ADVERTISEMENT

ರಸ್ತೆಗಾಗಿ ಅಹೋರಾತ್ರಿ ಧರಣಿ ಆರಂಭ

ಮೂರು ಕಿ.ಮೀ ವರೆಗೆ ವಾಹನ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 6:30 IST
Last Updated 6 ಫೆಬ್ರುವರಿ 2026, 6:30 IST
ಆನೇಕಲ್ ತಾಲ್ಲೂಕಿನ ಸಿದ್ದನಪಾಳ್ಯ, ಚಿನ್ನಯ್ಯನಪಾಳ್ಯ ಸಂಪರ್ಕ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಕಾರ್ಮಿಕ ಒಕ್ಕೂಟದ ಪದಾಧಿಕಾರಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು
ಆನೇಕಲ್ ತಾಲ್ಲೂಕಿನ ಸಿದ್ದನಪಾಳ್ಯ, ಚಿನ್ನಯ್ಯನಪಾಳ್ಯ ಸಂಪರ್ಕ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಕಾರ್ಮಿಕ ಒಕ್ಕೂಟದ ಪದಾಧಿಕಾರಿಗಳು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು   

ಆನೇಕಲ್: ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದನಪಾಳ್ಯ, ಚಿನ್ನಯ್ಯನಪಾಳ್ಯ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಕಾರ್ಮಿಕ ಒಕ್ಕೂಟ ಹಾಗೂ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ ನೇತೃತ್ವದಲ್ಲಿ ಸ್ಥಳೀಯರು ಗುರುವಾರ ಅಹೋರಾತ್ರಿ ಧರಣಿ ಆರಂಭಿಸಿವೆ.

ಹದಗೆಟ್ಟದ ರಸ್ತೆಯ ಒಂದು ತುದಿಯಲ್ಲಿ ಕನ್ನಡ ಸಂಘಟನೆಗಳ ಕಾರ್ಮಿಕ ಒಕ್ಕೂಟದಿಂದ ಮತ್ತು ಮತ್ತೊಂದು ತುದಿಯಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯಿಂದ ಶಾಮೀಯಾನ ಹಾಕಿ, ರಸ್ತೆ ತಡೆದು ಅಹೋರಾತ್ರಿ ಪ್ರತಿಭಟನೆಗೆ ಆರಂಭಿಸಿದರು. ಧರಣಿಯಿಂದ ಮೂರು ಕಿ.ಮೀ.ವರೆಗೂ ಲಾರಿಗಳು, ಟಿಪ್ಪರ್‌ಗಳು ನಿಂತಿದ್ದ ದೃಶ್ಯ ಕಂಡು ಬಂದಿತು.

ರಸ್ತೆ ಹದಗೆಟ್ಟು ಹಲವು ವರ್ಷಗಳು ಕಳೆದಿದ್ದರೂ ದುರಸ್ತಿ ಮಾಡಿಸಿಲ್ಲ. ಹಲವು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿದರೂ ಉಪಯೋಗವಾಗುತ್ತಿಲ್ಲ. ಹಾಗಾಗಿ ಅಹೋರಾತ್ರಿಯ ಪ್ರತಿಭಟನೆ ಮೊರೆ ಹೋಗಲಾಗಿದೆ. ನಿತ್ಯ ಈ ರಸ್ತೆಯಲ್ಲಿ 500-600 ಲಾರಿಗಳು ಸಂಚರಿಸುತ್ತವೆ. ಕೈಗಾರಿಕೆಗಳಿವೆ, ಕ್ರಷರ್‌ಗಳಿವೆ. ಧೂಳಿನಿಂದ ಈ ರಸ್ತೆಯಲ್ಲಿ ಓಡಾಡಲು ಕಷ್ಟವಾಗುತ್ತಿದೆ. ರಸ್ತೆ ಅಭಿವೃದ್ಧಿ ಪಡಿಸಬೇಕೆಂದು ನೂರಾರು ಮನವಿಗೆ ಸ್ಪಂದನೆ ಸಿಗದ ಕಾರಣ ಅಹೋರಾತ್ರಿ ಧರಣಿ ಆರಂಭಿಸಿದ್ದೇವೆ. ರಸ್ತೆ ಕಾಮಗಾರಿ ಆರಂಭಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಕನ್ನಡ ಸಂಘಟನೆಗಳ ಕಾರ್ಮಿಕ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಕನ್ನಡಾಂಬೆ ಮಂಜು ತಿಳಿಸಿದರು.

ADVERTISEMENT

ರಸ್ತೆ ಹದಗೆಟ್ಟಿರುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಸ್ಥಳೀಯರ ಆರೋಗ್ಯ ಕಾಪಾಡಲು ರಸ್ತೆ ಅಭಿವೃದ್ಧಿ ಪಡಿಸಬೇಕು. ಸ್ಥಳೀಯ ಕೈಗಾರಿಕೆಗಳು, ಕ್ರಷರ್‌ ಮಾಲೀಕರು ಒಗ್ಗೂಡಿ ರಸ್ತೆ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಸಂಘಟನೆಯ ಮುಖ್ಯಸ್ಥ ಬುಲೆಟ್‌ ಬಾಬು ಆಗ್ರಹಿಸಿದರು.

ಈ ಭಾಗದ ವಿದ್ಯಾರ್ಥಿಗಳಿಗೆ, ಯುವಕರಿಗೆ ಮತ್ತು ಉದ್ಯೋಗಕ್ಕೆ ಹೋಗುವವರಿಗೆ ರಸ್ತೆ ಹದಗೆಟ್ಟಿರುವುದರಿಂದ ಸಮಸ್ಯೆಯಾಗಿದೆ. ಬೀದಿ ದೀಪಗಳಿಲ್ಲದೇ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಬೀದಿ ದೀಪಗಳನ್ನು ಅಳವಡಿಸಬೇಕೆಂದು ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ ಆಗ್ರಹಿಸಿದರು.

ಬಿಎಸ್‌ಪಿ ಪಕ್ಷದ ರಾಜ್ಯ ಸಂಯೋಜಕ ನಾಗರಾಜು, ಮುಖಂಡರಾದ ಸುನೀತಾ ಬಾಯಿ, ಯಲ್ಲಪ್ಪ, ಮದ್ದೂರಪ್ಪ, ರವಿ, ದೇವರಾಜು ಇದ್ದರು.

ಆನೇಕಲ್ ತಾಲ್ಲೂಕಿನ ಸಿದ್ದನಪಾಳ್ಯ ಚಿನ್ನಯ್ಯನಪಾಳ್ಯ ಸಂಪರ್ಕ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯಿಂದ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದರು

ಧೂಳಿನಿಂದ ಹೆಚ್ಚಾದ ಮಾರಕ ಕಾಯಿಲೆಗಳು

ಪ್ರತಿ ನಿಮಿಷಕ್ಕೆ 2 ಲಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ರಸ್ತೆ ಅಭಿವೃದ್ಧಿಗಾಗಿ 10ಕ್ಕೂ ಹೆಚ್ಚು ಬಾರಿ ಪ್ರತಿಭಟನೆ ನಡೆಸಲಾಗಿದೆ. ಪೊಲೀಸರು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಸೂಚಿಸುತ್ತೇವೆ ಎಂದು ಭರವಸೆ ನೀಡಿದ್ದರೂ ಯಾವುದೇ ಉಪಯೋಗವಾಗಿಲ್ಲ.

ಧೂಳಿನಿಂದಾಗಿ ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ಜನರಿಗೆ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ ಎಂದು ಸಂಘಟನೆಯ ಮುಖ್ಯಸ್ಥ ಗೌತಮ್‌ ವೆಂಕಿ ದೂರಿದರು. ಕಣ್ಣಿನ ಪೊರೆಯ ಸಮಸ್ಯೆಗಳು ಹೆಚ್ಚಾಗಿವೆ. 20-30 ಟನ್‌ ಲಾರಿಗಳೇ ಹೆಚ್ಚು ಓಡಾಡುತ್ತವೆ. ಹಾಗಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು. ಈ ಭಾಗದಲ್ಲಿ ದಲಿತರೇ ಹೆಚ್ಚಾಗಿದ್ದಾರೆ.

ದಲಿತರ ಮೇಲಿನ ತಾರತಮ್ಯ ಹೋಗಲಾಡಿಸಲು ಅವಶ್ಯಕ ಮೂಲಸೌಲಭ್ಯ ಕಲ್ಪಿಸಬೇಕು ಎಂದರು. ಈ ರಸ್ತೆಯು ಸಿದ್ದನಪಾಳ್ಯ ಚಿನ್ನಯ್ಯನಪಾಳ್ಯ ಕರಕಲಘಟ್ಟ ಚೂಡಹಳ್ಳಿ ಅರೇಹಳ್ಳಿ ಚಿಕ್ಕನಹಳ್ಳಿ ಚಿಕ್ಕಹೊಸಹಳ್ಳಿಗೆ ಸಂಪರ್ಕ ರಸ್ತೆಯಾಗಿದೆ. ಹಾಗಾಗಿ ಅಭಿವೃದ್ಧಿ ಪಡಿಸಬೇಕು ಎಂದರು. ಮುಖಂಡರಾದ ಬ್ಯಾಟರಾಜು ಯಡವನಹಳ್ಳಿ ಕೃಷ್ಣಪ್ಪ ಚೇತನ್‌ಕುಮಾರ್‌ ಪುರುಷೋತ್ತಮ್‌ ಸಿದ್ದನಪಾಳ್ಯ ಚಿನ್ನಯ್ಯನಪಾಳ್ಯದ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.