ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ರೈತರು ಮತ್ತು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯೂ ತಾಲ್ಲೂಕಿನ ಮುತ್ತಾನಲ್ಲೂರಿನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾಧಿ ಧರಣಿ ಸೋಮವಾರ 20 ಪೂರೈಸಿದ್ದು, ಹೋರಾಟಕ್ಕೆ ಕನ್ನಡಪರ ಮತ್ತು ದಲಿತ ಪರ ಸಂಘಟನೆಗಳು ಬೆಂಬಲ ಸೂಚಿಸಿದವು.
ಭೂ ಸ್ವಾಧೀನ ವಿರೋಧಿ ಹೋರಾಟ ದಿನೇ ದಿನೇ ಕಾವು ಪಡೆಯುತ್ತಿದ್ದು, ವಿವಿಧ ಗ್ರಾಮಗಳ ರೈತರು ಮುತ್ತಾನಲ್ಲೂರಿಗೆ ಆಗಮಿಸಿ ಪ್ರತಿಭಟನೆಗೆ ಬೆಂಬಲ ಸೂಚಿಸುತ್ತಿದ್ದಾರೆ. ತುಂತುರು ಮಳೆಯ ನಡುವೆಯೂ ಹೋರಾಟಗಾರರು ಪ್ರತಿಭಟನೆ ನಡೆಸಿದರು. ‘ಪ್ರಾಣ ಕೊಟ್ಟಿವು ಭೂಮಿ ಕೊಡೆವು’, ‘ನಮ್ಮ ಭೂಮಿ ನಮ್ಮ ಹಕ್ಕು, ನಮ್ಮ ಅಸ್ತಿತ್ವ’ ಎಂಬಿತ್ಯಾದಿ ಘೋಷಣೆ ಕೂಗಿದರು.
ಕನ್ನಡ ಜಾಗೃತಿ ವೇದಿಕೆಯ ಯುವ ಘಟಕದ ರಾಜ್ಯ ಅಧ್ಯಕ್ಷ ಗೌರೀಶ್, ಕೆಐಎಡಿಬಿ ಇಲ್ಲಿನ ಕೃಷಿ ಭೂಮಿ ಮೇಲೆ ಕಣ್ಣು ಹಾಕಿದೆ. ಇಲ್ಲಿ ರೈತರು ಕೃಷಿ ನಂಬಿ ಜೀವನ ನಡೆಸುತ್ತಿದ್ದಾರೆ. ಏಕಾಏಕಿ ಭೂ ಸ್ವಾಧೀನದಿಂದ ರೈತರ ಬದುಕು ಕಷ್ಟವಾಗುತ್ತದೆ. ಚನ್ನರಾಯಪಟ್ಟಣ ಭೂ ಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಳಿಸಿದಂತೆ ಸರ್ಕಾರವು ಸರ್ಜಾಪುರ ಭೂ ಸ್ವಾಧೀನ ಪ್ರಕ್ರಿಯೆಯನ್ನು ಸಹ ಕೈ ಬಿಡಲಿದೆ ಎಂಬ ವಿಶ್ವಾಸವಿದೆ ಎಂದರು.
ಕನ್ನಡ ನೆಲ ಜಲ ನಾಡು ನುಡಿ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಸದಾ ಹೋರಾಟ ನಡೆಸುತ್ತದೆ. ರೈತ ಹೋರಾಟಗಳಿಗೆ ಬೆಂಬಲ ನೀಡುವ ಸಲುವಾಗಿ ಕನ್ನಡ ಜಾಗೃತಿ ವೇದಿಕೆಯಿಂದ ಬೆಂಬಲ ಘೋಷಿಸಲಾಗಿದೆ ಎಂದರು.
ಜೈ ಭೀಮ್ ಜನಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಚಿನ್ನಪ್ಪ ಚಿಕ್ಕಹಾಗಡ, ಸರ್ಕಾರ ಬರಡು ಭೂಮಿ ಬಿಟ್ಟು ಕೃಷಿ ಭೂಮಿಯಲ್ಲಿ ಕೈಗಾರಿಕೆ ತೆರೆಯಲು ಚಿಂತನೆ ನಡೆಸಿರುವುದು ಖಂಡನೀಯ. ರೈತರ ಭೂಮಿಗಳಲ್ಲಿ ಕೃಷಿ ಅಥವಾ ರಿಯಲ್ ಎಸ್ಟೇಟ್ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಜಯಪ್ರಕಾಶ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಮುತ್ತಾನಲ್ಲೂರು ಗ್ರಾಮದ ಪಕ್ಕದ ಹಳ್ಳಿಗೆ ಭೇಟಿ ನೀಡಿದ್ದರು ಸಹ ರೈತರ ಹೋರಾಟದತ್ತ ಮುಖ ಮಾಡಲಿಲ್ಲ. ಸರ್ಕಾರ ಮತ್ತು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರಿಗೆ ಕೈಗಾರಿಕೆ ಮಾಡಲು ನಮ್ಮ ಕೃಷಿ ಭೂಮಿ ಬೇಕು. ಆದರೆ ನಮ್ಮ ಕಷ್ಟಗಳಿಗೆ ಸ್ಪಂದಿಸುವ ಗುಣ ಅವರಿಗೆ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಹೋರಾಟದ ಕಿಚ್ಚು ದಿನೇ ದಿನೇ ಹೆಚ್ಚಾಗುತ್ತಿದೆ. ಭೂಸ್ವಾಧೀನ ವಿರೋಧಿ ಹೋರಾಟವು ಸರ್ಜಾಪುರ ಭಾಗದ ರೈತರನ್ನು ಒಗ್ಗೂಡಿಸಿದೆ ಎಂದರು.
ರೈತ ಮುಖಂಡ ಚಂದ್ರರೆಡ್ಡಿ, ತಾಲ್ಲೂಕು ಆಡಳಿತ ಕೃಷಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯಿಂದ ಸರ್ಜಾಪುರ ಹೋಬಳಿಯ ಭೂಮಿಯ ಫಲವತ್ತತೆಯ ಬಗ್ಗೆ ವರದಿ ಮಾಡಿಸಬೇಕು. ವರದಿಯನ್ನು ರೈತರಿಗೆ ಮತ್ತು ಸರ್ಕಾರಕ್ಕೆ ತಲುಪಿಸಬೇಕು. ವರದಿಯನ್ನಾದರಿಸಿ ಮುಂದಿನ ದಿನಗಳಲ್ಲಿ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು
ಹೋರಾಟಗಾರರು ಪ್ರತಿಭಟನೆ ನಡೆಸಿ ಮುತ್ತಣ್ಣವರಿಗೆ ಆಗಮಿಸಿದ್ದ ತಹಶೀಲ್ದಾರ್ ಶಶಿಧರ್ ಮದಿಯಾಳ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ ದೇವ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಆದೂರು ಪ್ರಕಾಶ್, ಮುಖಂಡರಾದ ರವಿ, ಜಯರಾಮ್ ಸರ್ಜಾ, ರಾವಣ, ರೈತ ಮುಖಂಡರಾದ ಮಂಜುನಾಥ್, ವಿಶ್ವನಾಥ ರೆಡ್ಡಿ, ಪುಷ್ಪಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತೇಜಸ್ವಿನಿ ಇದ್ದರು.
267 ಎಕರೆಯಲ್ಲಿ ರೇಷ್ಮೆ ಕೃಷಿ
ಸರ್ಜಾಪುರ ಹೋಬಳಿಯಲ್ಲಿ 267 ಎಕರೆಯಲ್ಲಿ ರೇಷ್ಮೆ ಕೃಷಿ ಮಾಡಲಾಗುತ್ತದೆ. ಈ ಭಾಗದಲ್ಲಿ ಸುಮಾರು 11 ಕೋಟಿ ರೇಷ್ಮೆ ಹುಳುಗಳ ಮೊಟ್ಟೆಯನ್ನು ಉತ್ಪಾದನೆ ಮಾಡಲಾಗುತ್ತದೆ. ಹೂ ಹಣ್ಣು ಸೇರಿದಂತೆ ತೋಟಗಾರಿಕಾ ಬೆಳೆಗಳು ಸಹ ಹೆಚ್ಚಾಗಿದೆ. ಇಂತಹ ಕೃಷಿ ಭೂಮಿಯನ್ನು ಏಕಾಯಕಿ ಕೈಗಾರಿಕೆಗಳಿಗೆ ನೀಡಲು ಕ್ರಮ ವಹಿಸುತ್ತಿರುವುದು ಖಂಡನೀಯ. ಸರ್ಕಾರ ಸರ್ವಾಧಿಕಾರಿ ಧೋರಣೆ ತೋರಿದರೆ ರೈತರು ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ರೈತ ಮುಖಂಡ ಚಂದ್ರರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಹಣ್ಣು–ತರಕಾರಿ ಧಾನ್ಯ ಸಿಗುವುದಿಲ್ಲ ಸರ್ಜಾಪುರ ಭಾಗದ ಭೂಮಿ ಉತ್ತಮ ಫಲವತ್ತಾದ ಭೂಮಿಯಾಗಿದೆ. ಮೂರು ಬೆಳೆಗಳನ್ನು ಬೆಳೆಯಲು ಈ ಮಣ್ಣು ಸೂಕ್ತವಾಗಿದೆ ಎಂದು ತೋಟಗಾರಿಕೆ ಇಲಾಖೆಯ ವರದಿ ಎಂದು ತಿಳಿಸಿದೆ. ಇಂತಹ ಕೃಷಿ ಭೂಮಿಗಳನ್ನು ಕೈಗಾರಿಕೆಗಳ ನೀಡುವುದರಿಂದ ಮುಂದಿನ ದಿನಗಳಲ್ಲಿ ಹಣ್ಣು ತರಕಾರಿ ಮತ್ತು ಧಾನ್ಯಗಳು ದೊರೆಯುವುದಿಲ್ಲ ಎಂದು ಹೋರಾಟಗಾರ ಜಯಪ್ರಕಾಶ್ ತಿಳಿಸಿದರು.
ಆನೇಕಲ್: ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿಯ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಯ 19 ಮಂದಿ ಸದಸ್ಯರು ಬೆಂಬಲ ಘೋಷಿಸಿದ್ದಾರೆ. ಸೋಮವಾರ ನಡೆದ ಪ್ರತಿಭಟನೆಯಲ್ಲಿ ಸದಸ್ಯರು ಪಾಲ್ಗೊಂಡು ರೈತರಿಗೆ ಬಲ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯ ಗೌರೀಶ್ ಮಾತನಾಡಿ ರೈತರ ಹೋರಾಟ ನಮ್ಮೆಲ್ಲರ ಹೋರಾಟವಾಗಿದೆ. ಅನ್ನ ನೀಡುವ ರೈತರಿಗೆ ಸಂಕಷ್ಟ ಬಂದಾಗ ಸ್ಪಂದಿಸಬೇಕಾದುದ್ದು ಸಮಾಜದ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಯ 19 ಮಂದಿ ಸದಸ್ಯರು ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ಶಾಂತಿಯ ಹೋರಾಟ ಮುಗಿದಿದೆ. ಈಗ ಕೆಚ್ಚಿನ ಹೋರಾಟ ಮಾಡಬೇಕು. ರೈತರ ಹೋರಾಟ ಗೆಲ್ಲುವವರೆಗೂ ನಮ್ಮ ಪ್ರತಿಭಟನೆ ನಿರಂತರಾವಗಲಿದೆ. ಸರ್ಕಾರ ಕಣ್ಣು ತೆಗೆಸುವುದೇ ನಮ್ಮ ಗುರಿ. ರೈತರ ಕೆಚ್ಚೆದೆಯ ಹೋರಾಟವನ್ನು ಸರ್ಕಾರ ನೋಡಲಿದೆ– ಚಂದ್ರಾರೆಡ್ಡಿ, ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.