವೃದ್ಧಿಗಾಗಿ 20 ಕೋಟಿ ರೂ ಮೀಸಲಿಡಲಾಗಿದೆ. ಭಾರಿ ಮಳೆ ಮತ್ತು ಯುಜಿಡಿ ಕಾಮಗಾರಿ ಪ್ರಗತಿಯಲ್ಲಿ ಇರುವುದರಿಂದ ರಸ್ತೆ ಕೆಲಸ ಕುಂಠಿತವಾಗಿ ಸಾಗುತ್ತಿದೆ. ಮಳೆ ನಿಂತ ತಕ್ಷಣ ಚಂದಾಪುರ ಆನೇಕಲ್ ರಸ್ತೆಗೆ ಡಾಂಬರು ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದು ಶಾಸಕ ಬಿ.ಶಿವಣ್ಣ ಹೇಳಿದರು.
ವಿನಾಕಾರಣ ಬಿಜೆಪಿ ಪಕ್ಷದವರು ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಆರೋಪ ಮಾಡುತ್ತಿರುವುದು ಖಂಡನೀಯ. ವಿರೋಧ ಪಕ್ಷಗಳು ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಕೋರಿದರು.
2013, 2018, 2023ರಲ್ಲಿ ಆನೇಕಲ್ ವಿಧಾನಸಭೆ ಕ್ಷೇತ್ರದಿಂದ ಜನಸೇವೆಗಾಗಿ ಜನರು ಅವಕಾಶ ಕಲ್ಪಿಸಿದ್ದಾರೆ. ಮೊದಲ ಬಾರಿ ಶಾಸಕರಾದ ಅವಧಿಯಲ್ಲಿ ಆನೇಕಲ್ ತಾಲೂಕಿನ ಹಲವಾರು ರಸ್ತೆಗಳು ಹದಗೆಟ್ಟಿದ್ದವು. ಸರ್ಕಾರದ ವಿವಿಧ ಅನುದಾನ ಸದ್ಬಳಕೆ ಮಾಡಿಕೊಂಡು ತಾಲೂಕಿನ ಎಲ್ಲಾ ರಸ್ತೆಗಳನ್ನು ದ್ವಿಪಥವಾಗಿ ಅಭಿವೃದ್ಧಿ ಮಾಡಲಾಗಿದೆ ಎಂದರು.
ಎರಡನೇ ಅವಧಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್ ಶಾಸಕರಿಗೆ ಮಲತಾಯಿ ಧೋರಣೆ ಮಾಡಿತು ಅನುದಾನದಲ್ಲಿ ತಾರತಮ್ಯ ಮಾಡಿದ್ದರಿಂದ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳು ಕುಂಠಿತವಾದುವು. ಮೂರನೇ ಬಾರಿ ಶಾಸಕರಾದಾಗ ಕಾಂಗ್ರೆಸ್ ಸರ್ಕಾರ ನಿಚ್ಚಳ ಬಹುಮತ ಬಂದಿದ್ದರಿಂದ ಹೆಚ್ಚಿನ ಅಭಿವೃದ್ಧಿ ಮಾಡಲು ಸರ್ಕಾರದ ವಿವಿಧ ಇಲಾಖೆಗಳಿಗೆ ಕೋರಲಾಗಿದೆ ಎಂದರು.
ಇತ್ತೀಚಿಗೆ ಆನೇಕಲ್ ತಾಲೂಕಿನಾದ್ಯಂತ ಭಾರಿ ಮಳೆಯಾಗಿದ್ದು ರಸ್ತೆಗಳು ಹದಗೆಟ್ಟಿದೆ. ತಾಲೂಕಿನ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನದ ನೆರವು ಕೋರಲಾಗಿದೆ.ಬಿ. ಶಿವಣ್ಣ ಶಾಸಕ
₹50 ಕೋಟಿ ಅನುದಾನ ಮಂಜೂರು
ರಸ್ತೆಗಳ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು ₹50 ಕೋಟಿ ಅನುದಾನ ನೀಡಲಿದ್ದು ಶೀಘ್ರದಲ್ಲಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಗ್ರಾಮೀಣ ಅಭಿವೃದ್ಧಿ ಇಲಾಖೆಯಿಂದ ಪ್ರಗತಿಪಥ ಯೋಜನೆ ಅಡಿ 30 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ಯೋಜನೆ ದೊರತಿದೆ. ಹೆಚ್ಚುವರಿಯಾಗಿ 40 ಕಿ.ಮೀ ಮೀಟರ್ ನೀಡುವಂತೆ ಗ್ರಾಮೀಣಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.